ಕರ್ನಾಟಕ

ಆತ್ಮಹತ್ಯೆಗೆ ಪ್ರತಿಪಕ್ಷ ಕಾರಣ, ಕಾಂಗ್ರೆಸ್ ಅಲ್ಲ-ಡಾ. ಜಿ. ಪರಮೇಶ್ವರ್

Pinterest LinkedIn Tumblr

con10A9ಬೆಂಗಳೂರು, ಜು. ೧೦- ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆಗಳಿಗೆ ವಿರೋಧ ಪಕ್ಷಗಳು ಕಾರಣ. ಕಾಂಗ್ರೆಸ್ ಸರ್ಕಾರ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿಂದು ಆಯೋಜಿಸಲಾಗಿದ್ದ ಕೆಪಿಸಿಸಿಯ ನೂತನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಮುಜುಗುರ ತರುವ ಕೆಲಸವನ್ನು ವಿಪಕ್ಷಗಳು ನಡೆಸುತ್ತಿವೆ. ಅವರ ಆಟ ನಡೆಯಲ್ಲ. ಬೇಳೆ ಬೇಯಲ್ಲ ಎಂದು ವಾಗ್ದಾಳಿ ನಡೆಸಿದರು.
ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಅವರ ಕಾಲದಲ್ಲೂ ಅಧಿಕಾರಿಗಳ ಮೇಲೆ ಒತ್ತಡವಿತ್ತು, ಆ ಕಾರಣಕ್ಕೆ ಈಗ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾತ್ರ ಕಾರಣ ಅಲ್ಲ ಎಂದರು.
ಶಿಸ್ತುಕ್ರಮ ಎಚ್ಚರಿಕೆ
ಪಕ್ಷ, ಸರ್ಕಾರ ಹಾಗೂ ಮುಖಂಡರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವ ಪಕ್ಷದ ಹಿರಿಯ ಮುಖಂಡರ ವಿರುದ್ಧ ಶಿಸ್ತುಕ್ರಮಕೈಗೊಳ್ಳುವುದಾಗಿ ಡಾ. ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ಅಸಮಾಧಾನವಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಿ, ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಶಿಸ್ತುಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮುಂದೆ ಸಹ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದರು.
ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ, ಸೂರ್ಯ-ಚಂದ್ರರಿರುವವರೆಗೂ ಕಾಂಗ್ರೆಸ್ ಪಕ್ಷ ಇರುತ್ತದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಆಗಬೇಕಿದೆ. ಪಕ್ಷದ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್‌ರವರು ಜವಾಬ್ದಾರಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ. ಸಚಿವರಾಗಿ ಅವರು ಒಳ್ಳೆಯ ಕೆಲಸ ಮಾಡಿದರು. ಸಂಪುಟದಲ್ಲಿ ಮುಂದುವರೆಯಬೇಕಿತ್ತು. ಪಕ್ಷ ಅವರಿಗೆ ಹೊಸ ಜವಾಬ್ದಾರಿ ನೀಡಿದೆ ಅದರಲ್ಲಿ ಅವರು ಯಶಸ್ವಿಯಾಗಲಿ ಎಂದರು.
ಅಧಿಕಾರ ಸ್ವೀಕಾರ
ಇದೇ ಸಂದರ್ಭದಲ್ಲಿ ನೂತನ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಂದ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನಖರ್ಗೆ, ಸಂಸದ ಕೆ.ಎಚ್ ಮುನಿಯಪ್ಪ, ಹಿರಿಯ ನಾಯಕ ಜಾಫರ್ ಶರೀಫ್, ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್, ಹನುಮಂತರಾವ್ ಸಚಿವರುಗಳಾದ ಜಾರ್ಜ್, ಆರ್.ವಿ. ದೇಶಪಾಂಡೆ, ಡಿ.ಕೆ ಶಿವಕುಮಾರ್, ಡಾ. ಎ.ಎಚ್. ಮಹದೇವಪ್ಪ, ಮಹದೇವಪ್ರಸಾದ್, ಟಿ.ಬಿ ಜಯಚಂದ್ರ, ಮುಖಂಡರಾದ ಸಲೀಂ ಅಹ್ಮದ್, ಮೋಟಮ್ಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ತಾಯಿ ಹಾಜರು
ಪುತ್ರನ ಅಧಿಕಾರ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಳ್ಳಲು ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Comments are closed.