ಕರ್ನಾಟಕ

ಮುಂಗಾರು ಅಬ್ಬರಕ್ಕೆ ರಾಜ್ಯದ ಜನತೆ ತತ್ತರ

Pinterest LinkedIn Tumblr

rainಬೆಂಗಳೂರು,ಜೂ.೩೦- ರಾಜ್ಯದಲ್ಲೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮಳೆಯ ಅಬ್ಬರಕ್ಕೆ ಹಲವು ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಘಟಕ ನೀಡಿರುವ ಮಾಹಿತಿ ಪ್ರಕಾರ, ೨೦ ಜಿಲ್ಲೆಗಳ ಪೈಕಿ ೭ ಜಿಲ್ಲೆಗಳಲ್ಲಿ ೨೪ ಗಂಟೆಗಳಲ್ಲಿ ೨೦೦ ಮಿಮೀ ನಷ್ಟು ಮಳೆಯಾಗಿರುವುದಾಗಿ ತಿಳಿಸಿದೆ.
ಭಾರಿ ಮಳೆಯ ಪರಿಣಾಮ ಲಿಂಗನಮಕ್ಕಿ ಜಲಾಶಯ ಹಾಗೂ ಕಬಿನಿ ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತದಲ್ಲಿದ್ದು, ಮಳೆಯ ಅಬ್ಬರಕ್ಕೆ ಕೊಡಗು ಜಿಲ್ಲೆಯ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದೆ.
ಜಲಾಶಯಕ್ಕೆ ೨೧೨೬ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಪ್ರಸ್ತುತ ಜಲಾಶಯದಲ್ಲಿ ೬೯.೬೫ ಅಡಿ ನೀರು ಸಂಗ್ರಹವಾಗಿದ್ದು, ೧೪೫೯ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರೆಸ್‌ನ ನೀರಿನ ಮಟ್ಟ ೧೦೪.೬೦ ಅಡಿ ದಾಖಲಾಗಿತ್ತು. ಜಲಾಶಯಕ್ಕೆ ೩೩,೨೮೭ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ೩೮೪ ಕ್ಯೂಸೆಕ್ ನೀರನ್ನು ಹರಿಯಬಿಡಲಾಗುತ್ತಿತ್ತು.
ಕೊಡಗಿನಲ್ಲಿ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ ಉಗಮ ಸ್ಥಾನ ಭಾಗಮಂಡಲ ಸಂಪೂರ್ಣ ಜಲಾವೃತವಾಗಿದ್ದು, ತ್ರಿವೇಣಿ ಸಂಗಮ ಕೂಡಾ ಮುಳುಗಡೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಕೃಷ್ಣರಾಜಸಾಗರ ಜಲಾಶಯಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ಇತ್ತ ಹಾರಂಗಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಇನ್ನೆರಡು ದಿನಗಳಲ್ಲಿ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಮುಂಗಾರು ಆಗಮನದ ವಿಳಂಬದಿಂದಾಗಿ ಮಳೆ ಕೊರತೆ ಉಂಟಾಗಿತ್ತು. ಇದೀಗ ಕರಾವಳಿ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಸಹಜವಾಗಿಯೇ ಕೆಆರೆಸ್‌ಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲೂ ಏರಿಕೆಯಾಗಿದೆ.
ಧಾರಾಕಾರ ಮಳೆಯಿಂದಾಗಿ ಭಾಗಮಂಡಲದಿಂದ ನಾಪೋಕ್ಲಿಗೆ ತೆರಳುವ ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ಹರಿಯುತ್ತಿದ್ದು ಜನರು ಜೀವಭಯದಿಂದ ಸಂಚರಿಸುವಂತಾಗಿದೆ. ಮಡಿಕೇರಿ ಭಾಗಮಂಡಲ ರಸ್ತೆಯೂ ಜಲಾವೃತಗೊಂಡಿದ್ದು ವಾಹನ ಸಂಚಾರ ದುಸ್ತರವಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಇಲ್ಲಿ ಇದೇ ಗೋಳಾಗಿದ್ದು, ಇನ್ನಾದರೂ ಈ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಹಾಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಡಿಕೇರಿ ತಾಲೂಕಿನ ಹಲವೆಡೆ ಗದ್ದೆಗಳೆಲ್ಲಾ ಜಲಾವೃತವಾಗಿದ್ದು, ಈಗಾಗಲೇ ನಾಟಿ ಮಾಡಿದ ಗದ್ದೆಗಳಿಗೆಲ್ಲಾ ನೀರು ನುಗ್ಗಿ ಬೆಳೆ ಹಾಳಾಗಿದೆ. ಇನ್ನು ಕೆಲವೆಡೆ ನಾಟಿಯಾಗದ ಗದ್ದೆಗಳೆಲ್ಲಾ ನೀರು ಆವರಿಸಿಕೊಂಡಿದ್ದು ನಾಟಿ ಮಾಡಲಾಗದ ಪರಿಸ್ಥಿತಿ ಇದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ೧೨೭.೭ ಮಿಲಿ ಮೀಟರ್ ಮಳೆ ಸುರಿದಿದ್ದು, ಮಡಿಕೇರಿ ತಾಲೂಕಿನಲ್ಲಿ ಅತಿ ಹೆಚ್ಚು ೧೭೭.೫ ಮಿಲಿ ಮೀಟರ್ ಮಳೆ ಸುರಿದಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೧೦೦.೮ ಮಿಲಿ ಮೀಟರ್, ವಿರಾಜಪೇಟೆಯಲ್ಲಿ ೧೦೪.೮ ಮಿಲಿ ಮೀಟರ್ ಇನ್ನು ಭಾಗಮಂಡಲ ವ್ಯಾಪ್ತಿಯಲ್ಲಿ ಅತಿ ಹೆಚ್ಚು ೨೫೫.೪ ಮಿಲಿ ಮೀಟರ್ ಮಳೆ ದಾಖಲಾಗಿದೆ.
ಉತ್ತರ ಕರ್ನಾಟಕ ರೈತರಲ್ಲಿ ಮಂದಹಾಸ:
ಬಿರು ಬೇಸಿಗೆಯಿಂದ ಬೇಸತ್ತಿದ್ದ ಉತ್ತರ ಕರ್ನಾಟಕ ಜನತೆ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ೨೪,೭೧೧ ಕ್ಯೂಸೆಕ್ಸ್ ಗೂ ಹೆಚ್ಚು ಒಳಹರಿವು, ಕಬಿನಿಯಲ್ಲಿ ೧೫,೦೯೭ ಕ್ಯೂಸೆಕ್ಸ್ ದಾಖಲಾಗಿದೆ. ಇದರಂತೆ ಕೊಡಗು, ಕೃಷ್ಣರಾಜಸಾಗರ್, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಆರೋಗ್ಯಕರ ಬೆಳವಣಿಗೆಗಳು ಕಂಡುಬಂದಿದೆ.
ಮತ್ತಷ್ಟು ಮಳೆಯಾಗುವ ಸಾಧ್ಯತೆ:
ಪ್ರಸ್ತುತ ವಾತಾವರಣವನ್ನು ಗಮನಿಸಿದರೆ ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೂನ್ ೨೮ ರಿಂದ ೨೯ರವರೆಗಿನ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊಡಕನಿಯಲ್ಲಿ ೩೨೭ ಮಿಮೀ ನಷ್ಟು ಮಳೆಯಾಗಿದೆ. ಕೊಡಗಿನ ಭಾಗಮಂಡಲದಲ್ಲಿ ೨೭೦ ಮಿಮೀ ಮತ್ತು ಶಿವಮೊಗ್ಗದ ಸುಲಗೋಡು ೨೪೬.೬ ಮಿಮೀ ನಷ್ಟು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಘಟಕ ಮಾಹಿತಿ ನೀಡಿದೆ.
ಶಿವಮೊಗ್ಗದಲ್ಲಿ ಭಾರಿ ಮಳೆ ಸಾಧ್ಯತೆ
ಸಾಗರ, ತೀರ್ಥಹಳ್ಳಿ, ಹೊಸನಗರ ಮತ್ತು ಆಗುಂಬೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರಿಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಘಟಕ ಮಾಹಿತಿ ನೀಡಿದೆ. ಭಾರಿ ಮಳೆಯಿಂದಾಗಿ ತುಂಗ, ಭದ್ರಾ, ಶರಾವತಿ ಮತ್ತು ಕುಮುದಾವತಿ ನದಿಗಳು ಭರ್ತಿಯಾಗುವ ಸಾಧ್ಯತೆಗಳಿವೆ. ಈ ಬಾರಿ ಮುಂಗಾರು ಭೋರ್ಗರೆಯುತ್ತಿದ್ದು, ಕೆಲವರ ಮುಖದಲ್ಲಿ ಮಂದಹಾಸ ತರಿಸಿದರೆ ಮತ್ತೆ ಹಲವರಲ್ಲಿ, ಆತಂಕ ಸೃಷ್ಟಿಸಿದೆ.
ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚು ನೀರು
ಮಂಡ್ಯ: ಕೊಡಗು ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನಲ್ಲಿ ಏರಿಕೆಯಾಗಿದೆ.
ಜಲಾಶಯಕ್ಕೆ ೨೧೨೬ ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ. ಪ್ರಸ್ತುತ ಜಲಾಶಯದಲ್ಲಿ ೬೯.೬೫ ಅಡಿ ನೀರು ಸಂಗ್ರಹವಾಗಿದ್ದು, ೧೪೫೯ ಕ್ಯುಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರ್‌ಎಸ್‌ನ ನೀರಿನ ಮಟ್ಟ ೧೦೪.೬೦ ಅಡಿ ದಾಖಲಾಗಿತ್ತು. ಜಲಾಶಯಕ್ಕೆ ೩೩೨೮೭ ಕ್ಯುಸೆಕ್ಸ್ ನೀರು ಹರಿದು ಬರುತ್ತಿದ್ದರೆ, ಜಲಾಶಯದಿಂದ ಹೊರಕ್ಕೆ ೩೮೪ ಕ್ಯುಸೆಕ್ಸ್ ನೀರನ್ನು ಹರಿಯಬಿಡಲಾಗುತ್ತಿತ್ತು.
ಕೊಡಗಿನಲ್ಲಿ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ ಉಗಮ ಸ್ಥಾನ ಭಾಗಮಂಡಲ ಸಂಪೂರ್ಣ ಜಲಾವೃತವಾಗಿದ್ದು, ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಕೃಷ್ಣರಾಜ ಸಾಗರ ಜಲಾಶಯಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

Comments are closed.