ಕರಾವಳಿ

ಗುಜ್ಜಾಡಿ ಗ್ರಾಮಪಂಚಾಯತ್ ಗ್ರಾಮಸಭೆ; ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಒಂದಷ್ಟು ಚರ್ಚೆಗಳು, ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ, ಗ್ರಾಮದ ಹಲವು ಸಮಸ್ಯೆಗಳ ಪರಿಹಾರಕ್ಕೆ ಒಕ್ಕೋರಲ ಆಗ್ರಹ. ಒಗ್ಗಟ್ಟಿನಲ್ಲಿ ಕೆಲಸ ಮಾಡಿ ಗ್ರಾಮದ ಅಭಿವೃದ್ಧಿ ಕಡೆ ಗಮನ ಕೊಡಿ…..

ಇದೆಲ್ಲಾ ಕೇಳಿಬಂದಿದ್ದು…ಗುಜ್ಜಾಡಿ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ ಅಧ್ಯಕ್ಷತೆಯಲ್ಲಿ ನಡೆದ ಗುಜ್ಜಾಡಿ ಗ್ರಾಮ ಪಂಚಾಯತ್‌ನ 2016-17೭ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ.

Gujjadi Panchayt_Gramasabe_Kundapura (6) Gujjadi Panchayt_Gramasabe_Kundapura (5) Gujjadi Panchayt_Gramasabe_Kundapura (2) Gujjadi Panchayt_Gramasabe_Kundapura (7) Gujjadi Panchayt_Gramasabe_Kundapura (1) Gujjadi Panchayt_Gramasabe_Kundapura (4) Gujjadi Panchayt_Gramasabe_Kundapura (3)

ಗ್ರಾಮಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳ ಹಾಜರಾರಿ ಕಡ್ಡಾಯವಾಗಿದ್ದರೂ, ಕಳೆದ ಹಲವು ವರ್ಷಗಳಿಂದ ಗ್ರಾಮಸಭೆಗಳಿಗೆ ಕೆಲವೊಂದು ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಈ ಬಾರಿ ಕೂಡ ಕೃಷಿ, ಅರಣ್ಯ, ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದು, ಈ ಇಲಾಖೆಗಳ ಅಧಿಕಾರಿಗಳನ್ನು ಸಭೆಗೆ ಕರೆಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಗ್ರಾಮಸಭೆಗಳಿಗೆ ಇಲಾಖಾಧಿಕಾರಿಗಳು ಗೈರುಹಾಜರಾದಲ್ಲಿ ಗ್ರಾಮಸಭೆಯನ್ನು ರದ್ದುಗೊಳಿಸುವ ನಿರ್ಣಯವನ್ನು ಕಳೆದ ಸಾಲಿನ ಗ್ರಾಮಸಭೆಯಲ್ಲಿ ಕೈಗೊಳ್ಳಲಾಗಿದ್ದು, ಅದರಂತೆ ಈ ಬಾರಿಯ ಗ್ರಾಮಸಭೆಯನ್ನು ರದ್ದುಗೊಳಿಸಿ ಅಧಿಕಾರಿಗಳು ಬಂದ ಬಳಿಕ ಸಭೆ ನಡೆಸುವಂತೆ ಆಗ್ರಹಿಸಿದರು.

ಇದೇ ಸಂದರ್ಭ ಮಧ್ಯ ಪ್ರವೇಶಿಸಿ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿದ ಸಭೆಯ ಮಾರ್ಗದರ್ಶಿ ಅಧಿಕಾರಿ ರಾಜೇಶ್ ಅವರು ಮಾತನಾಡಿ, ಗ್ರಾಮಸಭೆಗಳಿಗೆ ಗ್ರಾಮ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿರಬೇಕೆಂಬ ನಿಯಮ ಇಲ್ಲ. ಆದಾಗ್ಗ್ಯೂ ಯಾವುದೇ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಗೆ ಅವಶ್ಯವಿದ್ದಲ್ಲಿ ಅವರನ್ನು ಸಭೆಗೆ ಕರೆಸಲಾಗುವುದು ಎಂದು ಸಮಜಾಯಿಷಿ ನೀಡಿದ ಬಳಿಕ ಸಭೆ ಮತ್ತೆ ಮುಂದುವರೆಯಿತು.

ಗುಜ್ಜಾಡಿಯಲ್ಲಿ ಆರೋಗ್ಯ ಇಲಾಖೆಯ ಕಟ್ಟಡವಿದ್ದರೂ ವೈದ್ಯಾಧಿಕಾರಿಗಳಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಸೂಚನಾ ಫಲಕ ಅಳವಡಿಸಲು ಕ್ರಮಕೈಗೊಂಡಿಲ್ಲ. ಗ್ರಾಮದಲ್ಲಿ ಈವರೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಸ್ಥಳೀಯಾಡಳಿತ ವಿಫಲವಾಗಿದೆ. ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ಒಂದೇ ಪಕ್ಷದ ಆಡಳಿತ ಇರುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಗ್ರಾಮಸ್ಥ ಮೋಹನ ನಾಯ್ಕ್ ಆಗ್ರಹಿಸಿದರು.

ಕಳೆದ ಸಾಲಿನಲ್ಲಿ ಎರಡು ಗ್ರಾಮಸಭೆಗಳ ಪೈಕಿ ಒಂದು ಗ್ರಾಮ ಸಭೆ ಮಾತ್ರ ನಡೆಸಲಾಗಿದೆ. ಈ ಬಾರಿ ವಾರ್ಡ್ ಸಭೆ ನಡೆಸದೆ ನಿರ್ಣಯ ಬರೆದಿರುವುದು ಖಂಡನೀಯ. ಗ್ರಾಮ ಪಂಚಾಯತ್ ತನ್ನ ತಪ್ಪನ್ನು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಭಾಧ್ಯಕ್ಷರು ಇನ್ನು ಮುಂದೆ ಇಂತಹ ತಪ್ಪಾಗುವುದಿಲ್ಲ ಎಂದು ಭರವಸೆ ನೀಡಿದ್ರು.

ಕಳೆದ ಸಾಲಿನಲ್ಲಿ ಗ್ರಾಮ ಪಂಚಾಯತ್ ಕಛೇರಿ ಬಳಿ ಇರುವ ಶೇಂದಿ ಅಂಗಡಿ ಹಾಗೂ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಸಭೆ ನಡೆದು ಒಂದು ವರ್ಷ ಕಳೆದಿದ್ದರೂ ಇಂತಹ ಅಂಗಡಿಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯತ್‌ನಿಂದ ಸಾಧ್ಯವಾಗಿಲ್ಲ. ಪಂಚಾಯತಿ ವ್ಯಾಪ್ತಿಯಲಿ ಬಹಳಷ್ಟು ಉಪಯೋಗಕ್ಕೆ ಬಾರದ ಕಟ್ಟಡಗಳಿದೆ. ಅವುಗಳನ್ನು ತೆರವುಗೊಳಿಸಿ ಇಲ್ಲವೇ ಸಂಘಸಂಸ್ಥೆಗಳಿಗೆ ನೀಡಿರಿ. ಅಲ್ಲದೇ ಕಳೆದ ಸಾಲಿನ ಗ್ರಾಮಸಭೆಯ ವರದಿಯನ್ನು ಮಂಡಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪೈಕಿ ಅನುಷ್ಠಾನವಾದ ನಿರ್ಣಯಗಳನ್ನು ತಿಳಿಸುವಂತೆ ಭಾಸ್ಕರ ಶೆಟ್ಟಿ ಒತ್ತಾಯಿಸಿದರು.

ಗ್ರಾಮಸಭೆಗಳಲ್ಲಿ ಇಲಾಖಾಧಿಕಾರಿಗಳು ಮಾಹಿತಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಗ್ರಾಮಸಭೆಗಳಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಈ ಸಮಸ್ಯೆಗಳ ಪೈಕಿ ಒಂದೆರೆಡು ಸಮಸ್ಯೆಗಳು ಪರಿಹಾರವಾದರೆ ಮಾತ್ರ ಗ್ರಾಮಸಭೆಗೆ ಹೆಚ್ಚು ಬಲ ಬಂದಂತಾಗುತ್ತದೆ. ಈ ಮೂಲಕ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯತ್ ಗಮನ ಹರಿಸಬೇಕು ಎಂದು ಎಂದು ಮಹಾಲಿಂಗ ಪೂಜಾರಿ ಒತ್ತಾಯಿಸಿದರಲ್ಲದೇ ಕೊಡಪಾಡಿ ರಸ್ತೆ ಸಮಸ್ಯೆ, ಮಾವಿನಕಟ್ಟೆ ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆ, ಗುಜ್ಜಾಡಿ ಕಳಿಹಿತ್ಲು ರಸ್ತೆಯ ಅವ್ಯವಸ್ಥೆ ಸೇರಿದಂತೆ ಗ್ರಾಮದ ಅನೇಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.

ಈತನ್ಮಧ್ಯೆ ಕೊನೆಗೂ ಗ್ರಾಮಸ್ಥರ ಬೇಡಿಕೆಗೆ ಮಣಿದ ತೋಟಗಾರಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಿ ತಮ್ಮ ತಮ್ಮ ಇಲಾಖೆಯ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡೊದರು. ಮೆಸ್ಕಾಂ ಗಂಗೊಳ್ಳಿ ಶಾಖೆಯ ಇಂಜಿನಿಯರ್ ರಾಘವೇಂದ್ರ ಅವರು ಮಾಹಿತಿ ನೀಡುವ ಮಧ್ಯೆಯೇ ವಿದ್ಯುತ್ ಕೈಕೊಟ್ಟಿದ್ದು ಸಭೆಯಲ್ಲಿದ್ದ ಜನರು ನಗುವಂತೆ ಮಾಡಿತು. ಹಾಗೆಯೇ ಗ್ರಾಮಸಭೆ ನಡೆಯುವಾಗ ವಿಡಿಯೋ ಚಿತ್ರೀಕರಣವಾಗಬೇಕಿರುವುದು ನಿಯಮವಾದರೂ ಇಲ್ಲಿ ಅದ್ಯಾವುದೂ ನಡೆಯದಿರುವುದು ಕಂಡುಬಂತು. ಅಲ್ಲದೇ ಮುಖ್ಯವಾದ ವಿಚಾರಗಳು ಸಭೆಯಲ್ಲಿ ನಿರ್ಣಯವಾಗಬೇಕಿದ್ದರೂ ಕೂಡ ಯಾವ ವಿಚಾರಗಳು ನಿರ್ಣಯ ಮಾಡಲಾಗಿಲ್ಲ ಬದಲಾಗಿ ಕೇವಲ ವಾಕ್ಯ ರೂಪದಲ್ಲಿ ಬರೆದುಕೊಳ್ಳಲಯಿತೆಂಬ ಬಗ್ಗೆ ಸಾರ್ವಜನಿಕರು ದೂರಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಈ ಸಂದರ್ಭ ಅವರವರ ಇಲಾಖಾ ವಿಚಾರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ರು.

ಜಿಲ್ಲಾಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಲ್ಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ., ಗ್ರಾಪಂ ಉಪಾಧ್ಯಕ್ಷೆ ಸುನೀತಾ ಪೂಜಾರಿ, ಗ್ರಾಮ ಲೆಕ್ಕಿಗ ಮಹೇಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಈ ಗ್ರಾಮ ಸಭೆಯಲ್ಲಿ ಹಾಜರಿದ್ದರು.

ಒಟ್ಟಿನಲ್ಲಿ ಒಂದು ತಾಸಿನಲ್ಲಿ ಮುಗಿಯುತ್ತಿದ್ದ ಗುಜ್ಜಾಡಿ ಗ್ರಾಮಪಂಚಾಯತ್ ಗ್ರಾಮಸಭೆ ಈ ಬಾರೀ ಮಾತ್ರ ಸುದೀರ್ಘ ಮೂರುವರೆಗಂಟೆಗಳ ಕಾಲ ನಡೆಯಿತು. ಮಾತ್ರವಲ್ಲದೇ ಸಾರ್ವಜನಿಕರ ಹತ್ತಾರು ಪ್ರಶ್ನೆ ಹಾಗೂ ಗೊಂದಲಗಳಿಗೆ ಮಾಹಿತಿ ನೀಡುವ ಪ್ರಯತ್ನವೂ ನಡೆದಿದ್ದಂತೂ ಸುಳ್ಳಲ್ಲ.

Comments are closed.