
ಅಣ್ಣಾವ್ರ ಫ್ಯಾಮಿಲಿಯಿಂದ ಹೊರಬಂದ ಮೂರನೇ ತಲೆಮಾರು ವಿನಯ್ ರಾಜ್ಕುಮಾರ್ ಈಗ 2ನೆ ಬಾರಿಗೆ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿದ್ಧಾರ್ಥ ಚಿತ್ರದ ನಂತರ ವಿನಯ್ ರಾಜ್ಕುಮಾರ್ ಅಭಿನಯಿಸಿರುವ ಮತ್ತೊಂದು ಚಿತ್ರ `ರನ್ ಆ್ಯಂಟನಿ’ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಲಿದೆ. ಹಾಗೆ ನೋಡಿದರೆ ಜೋಗಿ ಪ್ರೇಮ್ ವಿನಯ್ 2ನೆ ಚಿತ್ರವನ್ನು ನಿರ್ದೇಶಿಸಬೇಕಿತ್ತು. ಅದ್ಧೂರಿಯಾಗಿ ಆ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಕೂಡ ನಡೆದಿತ್ತು.
ಅದರ ಪ್ರಿಪರೇಷನ್ಗೆಂದು ವಿನಯ್ ಬಾಂಬೆಗೆ ಹೋದಾಗ ಹುಟ್ಟಿದ್ದೇ ರನ್ ಆ್ಯಂಟನಿ ಅಲ್ಲಿ ಸ್ನೇಹಿತನಾದ ರಘುಶಾಸ್ತ್ರಿ ಹೇಳಿದಂಥ ಕಥೆ ವಿನಯ್ ಮನದಲ್ಲಿ ಆಳವಾಗಿ ಬೇರೂರಿದೆ. ಬೆಂಗಳೂರಿಗೆ ಬಂದ ಕೂಡಲೇ ತಂದೆಯ ಜೊತೆ ಚರ್ಚೆ ಮಾಡಿ ನಂತರ ರಘುಶಾಸ್ತ್ರಿ ಅವರನ್ನು ಕರೆಸಿಕೊಂಡಿದ್ದಾರೆ. ಹೀಗೆ ಆರಂಭವಾದ ಚಿತ್ರವೇ ರನ್ ಆ್ಯಂಟನಿ. ಈ ವಾರ ಚಿತ್ರ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ರಾಘವೇಂದ್ರ ರಾಜ್ಕುಮಾರ್, ಗುರುರಾಜ್ಕುಮಾರ್, ಚಿತ್ರದ ನಿರ್ದೇಶಕ ರಘುಶಾಸ್ತ್ರಿ, ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ ಸೇರಿದಂತೆ ಬಹುತೇಕ ತಂತ್ರಜ್ಞರು ಹಾಜರಿದ್ದು ಮಾತನಾಡಿದರು. ಸೈಮಾ ಅವಾರ್ಡ್ ಸಮಾರಂಭಕ್ಕೆ ಹೋಗಿದ್ದ ವಿನಯ್ ರಾಜ್ಕುಮಾರ್ ಫ್ಲೈಟ್ ಟಿಕೆಟ್ ಸಿಗದೆ ಬಂದಿರಲಿಲ್ಲ.
ವಿನಯ್ಗೆ ಜೋಡಿಯಾಗಿ ರುಕ್ಸಾರ್ ಹಾಗೂ ಸುಷ್ಮಿತಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.ರಾಘವೇಂದ್ರ ರಾಜ್ಕುಮಾರ್ ಮಾತನಾಡುತ್ತಾ, ರನ್ ಆ್ಯಂಟನಿ ಈಗ ರೆಡಿ ಟು ರನ್. ಇದೇ ಶುಕ್ರವಾರ ವೀಕ್ಷಕರ ಮುಂದೆ ಓಡಲು ನನ್ನ ಮಗ ಸಿದ್ದನಾಗಿದ್ದಾನೆ. ನಿರ್ದೇಶಕ ರಘು ಕೂಡ ನನ್ನ ಮಗನ ಥರ. ಆತ ನನ್ನ ಬಳಿ ಬಂದಾಗ 3 ಕಥೆಗಳನ್ನು ಹೇಳಿದ. ಆ ಮೂರು ಕಥೆಗಳು ಅದ್ಭುತವಾಗಿದ್ದು, ಆ ಮೂರೂ ಕಥೆಗಳನ್ನು ರಿಜಿಸ್ಟರ್ ಮಾಡಿದ್ದೇವೆ. ಮೊದಲನೆಯದಾಗಿ ಮಾಡಿದ್ದೇ ರನ್ ಆ್ಯಂಟನಿ. ಒಂದು ಕಪ್ ಕಾಫಿ ಕುಡಿಯುವುದರೊಳಗೆ ಈ ಕಥೆ ಹೇಳಿ ಮುಗಿಸಿದ. ಹೇರಳವಾಗಿ ಸಿನಿಮಾಗಳನ್ನು ಮಾಡುವ ಆಸೆ ಆತನಿಗಿಲ್ಲ.
ಈ 3 ಸಿನಿಮಾಗಳನ್ನು ಮಾಡಿ ಸಿನಿಮಾಗೆ ಗುಡ್ಬೈ ಹೇಳುತ್ತಾನಂತೆ. ನಮ್ಮ ಚಿತ್ರದಲ್ಲಿ ಹೊಸ ಕಲಾವಿದರ ಜೊತೆ ಹಳಬರ ಸಂಗಮವಿದೆ. ಹಳೇ ಮದ್ಯ ಹೊಸ ಬಾಟಲ್ ಎನ್ನುವ ಹಾಗೆ ಹೊಸ ಭರವಸೆಯ ಚಿತ್ರಗಳ ಸಾಲಿಗೆ ನಮ್ಮ ಚಿತ್ರ ಸೇರುವ ನಂಬಿಕೆ ಇದೆ. ಇದರಲ್ಲಿ ಒಂದು ಹೊಸ ಥರದ ಪ್ರಯತ್ನವನ್ನು ಮಾಡಿದ್ದೇವೆ. ಮಣಿಕಾಂತ ಕದ್ರಿ ಅವರ ಸಂಗೀತ ಈ ಚಿತ್ರದ ಹೈಲೈಟ್. ಚಿತ್ರದಲ್ಲಿ ನಾಯಕನ ಪಾತ್ರದಷ್ಟೇ ಸಂಗೀತವೂ ಪ್ರಮುಖಪಾತ್ರ ನಿರ್ವಹಿಸುತ್ತದೆ. ಕುತೂಹಲ ಉಳಿಸಿಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ಹಾಡುಗಳನ್ನು ಗೌಪ್ಯವಾಗಿಟ್ಟುಕೊಂಡಿದ್ದೇವೆ. ಅವೆಲ್ಲಕ್ಕಿಂತ ಇದು ವಿಭಿನ್ನವಾಗಿ ಮೂಡಿಬಂದಿದೆ. ಸಿನಿಮಾ ನೋಡುವಾಗ ಯಾರೂ ಮೊಬೈಲ್ ಉಪಯೋಗಿಸಲಾರರು.
ಹಾಡುಗಳು ಕೂಡ ವಿಭಿನ್ನವಾಗಿ ಮೂಡಿ ಬಂದಿವೆ. ನಾಯಕಿಯರು ಬೇರೆ ಭಾಷೆಯವರಾದರೂ ಅದ್ಭುತವಾಗಿ ಅಭಿನಯಿಸಿದ್ದಾರೆ. ನಟ ದೇವರಾಜ್ ಅವರೂ ಕಥೆ ಏನೆಂದು ಕೇಳದೆ ಬಂದು ಆ್ಯಕ್ಟ್ ಮಾಡಿದ್ದಾರೆ. ಸಾಯಿಕುಮಾರ್ ಕೂಡ ಕಥೆಯನ್ನು ತುಂಬಾ ಇಷ್ಟ ಪಟ್ಟರು. ಚಿತ್ರದಲ್ಲಿ ಎಲ್ಲರಿಗೂ ಒಂದು ಮೆಸೇಜ್ ಇದೆ. ಓಪನಿಂಗ್ ಅದ್ಧೂರಿಯಾಗಿರಬೇಕು ಎಂದು ತುಂಬಾ ಪ್ಲಾನ್ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ. ಇಲ್ಲಿ ಸಿನಿಮಾ ಸಕ್ಸಸ್ ಆದ ನಂತರ ವಿದೇಶಗಳಲ್ಲಿ ರಿಲೀಸ್ ಮಾಡುವ ಬಗ್ಗೆ ಆಲೋಚನೆ ಎಂದು ಹೇಳಿಕೊಂಡರು. ಚಿತ್ರದ ನಿರ್ದೇಶಕ ರಘುಶಾಸ್ತ್ರಿ ತನ್ನ ಮೊದಲ ನಿರ್ದೇಶನದ ಈ ಚಿತ್ರದ ಬಗ್ಗೆ ಮಾತನಾಡುತ್ತಾ, ಇಂಥ ದೊಡ್ಡ ಪ್ರೊಡೆಕ್ಷನ್ ಹೌಸ್ನಲ್ಲಿ ನನ್ನ ಸಿನಿಮಾ ಹೊರಬರುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಪಕ್ಕಾ ಬೆಂಗಳೂರು ನೇಟಿವಿಟಿಯಲ್ಲಿ ನಡೆದಂಥ ಕಥೆಯಿದು. ಬೀದರ್, ಕುದುರೆಮುಖದಂಥ ವಿಶೇಷ ಲೊಕೇಷನ್ಗಳಲ್ಲಿ ಚಿತ್ರದ ಹಾಡುಗಳನ್ನು ಶೂಟ್ ಮಾಡಿದ್ದೇವೆ ಎಂದು ಹೇಳಿದರು.
Comments are closed.