ಹೊಸದಿಲ್ಲಿ : ವಿಶ್ವ ಜನಪ್ರಿಯತೆಯ ಸಾಮಾಜಿಕ ಜಾಲ ತಾಣ ಫೇಸ್ ಬುಕ್, ವಿಶ್ವಾದ್ಯಂತದ ತನ್ನ ಬಳಕೆದಾರರನ್ನು ಪರಸ್ಪರ ಬೆಸೆಯುವ ಅಭಿಯಾನದ ಅಂಗವಾಗಿ ಬಹುಭಾಷಾ ಪರಿವರ್ತನೆಯ ತಾಂತ್ರಿಕತೆಯನ್ನು ಪರಿಚಯಿಸಿದೆ.
ಇದರಿಂದಾಗಿ ಫೇಸ್ ಬುಕ್ ಬಳಕೆದಾರರು ವಿಶ್ವದ ಉದ್ದಗಲದಲ್ಲಿರುವ ಜನರಿಗೆ ಅರ್ಥವಾಗುವಂತೆ ಬಹು ಭಾಷೆಗಳಲ್ಲಿ ತಮ್ಮ ಪೋಸ್ಟ್ಗಳನ್ನು ಹಾಕಲು ಸಾಧ್ಯವಾಗಿದೆ.
ಫೇಸ್ ಬುಕ್ ಬಳಕೆದಾರರು ತಮಗೆ ಒದಗಿಸಲಾಗಿರುವ 44 ಭಾಷೆಗಳ ಪೈಕಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಭಾಷೆಯನ್ನು ಆಯ್ದುಕೊಂಡು ಆ ಭಾಷೆಗಳಲ್ಲಿ ತಮ್ಮ ಪೋಸ್ಟ್ ಅನ್ನು ಕಾಣಿಸಬಹುದಾಗಿದೆ. ಈ ವಿನೂತನ ತಾಂತ್ರಿಕ ಸೌಕರ್ಯದ ಪ್ರಾಯೋಗಿಕ ಬಳಕೆಯನ್ನು ಫೇಸ್ ಬುಕ್ ಈ ವರ್ಷ ಫಬ್ರವರಿಯಿಂದಲೇ ಕೈಗೊಂಡಿತ್ತು.
ಬಹುಭಾಷಾ ಬಳಕೆಯ ಈ ಸೌಕರ್ಯವನ್ನು ಬಳಸುವ ಮುನ್ನ ಫೇಸ್ ಬುಕ್ ಬಳಕೆದಾರರು ಒಂದು ನಿರ್ದಿಷ್ಟ ಭಾಷೆಯಲ್ಲಿ ತಮ್ಮ ಪೋಸ್ಟ್ ಹಾಕಬೇಕಾಗುತ್ತದೆ. ಅನಂತರದಲ್ಲಿ ತಾವು ಹಾಕಿದ ಪೋಸ್ಟ್ ತಮಗೆ ಒದಗಿಸಲಾಗಿರುವ ಆಯ್ಕೆಯಲ್ಲಿನ ಯಾವ ಯಾವ ಭಾಷೆಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದನ್ನು ಗುರುತಿಸಿಕೊಂಡು ಕ್ಲಿಕ್ ಮಾಡಬೇಕಾಗುತ್ತದೆ.
ಫೇಸ್ಬುಕ್ ಬಳಕೆದಾರರ ಸ್ಟೇಟಸ್ ಅಪ್ ಡೇಟ್ ಬಾಕ್ಸ್ ನ ಕೆಳ ಭಾಗದ ಮೂಲೆಯಲ್ಲಿ ‘write post in another language’ ಎಂಬ ಆಯ್ಕೆ ಇರುತ್ತದೆ. ಅಲ್ಲಿಂದ ಬಳಕೆದಾರರು ತಮ್ಮ ಪೋಸ್ಟ್ ಯಾವ ಯಾವ ಭಾಷೆಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ.
ಫೇಸ್ ಬುಕ್ ಬಳಕೆದಾರರು ತಾವು ಯಾವುದಾದರೂ ಒಂದು ಭಾಷೆಯಲ್ಲಿ ಹಾಕಿದ ಪೋಸ್ಟ್ ಅನ್ನು ತಮ್ಮ ಆಯ್ಕೆಯ ಇತರ ಹಲವು ಭಾಷೆಗಳಲ್ಲಿ ಕಾಣಿಸಬಹುದಾದರೂ, ಆ ಬಹುಭಾಷೆಯ ಪೋಸ್ಟ್ಗಳು, ಅವುಗಳಲ್ಲಿನ ನಿರ್ದಿಷ್ಟ ಭಾಷೆಯನ್ನು ಬಳಸುವವರಿಗೆ ಮಾತ್ರವೇ ಅವರ ಭಾಷೆಯಲ್ಲಿ ಕಾಣಸಿಗುತ್ತದೆ. ಎಂದರೆ ಉಳಿದ ಭಾಷೆಗಳಿಗೆ ಪರಿವರ್ತಿತವಾದ ಪೋಸ್ಟ್ಗಳು ಆ ನಿರ್ದಿಷ್ಟ ಭಾಷಿಕರಿಗೆ ಕಾಣ ಸಿಗುವುದಿಲ್ಲ!
-ಉದಯವಾಣಿ
Comments are closed.