ಕರ್ನಾಟಕ

ಉತ್ತಮ ಸೇವೆಗೆ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಬೆಂಗಳೂರು ನಗರ ಪೊಲೀಸ್

Pinterest LinkedIn Tumblr

police

ಬೆಂಗಳೂರು: ಆಧುನೀಕರಣ ಮುಖಾಂತರ ತಂತ್ರಜ್ಞಾನ ಬಳಸಿಕೊಂಡು ಸಾಮಾಜಿಕ ಜಾಲತಾಣ (ಟ್ವಿಟ್ಟರ್, ವಾಟ್ಸ್ ಅಪ್, ಫೇಸ್‌ಬುಕ್)ಗಳ ಸಂದೇಶಗಳು, ಇ-ಮೇಲ್ ಮತ್ತು ಎಸ್‌ಎಂಎಸ್ ಮೂಲಕ ಸಲ್ಲಿಸುವ ಪ್ರತಿಯೊಂದು ದೂರುಗಳನ್ನೂ ಬಗೆಹರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಬೆಂಗಳೂರು ನಗರ ಪೊಲೀಸ್ ದೇಶದಲ್ಲಿಯೇ ಮುಂಚೂಣಿ ಯಲ್ಲಿದೆ.

ಬೆಂಗಳೂರು ನಗರ ಪೊಲೀಸ್ ಘಟಕವು 4.38 ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಮುಖಾಂತರ ಡಯಲ್ 100 ವ್ಯವಸ್ಥೆಯನ್ನು ಉನ್ನತೀಕರಿಸಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮೊಬೈಲ್ ಡಾಟಾ ಟರ್ಮಿನಲ್ ಉಪಕರಣಗಳನ್ನು ಎಲ್ಲ ಹೊಯ್ಸಳ ವಾಹನಗಳಿಗೆ ಅಳವಡಿಸಿ ಸಾರ್ವಜನಿಕರು ಡಯಲ್ 100ಗೆ ಮಾಡುವ ಕರೆಗಳು ಸ್ವೀಕೃತ ಗೊಳಿಸಲಾಗುತ್ತದೆ.

ನಂತರ ಆ ದೂರುಗಳನ್ನು ಹತ್ತಿರದ ಹೊಯ್ಸಳ ವಾಹನಗಳಿಗೆ ಎಂಡಿಟಿ ತಂತ್ರಜ್ಞಾನದ ಮೂಲಕ ರವಾನಿಸಲು ಮತ್ತು ಕೈಗೊಂಡ ಸೂಕ್ತ ಕ್ರಮದ ಬಗ್ಗೆ ವರದಿ ಪಡೆಯಲು ಹಾಗೂ ದೂರುಗಳ ಮಾಹಿತಿ ಸಂಪೂರ್ಣ ದತ್ತಾಂಶಗಳ ನಿರ್ವಹಣೆಗಾಗಿ ಈ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.

ನಗರವು 825 ಚದರ ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ವಿದೇಶ ಮತ್ತು ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನರು ಬೆಂಗಳೂರು ನಗರಕ್ಕೆ ವಲಸೆ ಬಂದು ವಾಸಿಸುತ್ತಿದ್ದಾರೆ. ಬಹುರಾಷ್ಟ್ರೀಯ ಐಟಿ-ಬಿಟಿ ಕಂಪೆನಿಗಳು, ಉದ್ಯಮಗಳು, ಶಿಕ್ಷಣ ಮತ್ತು ಕೈಗಾರಿಕಾ ಕೇಂದ್ರಗಳು ಇಲ್ಲಿ ನೆಲೆಯೂರಿದ್ದು, ದಿನೇ ದಿನೇ ಬೆಂಗಳೂರು ನಗರದ ಜನಸಂಖ್ಯೆಯು ತೀವ್ರಗತಿಯಲ್ಲಿ ಬೆಳವಣಿಗೆ ಹೊಂದಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಹೊರಹೊಮ್ಮಿದೆ.

ನಗರದಲ್ಲಿ ಜನಸಂಖ್ಯೆ ಹೆಚ್ಚಿದಂತೆ ವ್ಯಾಪಾರ ಸಂಕಿರಣಗಳು, ಜನನಿಬಿಡ ಪ್ರದೇಶಗಳು, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಉದ್ಯಮಗಳು ಇರುವುದರಿಂದ ಅಪರಾಧ ಮತ್ತು ಅಪಘಾತ ನಿಯಂತ್ರಿಸಲು ಹಿಂದಿನ ಹೊಯ್ಸಳ ವಾಹನಗಳು ಸೇರಿದಂತೆ ಪೊಲೀಸ್ ವ್ಯವಸ್ಥೆಯನ್ನು ಆಧುನೀಕರಿಸಿ ಮೆಗಾಸಿಟಿ ಪೊಲೀಸಿಂಗ್‌ಯೋಜನೆಯಡಿ ಲಭ್ಯವಿರುವ ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ನೂತನ ಹೊಯ್ಸಳ ವಾಹನಗಳನ್ನು ಸಾರ್ವಜನಿಕ ಸೇವೆಗೆ ಸೇರ್ಪಡೆಗೊಳಿಸಲಾಗುತ್ತಿದೆ.

Comments are closed.