ಬೆಂಗಳೂರು, ಜು. ೭ – ಸಾರ್ವಜನಿಕ ವಲಯದಲ್ಲಿ ವಿವಾದದ ಅಲೆಗಳನ್ನು ಎಬ್ಬಿಸಿದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಹೆಸರು ಬದಲಿಸಿ ಹೊಸ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮೂಢನಂಬಿಕೆಗಳ ಕಡಿವಾಣಕ್ಕೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆಯ ಹೆಸರನ್ನು ಬದಲಿಸಿ ಹೊಸ ಕಾಯ್ದೆ ರೂಪಿಸಲು ನಿರ್ಧರಿಸಿದೆ.
ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಎಂಬ ಬದಲು ಕರ್ನಾಟಕ ನರಬಲಿ ಮತ್ತು ಇತರೆ ಅಮಾನವೀಯ ದುಷ್ಟ, ಅಘೋರಿ ಪದ್ಧತಿಗಳು ಮತ್ತು ವಾಮಾಚಾರ ಇವುಗಳ ಪ್ರತಿಬಂಧಕ ನಿರ್ಮೂಲನಾ ಕಾಯ್ದೆ ಎನ್ನುವ ಹೆಸರಿನಲ್ಲಿ ವಿಧೇಯಕ ಮಂಡನೆಯಾಗಲಿದೆ.
ಮೂಢನಂಬಿಕೆ ಆಚರಣೆ ಜತೆಗೆ ಹಿಂದಿನಿಂದಲೂ ನಡೆದುಕೊಂಡಿರುವ ಕೆಲವು ಆಚರಣೆಗಳ ಬಗ್ಗೆ ನಿಷೇಧ ಹೇರಲು ಮುಂದಾಗಿರುವ ಸರ್ಕಾರ ಅದನ್ನು ಪ್ರಸಕ್ತ ವಿಧಾನ ಮಂಡಲದ ಅಧಿವೇಶನದಲ್ಲಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಬದಲಿ ಹೆಸರಿನ ಕಾಯ್ದೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ.
ಬದಲಿ ಹೆಸರಿನ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಕರಡನ್ನು ನಾಳಿನ ಸಚಿವ ಸಂಪುಟ ಸಭೆಯಲ್ಲಿ ಪರಾಮರ್ಶೆ ನಡೆಸಲಿದೆ. ಸಚಿವರು ಕೆಲ ಮಾರ್ಪಾಟುಗಳ ಸಲಹೆ ನೀಡಿದರೆ ಅವುಗಳನ್ನು ಸೇರಿಸಿ ಅನುಮೋದನೆ ಪಡೆದು ಪ್ರಸಕ್ತ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸಲು ಸರ್ಕಾರ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ಕಾಯ್ದೆಯಲ್ಲಿ ಬಹು ಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ನೋವು ಆಗದಂತೆ ಪ್ರಸ್ತುತ ಆಚರಣೆಯಲ್ಲಿರುವ ಬಹುತೇಕ ವಿಚಾರಗಳನ್ನು ನಿಷೇಧಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವುದಾಗಿ ಹೇಳಿತ್ತು. ಅದರಂತೆ ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕ ಡಾ. ಜಾಫೆಟ್ ಅವರನ್ನೊಳಗೊಂಡ ತಜ್ಞರ ಸಮಿತಿ ವಿಧೇಯಕದ ಕರಡು ಸಿದ್ಧಪಡಿಸಿತ್ತು. ಈ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ತೀವ್ರ ಚರ್ಚೆ ನಡೆದಿತ್ತು.
ಜಾಫಟ್ ಅವರ ನೇತೃತ್ವದ ತಜ್ಞರ ಸಮಿತಿ ನೀಡಿದ್ದ ಸಲಹೆಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಆಲಿಸಿ ಕಾನೂನು ಇಲಾಖೆ ಕರ್ನಾಟಕ ನರಬಲಿ ಮತ್ತು ಇತರೆ ಅಮಾನವೀಯ ದುಷ್ಟ, ಅಘೋರಿ ಪದ್ಧತಿಗಳು ಮತ್ತು ವಾಮಾಚಾರ ಇವುಗಳ ಪ್ರತಿಬಂಧಕ ನಿರ್ಮೂಲನಾ ಕಾಯ್ದೆ ರೂಪಿಸಿತ್ತು. ಇದರಲ್ಲಿ ಹಿಂಸೆ ಪ್ರತಿಬಾದಿಸುವ ಹಾಗೂ ಒಬ್ಬರ ಆಚರಣೆಯಿಂದ ಇನ್ನೊಬ್ಬರಿಗೆ ದೈಹಿಕ ಹಾಗೂ ಮಾನಸಿಕ ನೋವಾಗುವ ಆಚರಣೆಗಳನ್ನು ನಿಷೇಧಿಸುವ ಅಂಶಗಳಿವೆ.
ಜತೆಗೆ ಮಾಟ ಮಾಡಿಸುವಂತಹ ಅಮಾನವೀಯ ಅಂಶಗಳು ಹಾಗೂ ಪ್ರಾಣಿ ಬಲಿಗೆ ಅವಕಾಶವಿರುವುದಿಲ್ಲ. ಈ ಕಾಯ್ದೆಯನ್ನು ಹಿಂದೆಯೇ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಯತ್ನಿಸಿತ್ತಾದರೂ ಸರ್ಕಾರ ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ತಡೆಹಿಡಿದಿತ್ತು.
ಈ ಆಚರಣೆಗಳ ಬಗ್ಗೆ ನಿಗಾ ಇಡಲು ಒಬ್ಬ ಜಾಗೃತ ದಳ ಅಧಿಕಾರಿ ನೇಮಕ ಮಾಡಲಾಗುವುದು ಎನ್ನಲಾಗಿದ್ದು, ಇನ್ಸ್ಪೆಕ್ಟರ್ ಸೇರಿ ಹೆಚ್ಚಿನ ದರ್ಜೆಯ ನೋಡಲ್ ಅಧಿಕಾರಿ ಇಲ್ಲಿದ್ದಾರೆ. ಘಟನೆಯಲ್ಲಿ ಜೀವಹಾನಿಯಾದರೆ, 302 ಪ್ರಕರಣದ ಆರೋಪದಡಿ ಶಿಕ್ಷೆ ಸಹ ಜಾರಿಯಾಗಲಿದೆ.
ಮೌಢ್ಯ ನಿಷೇಧ ಕಾಯಿದೆಯನ್ನು ಹಿಂದು ಧರ್ಮಕ್ಕೆ ಮಾತ್ರ ಅನ್ವಯಿಸುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಎಲ್ಲಾ ಜಾತಿ, ಧರ್ಮಗಳಲ್ಲಿ ಮತ ಪಂಥಗಳಲ್ಲೂ ಮೌಢ್ಯ ಆಚರಣೆ ಜಾರಿಯಿದ್ದು, ಎಲ್ಲ ಧರ್ಮಗಳಿಗೂ ಅನ್ವಯಿಸಬೇಕೆಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.
ಕಾಯ್ದೆಯಲ್ಲಿ ಏನೇನು ಇರಲಿದೆ ?
* ನರಬಲಿ ನೀಡುವುದು ಹಾಗೂ ಪ್ರಚಾರ ಮಾಡುವುದು ನಿಷೇಧ
* ಪವಾಡದ ಹೆಸರಲ್ಲಿ ವ್ಯಕ್ತಿ ಪ್ರದರ್ಶನ ಮಾಡುವಂತಿಲ್ಲ
* ದೇವರು ಅಥವಾ ದೆವ್ವದ ಹೆಸರಲ್ಲಿ ಹಣ ಸುಲಿಗೆ, ವಂಚನೆ ನಿಷೇಧ ಮಾಡಲಾಗಿದೆ
* ಅತೀಂದ್ರೀಯ ಶಕ್ತಿ ಆಹ್ವಾನ, ದೈವ ಶಕ್ತಿ ಇದೆ ಎಂದು ಜನರನ್ನು ನಂಬಿಸುವಂತಿಲ್ಲ
* ಜನತೆಯಲ್ಲಿ ದೈವ ಹಾಗೂ ದೆವ್ವದ ಭಯ ಹುಟ್ಟಿಸುವುದಕ್ಕೆ ನಿಷೇಧ
* ದೆವ್ವ ಓಡಿಸುವ ಹೆಸರಲ್ಲಿ ಹೊಡೆಯುವುದು, ಕಟ್ಟಿ ಹಾಕುವುದು ಮಾಡುವಂತಿಲ್ಲ
* ಭೂತಾರಾಧನೆ ಹೆಸರಲ್ಲಿ ನಗ್ನ ಮೆರವಣಿಗೆ ಮಾಡುವುದು ನಿಷೇಧ
* ಪ್ರಮುಖವಾಗಿ ಮಡೆಸ್ನಾನ ನಿಷೇಧಕ್ಕೆ ಒತ್ತು
* ಸಿಡಿ ಆಚರಣೆಗೆ ಪ್ರೋತ್ಸಾಹ ಹಾಗೂ ಪ್ರಚಾರಕ್ಕೂ ನಿಷೇಧ
* ಮಕ್ಕಳನ್ನು ಮೇಲಿಂದ ಎಸೆಯುವುದಕ್ಕೆ ಕಡಿವಾಣ
* ಮಕ್ಕಳನ್ನು ಮುಳ್ಳಿನ ಮೇಲೆ ನಡೆಸುವುದು ಮತ್ತು ಎಸೆಯುವಂತಿಲ್ಲ
* ಮೆಣಸಿನಕಾಯಿ ಹೊಗೆ ಹಾಕುವುದು, ಕೂದಲು ಕೀಳುವುದಕ್ಕೆ ನಿಷೇಧ
* ಬೆರಳಿನ ಮೂಲಕ ಶಸ್ತ್ರಚಿಕಿತ್ಸೆ ಮಾಡುವಂತಿಲ್ಲ
* ಹಿಂದಿನ ಜನ್ಮದ ಹೆಸರಲ್ಲಿ ಲೈಂಗಿಕ ಸಂಪರ್ಕ ನಿಷೇಧ
* ದೇವರ ಹೆಸರಲ್ಲಿ ಮಹಿಳೆಯರ ಬೆತ್ತಲೆ ಸೇವೆ ಮಾಡುವಂತಿಲ್ಲ
* ಋತುಮತಿ, ಹೆರಿಗೆಯಾದಾಗ ಮನೆಯಿಂದ ಮಹಿಳೆಯನ್ನು ಹೊರಗಿಡುವುದಕ್ಕೆ ನಿಷೇಧ
* ಕೆಂಡ ಅಥವಾ ಕೊಂಡ ಹಾಯುವುದು ಸಂಪೂರ್ಣ ನಿಷೇಧ
* ಬಾಯಿಗೆ ಕಬ್ಬಿಣ ಸಲಾಖೆ ತುರುಕಿ ದೈವಾಚರಣೆ ಮಾಡುವಂತಿಲ್ಲ
* ಧಾರ್ಮಿಕ, ಆಧ್ಯಾತ್ಮ ಸ್ಥಳಗಳಲ್ಲಿ ಪ್ರದಕ್ಷಿಣೆ, ಪೂಜೆ, ಹರಿಕಥೆ
* ಕೀರ್ತನೆ, ಪ್ರವಚನ, ಭಜನೆ, ಪಾರಂಪರಿಕ ಕಲೆಗಳ ಪ್ರಚಾರಕ್ಕೆ ಅವಕಾಶ
* ದೈವಾಧೀನರಾದವರ ಪವಾಡದ ಬಗ್ಗೆ ಮಾತನಾಡಲು ಅವಕಾಶ
* ಮನೆ, ದೇವಾಲಯ, ದರ್ಗಾ, ಗುರುದ್ವಾರಗಳಲ್ಲಿ ದೇವರ ಆರಾಧನೆಗೆ ಅವಕಾಶ
* ಚರ್ಚ್ಗಳಲ್ಲಿ ದೈಹಿಕ ಹಾನಿಯುಂಟು ಮಾಡದ ಆಚರಣೆಗೆ ಅವಕಾಶ
* ಎಲ್ಲಾ ಸ್ಥಳಗಳಲ್ಲಿ ಹಣಕಾಸು ನಷ್ಟ ಮಾಡದ ಆಚರಣೆಗೆ ಅವಕಾಶ
* ಧಾರ್ಮಿಕ ಸಂಭ್ರಮ, ಹಬ್ಬಗಳಿಗೆ ಅವಕಾಶ
* ಮಕ್ಕಳ ಕಿವಿ, ಮೂಗು ಚುಚ್ಚುವುದು, ಜೈನ ಸಂಪ್ರದಾಯ ಕೇಶಲೋಚನಕ್ಕೆ ಅವಕಾಶ
* ವಾಸ್ತುಶಾಸ್ತ್ರದ ಬಗ್ಗೆ ಸಲಹೆ, ಅಂತರ್ಜಲದ ಬಗ್ಗೆ ಜ್ಯೋತಿಷ್ಯ ಸಲಹೆ ಪಡೆಯಬಹುದು
ನಾಸಿಕರ ಜತೆ ಗುದ್ದಾಟ
ಜನರಿಗೆ ಒಳ್ಳೆ ಶಾಸನ ಮಾಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ದೇವರು ದಿಂಡರ ಮೇಲೆ ನಿರ್ಬಂಧಕ್ಕೆ ಶಾಸನ ಮಾಡಲು ಹೊರಟಿದೆ. ನಾಸ್ತಿಕರ ಜತೆ ಗುದ್ದಾಟ ಯಾರಿಗೆ ಬೇಕು. ಸರ್ಕಾರದ ವಿಚಾರಶಕ್ತಿಗೆ ಗ್ರಹಣ ಹಿಡಿದಿದೆ.
– ಎಚ್.ಡಿ. ದೇವೇಗೌಡ
ಮಾಜಿ ಪ್ರಧಾನಿ
ಮೌಢ್ಯ ಬೇರೆ ಭಕ್ತಿ ಬೇರೆ
ಮೌಢ್ಯ ನಿಷೇಧ ಕಾಯ್ದೆಯಿಂದ ಜನರ ಭಾವನೆಗೆ ಧಕ್ಕೆ ಆಗಲಿದೆ. ಮೌಢ್ಯ ಹಾಗೂ ಭಕ್ತಿಯ ನಡುವೆ ವ್ಯತ್ಯಾಸವಿದೆ. ಎರಡನ್ನೂ ಗುರುತಿಸಿ ಶಾಸನ ರೂಪಿಸಿದರೆ ಸ್ವಾಗತಾರ್ಹ. ಅದು ಬಿಟ್ಟು ಏಕ ಪಕ್ಷೀಯವಾಗಿ ರೂಪಿಸಿದರೆ ಜನರ ವಿರೋಧ ಖಂಡಿತ.
– ಕೆ.ಎಸ್. ಈಶ್ವರಪ್ಪ
ಪ್ರತಿಪಕ್ಷದ ನಾಯಕ
Comments are closed.