ಕರ್ನಾಟಕ

ನನ್‌ ಮೈನೇ ಬಗ್ಗುತ್ತಿಲ್ಲ; ಇನ್ನು ‘ಕೈ’ಯಾಂಗ ಬಗ್ಗಿಸ್ಲಿ

Pinterest LinkedIn Tumblr

vidanasoudaಬೆಂಗಳೂರು: ಒಬ್ಬರದು ವೇಗವಾದ ನಡಿಗೆ, ಮತ್ತೊಬ್ಬರದು ಕಸರತ್ತು, ಓಟ, ಮಗದೊಬ್ಬರು ಯೋಗಾಭ್ಯಾಸ, ಇದಾವುದನ್ನೂ ಮಾಡಲಾಗದ ಆನೆ ಗಾತ್ರದ ದೇಹ ಹೊಂದಿದವರದ್ದು ಆಮೆ ನಡಿಗೆ… ಇದು ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಧರಣಿ ನಿರತರಾಗಿದ್ದ ಶಾಸಕರು, ಸಚಿವರು ವಾಯು ವಿಹಾರ ನಡೆಸಿದ ಪರಿ.

ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಹೋರಾಟ ಮುಂದುವರಿಸಿವೆ. ಗುರುವಾರ ಎರಡನೇ ದಿನ ಅಹೋರಾತ್ರಿ ಧರಣಿ ನಡೆಸಿದ ವಿರೋಧ ಪಕ್ಷಗಳ ಸದಸ್ಯರು ಬೆಳಿಗ್ಗೆ ವಿಧಾನಸೌಧದ ಆವರಣದಲ್ಲಿ ವ್ಯಾಯಾಮ, ವಾಯುವಿಹಾರ, ಯೋಗಾಭ್ಯಾಸ ನಡೆಸಿದರು.

ಬಿಜೆಪಿಯ ಕೆ.ಎಸ್‌. ಈಶ್ವರಪ್ಪ, ಜಗದೀಶ ಶೆಟ್ಟರ್‌, ಸಿಟಿ ರವಿ, ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಇತರ ಶಾಸಕರು, ಸಚಿವರು ವಿಧಾನಸೌಧದ ಮುಂದೆ ಸಾಮೂಹಿಕವಾಗಿ ವ್ಯಾಯಾಮ ಅಭ್ಯಾಸ ನಡೆಸಿದರು.

ನಿತ್ಯ ವಾಯಾಮ, ಕಸರತ್ತು ಮಾಡಿ ಅಭ್ಯಾಸವಿದ್ದವರು ಬಿರುಸಾಗಿ ವ್ಯಾಯಾಮದಲ್ಲಿ ತೊಡಗಿದ್ದರೆ ಇನ್ನು ಡೊಳ್ಳೊಟ್ಟೆಯವರು ಕೈ, ಕಾಲು ಆಡಿಸುವಲ್ಲೇ ಸುಸ್ತಾದಂತಿದ್ದರು. ನನ್ನ ಮೈ ಬಗ್ಗುತ್ತಿಲ್ಲ ಕಣ್ರೀ… ಹೊಟ್ಟೆ ಅಡ್ಡಬರುತ್ತಿದೆ… ಇನ್ನು ಹೇಗೆ ಮುಂದೆ ಬಾಗಿ ಕೈಗಳನ್ನು ನೆಲಕ್ಕೆ ಮುಟ್ಟಿಸಲಿ… ಎಂದು ಧಡೂತಿ ದೇಹದ ಸಚಿವರು ಹಾಸ್ಯದ ಮಾತುಗಳನ್ನು ಹೇಳುತ್ತಲೇ ಅಭ್ಯಾಸ ಮುಂದುವರೆಸಿದ್ದರು. ತಮ್ಮ ಮೈಯನ್ನೇ ಬಾಗಿಸಕೊಳ್ಳಲಾಗದ ಪ್ರತಿನಿಧಿಗಳು ಆಡಳಿತಾರೂಢ ‘ಕೈ’ ಸರ್ಕಾರವನ್ನು ಹೇಗೆ ಬಾಗಿಸುತ್ತಾರೆ? ಎನ್ನುವ ಪ್ರಶ್ನೆ ಕಾಡಿತು..

ವಿಧಾನಸೌಧ ವಿಕಾಸಸೌಧದ ಮಧ್ಯೆ ಧ್ಯಾನಸ್ಥಿತಿಯಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಬಳಿ ಕುಳಿತು ಸಿಟಿ ರವಿ ಸೇರಿದಂತೆ ಹಲವರು ಯೋಗಾಸನ ಹಾಗೂ ಪ್ರಾಣಾಯಾಮ ಅಭ್ಯಾಸ ನಡೆಸಿದರು.

ವಿಹಾರದ ಮಧ್ಯೆ ಸುದ್ದಿ ವಾಹಿನಿಗಳಿಗೆ ’ಭೈಟ್‌’ ಕೊಡುತ್ತಲೇ ಮುನ್ನಡೆದರು. ಇಷ್ಟಕ್ಕೆ ಸುಮ್ಮನಾಗದ ಶಾಸಕರು ಆವರಣಕ್ಕೆ ಹೊಂದಿಕೊಂಡಿರುವ ಅರಳಿ ಮುನೇಶ್ವರ ಸ್ವಾಮಿಗೂ ಕೈಮುಗಿದು ನಮಿಸಿದರು. ಅದೇನೆಂದು ಬೇಡಿಕೊಂಡರೊ ಗೊತ್ತಿಲ್ಲ….

Comments are closed.