
ಮಂಗಳೂರು, ಜು.9: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆತ್ಮಹತ್ಯೆಗೂ ಮುನ್ನ ಗಣಪತಿಯವರು ಸುದ್ಧಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿರುವ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಬೇಕು ಮತ್ತು ಆರೋಪವಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವ ಎಲ್ಲರನ್ನು ತನಿಖೆಗೊಳಪಡಿಸಬೇಕು ಎಂದು ಜೆಡಿಎಸ್ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಮುಹಮ್ಮದ್ ಕುಂಞಿ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವಾಲಯ ಗೃಹ ಸಚಿವರ ನಿಯಂತ್ರಣದಲ್ಲಿಲ್ಲ. ಗೃಹ ಇಲಾಖೆ ಆ ಇಲಾಖೆಯ ಸಲಹೆಗಾರ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ನಿಯಂತ್ರಣದಲ್ಲಿದ್ದು, ಗೃಹ ಇಲಾಖೆಯನ್ನು ಕೆಂಪಯ್ಯ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರಿಗೆ ರಕ್ಷಣೆ ಇಲ್ಲದೆ ಇರುವಾಗ ರಾಜ್ಯದ ಜನರಿಗೆ ಪೊಲೀಸರು ರಕ್ಷಣೆ ಕೊಡಲು ಸಾಧ್ಯವಿಲ್ಲ. ರಾಜ್ಯ ಸರಕಾರವನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬೇಕು ಎಂದು ಅವರು ಹೇಳಿದರು.
ದ.ಕ. ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಮತ್ತು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್. ಪಿ. ಚೆಂಗಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಮರಳು ಮಾಫಿಯಾ, ರಿಯಲ್ ಎಸ್ಟೇಟ್ ಮಾಫಿಯಾ, ಲಿಕ್ಕರ್ ಮಾಫಿಯ ಕೆಲಸ ಮಾಡುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡಿವೈಎಸ್ಪಿ ಗಣಪತಿ ಅವರಿಗೆ ಡಿಪ್ರೆಶನ್ ಇರುವುದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್, ಕೆ.ಜೆ. ಜಾರ್ಜ್‌ಗೆ ಡಿಪ್ರೆಶನ್ ಇದೆ ಎಂದು ಹೇಳಿದರು.

ರಾಜ್ಯ ಸರಕಾರ ಗಣಪತಿ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಎಂದು ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಗಣಪತಿ ಸಹೋದರ ಮತ್ತು ತಂದೆಯಿಂದ ಇದೇ ರೀತಿ ಹೇಳಿಕೆ ನೀಡಿಸುತ್ತಿದೆ. ಗಣಪತಿ ಸಹೋದರ ಕೂಡಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವವವರು ಎಂಬುದು ಉಲ್ಲೇಖನೀಯ. ಇನ್ನು ಗೃಹ ಸಚಿವರು ಪೊಲೀಸ್ ಅಧಿಕಾರಿಗಳ ವರ್ಗಾವಣೆಗಳು ನನ್ನ ಗಮನಕ್ಕೆ ಬರುತ್ತಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಗೃಹ ಇಲಾಖೆಯನ್ನು ಸಂಪೂರ್ಣವಾಗಿ ಕೆಂಪಯ್ಯ ತನ್ನ ಹಿಡಿತದಲ್ಲಿದಲ್ಲಿಟ್ಟುಕೊಂಡಿದ್ದಾರೆ ಎಂದು ಚೆಂಗಪ್ಪ ಆರೋಪ ಮಾಡಿದರು.
ಗಣಪತಿ ನನ್ನ ಆತ್ಮೀಯರು. ನಾನು ಮತ್ತು ಅವರು ಒಂದೇ ಊರಿನವರು. ನಾಲ್ಕು ದಿನಗಳ ಹಿಂದೆ ಮಂಗಳೂರು ನ್ಯಾಯಾಲಯದಲ್ಲಿ ಮಾತಿಗೆ ಸಿಕ್ಕಿದಾಗ ತನಗಾಗುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಅವರ ಪತ್ನಿ ಮತ್ತು ಮಕ್ಕಳು ಕೂಡಾ ಇದನ್ನೇ ಹೇಳಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಜೆಡಿಎಸ್ ಉಪಾಧ್ಯಕ್ಷ ಎಂ. ಎಸ್. ನಾಸೀರ್, ಜೆಡಿಎಸ್ ಮುಖಂಡರಾದ ರಾಮ್ ಗಣೇಶ್, ವಸಂತ ಪೂಜಾರಿ, ರತ್ನಾಕರ್ ಸುವರ್ಣ, ಮುನೀರ್ ಮೊದಲಾದವರು ಉಪಸ್ಥಿತರಿದ್ದರು.
Comments are closed.