
ನವದೆಹಲಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸಂಪುಟ ಪುನಾರಚನೆಯೊಂದಿಗೆ ಮೋದಿ ಸಂಪುಟದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ 72ಕ್ಕೆ ಏರಿಕೆಯಾಗಿದ್ದರೆ, 24 ಸಚಿವರು ಘೋಷಿತ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. ಕಳೆದ ವಾರ ಪ್ರಧಾನಿ ಮೋದಿಯವರ ಸಂಪುಟ ಪುನಾರಚನೆಯಲ್ಲಿ 19 ನೂತನ ಸಚಿವರಿಗೆ ಅವಕಾಶ ನೀಡಲಾಗಿದ್ದು, ಐವರನ್ನು ಸಂಪುಟದಿಂದ ಕೈಬಿಡಲಾಗಿದೆ. ಇದೀಗ ಒಟ್ಟು ಸಚಿವರ ಸಂಖ್ಯೆ 78ಕ್ಕೆ ಜಂಪ್ ಆಗಿದೆ.
ನೂತನವಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವರ ಸರಾಸರಿ ಆಸ್ತಿ 8.73 ಕೋಟಿ ರೂ.ಗಳಾಗಿವೆ. ಮೋದಿ ಸಂಪುಟದ ಎಲ್ಲ ಸಚಿವರ ಸರಾಸರಿ ಆಸ್ತಿ 12.94 ಕೋಟಿ ರೂ.ಗಳಾಗಿವೆ ಎಂದು ದೆಹಲಿ ಮೂಲದ ಥಿಂಕ್ಟ್ಯಾಂಕ್ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಂಸ್ಥೆ ಅಧ್ಯಯನ ವರದಿಯಲ್ಲಿ ಪ್ರಕಟಿಸಿದೆ.
ನೂತನ ಸಚಿವರಲ್ಲಿ ಮಧ್ಯಪ್ರದೇಶದಿಂದ ಆಯ್ಕೆಯಾದ ಎಂ.ಜೆ.ಅಕ್ಬರ್ 44.90 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದರೆ, ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶಿಸಿದ ಪಿ.ಪಿ.ಚೌಧರಿ 35.35 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ವಿಜಯ್ ಗೋಯಲ್ 29.97 ಕೋಟಿ ರೂ.ಗಳನ್ನು ಘೋಷಿಸಿ ಮೂರನೆ ಸ್ಥಾನ ಪಡೆದಿದ್ದಾರೆ.
ಒಂದು ಕೋಟಿ ಆಸ್ತಿ ಹೊಂದಿದವರ ಸಾಲಿನಲ್ಲಿ ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಪುರುಷೋತ್ತಮ್ ಖೋಡಾಬಾಯಿ ರೂಪಾಲಾ, ಅನುಪ್ರಿಯಾ ಸಿಂಗ್ ಪಟೇಲ್, ಮಹೇಂದ್ರ ನಾಥ್, ಫಗ್ಗನ್ ಸಿಂಗ್ ಕುಲಸ್ತೆ, ರಾಜೆನ್ ಗೋಹೈನ್, ಎಸ್.ಎಸ್.ಆಹ್ಲುವಾಲಿಯಾ, ಅರ್ಜುನ್ ರಾಮ್ ಮೇಘವಾಲ್, ಸಿ.ಆರ್.ಚೌಧರಿ, ಮನಸುಖಭಾಯಿ ಲಕ್ಷ್ಮಣ್ಭಾಯಿ ಮಾಂಡವಿಯಾ ಮತ್ತು ಕೃಷ್ಣರಾಜ್ ಸೇರಿದ್ದಾರೆ.
ಮೋದಿ ಸಂಪುಟದ ಒಟ್ಟು 78 ಸಚಿವರಲ್ಲಿ ಒಂಬತ್ತು ಸಚಿವರು 30 ಕೋಟಿಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅದರಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ(113 ಕೋಟಿ ರೂ.), ಆಹಾರ ಸಂಸ್ಕರಣ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್(108 ಕೋಟಿ ರೂ.) ಮತ್ತು ವಿದ್ಯುತ್ ಖಾತೆ ಸಚಿವ ಪಿಯೂಷ್ ಗೋಯಲ್ ವೇದಪ್ರಕಾಶ್ (95 ಕೋಟಿ ರೂ.) ಆಸ್ತಿ ಘೋಷಿಸಿಕೊಂಡಿದ್ದಾರೆ. ನೂತನವಾಗಿ ಸಚಿವ ಸಂಪುಟಕ್ಕೆ ಸೇರಿದ ಸಚಿವರಲ್ಲಿ ಏಳು ಸಚಿವರು ಕ್ರಿಮಿನಲ್ ಕೇಸ್ಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಇದರಿಂದ ಮೋದಿ ಸಂಪುಟದ 78 ಸಚಿವರಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ಸಚಿವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
Comments are closed.