ಉಡುಪಿ: ಉಡುಪಿ ಜಿಲ್ಲೆಯ ಪೆರ್ಡೂರು, ಹೆಬ್ರಿ, ಹಿರಿಯಡಕ ಪರಿಸರದಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಮನೆ ಮಂದಿ ಕಂಗಾಲಾದರು. ಬಿರುಗಾಳಿಯ ಅಟ್ಟಹಾಸಕ್ಕೆ 100ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾದವು.

ಪೆರ್ಡೂರು, ಹಿರಿಯಡಕ ಪರಿಸರದಲ್ಲಿ ನಿರ್ಮಾಣವಾದ ಬಿರುಗಾಳಿ ಇಡೀ ಪರಿಸರವನ್ನು ನಡುಗಿಸಿದೆ. ಏಕಾಏಕಿ ಬೀಸಿದ ಬಿರುಗಾಳಿಯ ಅಟ್ಟಹಾಸಕ್ಕೆ ನಿಮಿಷ ಮಾತ್ರದಲ್ಲಿ ಇಡೀ ಪರಿಸರ ನಲುಗಿ ಹೋಗಿದೆ. ಭಾನುವಾರ ನಿದ್ದೆಯಲ್ಲಿದ್ದ ಜನರು ತಡಬಡಿಸಿ ಎದ್ದು ಬರುವಷ್ಟರಲ್ಲಿ ಮನೆಯ ಮಾಡೇ ಮಾಯವಾಗಿತ್ತು. ಸುಮಾರು ಮುಕ್ಕಾಲು ಗಂಟೆಯ ಸುಂಟರ ಗಾಳಿ ಮೂರು ಊರುಗಳಲ್ಲಿ ಸಿಕ್ಕಿದನ್ನೆಲ್ಲಾ ಸೆಳೆದುಕೊಂಡು ಸಾಗಿದೆ. ದಟ್ತವಾದ ಕತ್ತಲಿನಲ್ಲಿ ಎಲ್ಲಿ ಏನು ಆಗಿದೆ ಎಂಬುದನ್ನೂ ಅರಿಯದ ಪರಿಸ್ಥಿತಿ ಸ್ಥಳಿಯರದ್ದಾಗಿತ್ತು. ಹಿರಿಯಡಕ, ಪೆರ್ಡೂರು, ಹೆಬ್ರಿ ಈ ಮೂರು ಊರಿನಲ್ಲಿ ವ್ಯಾಪಕವಾದ ಹಾನಿಯಾಗಿದ್ದು ೪೫ ಮನೆಗಳು ಪೂರ್ಣ, 71ಮನೆಗಳು ಬಾಗಶ: ಹಾನಿಗೆ ಒಳಗಾಗಿದೆ.
ಮಗುವನ್ನು ಎಳೆದೊಯ್ದ ಬಿರುಗಾಳಿ….
ಪೆರ್ಡೂರಿನ ಪರಿಸರದ ಹಲವು ಮನೆಗಳು ಹಾನಿಗೆ ಒಳಗಾಗಿದ್ದು ಬೆಳ್ಳರ್ಪಾಡಿ ಗ್ರಾಮದಲ್ಲಿ 11 ಮನೆಗಳುಪೂರ್ಣ, 41 ಬಾಗಶ:, ಪುತ್ತಿಗೆಯಲ್ಲಿ 8 ಮನೆ ಪೂರ್ಣ, 21 ಬಾಗಶ:, ಅಂಜಾರು ಗ್ರಾಮದಲ್ಲಿ ಐದು ಮನೆ ಬಾಗಶ: ಹಾಗೂ 71 ಮನೆಗಳು ಅಲ್ಪ ಸ್ವಲ್ಪ ಹಾನಿಗೆ ಒಳಗಾಗಿದೆ. ಬಿರುಗಾಳಿಯ ವೇಗ ಮತ್ತು ಅಬ್ಬರ ಎಷ್ಟಿತ್ತು ಅಂದರೆ ಮನೆಯ ಸಿಮೆಂಟ್ ಸೀಟ್ ಛಾವಣಿಯೊಂದಿಗೆ ಅದರೊಂದಿಗೆ ಕಟ್ಟಲಾಗಿದ್ದ ತೊಟ್ಟಿಲು ಹಾಗೂ ಮಗುವನ್ನೂ ಹಾರಿಸ್ಕೊಂಡು ಹೋಗಿದೆ. ಬೊಮ್ಮರಬೆಟ್ಟು ಗ್ರಾ.ಪಂ ವ್ಯಾಪ್ತಿಯ ಗುಂಡ್ಯಡ್ಕದ ಮೈಕಳ ರಸ್ತೆ ಬಳಿಯ ನಿವಾಸಿಗಳಾದ ಮಹಾಂತೇಶ ಮತ್ತು ಶಾರದಾ ಅವರ ಪುತ್ರ ಒಂದುವರೆ ತಿಂಗಳಿನ ಮಗು ಅರ್ಜುನ ತೊಟ್ಟಿಲಲ್ಲಿ ಮಲಗಿದ್ದ ಸಂದರ್ಬದಲ್ಲಿ ಸುಮಾರು 10 ಗಂಟೆ ರಾತ್ರಿ ಬೀಸಿದ ಭಾರೀ ಗಾಳಿಗೆ ಮಗುವನ್ನು ಸೀರೆಯ ತೊಟ್ಟಿಲಿನ ಸಮೇತ ಹಾರಿಸಿಕೊಂಡು ಹೋಗಿದ್ದು ಸೀರೆಯ ತೊಟ್ಟಿಲಾದ ಕಾರಣ ಮಗು ಅರ್ದದಲ್ಲೇ ಕೆಳಗೆ ಬಿದ್ದಿದ್ದು ಮಗುವಿನ ತಲೆಯ ಭಾಗಕ್ಕೆ ಸ್ವಲ್ಪ ಪೆಟ್ಟಾಗಿದೆ. ಮಗುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟಿನಲ್ಲಿ ಪೆರ್ಡೂರು , ಹಿರಿಯಡಕ, ಹೆಬ್ರಿ ಪರಿಸರದಲ್ಲಿ ಬೀಸಿದ ಸುಂಟರಗಾಳಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಬರೇ ಮನೆಗಳು ಮಾತ್ರವಲ್ಲದೇ ಎಕ್ರೆಗಟ್ತಲೆ ಅಡಕೆ, ಬಾಳೇ ತೋಟಗಳಿಗೂ ಹಾನಿಯಾಗಿದೆ. ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಸೂಕ್ತವಾದ ವ್ಯವಸ್ಥೆ ಸರಕಾರದ ವತಿಯಿಂದ ಜರೂರು ಮಾಡಬೇಕಾಗಿದೆ.
Comments are closed.