ಕರಾವಳಿ

ರಸ್ತೆಯಲ್ಲಿ ತ್ಯಾಜ್ಯದ ರಾಶಿ : ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ

Pinterest LinkedIn Tumblr

bajpe_garabege_photo

ಬಜ್ಪೆ, ಜೂನ್.30 : ಗುರುಪುರ-ಕೈಕಂಬದಿಂದ ವಿಜಯ ಬ್ಯಾಂಕ್ ರಸ್ತೆಯಾಗಿ ಹೋಗುವ ರಸ್ತೆ ಬದಿಯಲ್ಲಿದ್ದ ಕಸವನ್ನು ಗಂಜಿಮಠ ಸಮೀಪದ ಐಟಿ ಪಾರ್ಕ್ ಬಳಿಯ ರಸ್ತೆ ಬದಿಗೆ ಸುರಿದ ವಿಲಕ್ಷಣ ಘಟನೆ ನಿನ್ನೆ ಸಂಜೆ ನಡೆದಿದೆ.

ಕೈಕಂಬದ ಸ್ಥಳೀಯರು, ಕೆಲವು ಅಂಗಡಿ ಮಾಲಕರರು ಕಸ ಹಾಗೂ ತ್ಯಾಜ್ಯವನ್ನು ಗುರುಪುರ ಕೈಕಂಬದ ಮಳಲಿ ರಸ್ತೆ ಬದಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸುರಿಯುತ್ತಲೇ ಇದ್ದಾರೆ. ಇದರಿಂದಾಗಿ ಮಳಲಿ ರಸ್ತೆಯಲ್ಲಿ ತ್ಯಾಜ್ಯದ ರಾಶಿಯೇ ಸೃಷ್ಟಿಯಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಈ ಬಗ್ಗೆ ಸ್ಥಳೀಯರು ಪಂಚಾಯತ್‌ಗೆ ದೂರು ನೀಡಿದ್ದರು. ಆ ಬಳಿಕ ಗಂಜಿಮಠ ಪಂಚಾಯತ್ ಆಡಳಿತ ಮಂಡಳಿ ಕಸ ಹಾಕುವ ಸ್ಥಳದಲ್ಲಿ ‘ಕಸ ಎಸೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂಬ ಬೋರ್ಡ್ ಹಾಕಿ ಕೈತೊಳೆದುಕೊಂಡಿತ್ತು.

ಪಂಚಾಯತ್‌ನ ಈ ಫಲಕ್ಕೆ ಕ್ಯಾರೇ ಎನ್ನದ ಕೆಲವು ಕೈಕಂಬದ ಸ್ಥಳೀಯ ನಿವಾಸಿಗಳು, ಕೈಕಂಬದ ಕೆಲವು ಅಂಗಡಿ ಮಾಲಕರು ಕಸವನ್ನು ಮಳಲಿ ರಸ್ತೆ ಬದಿಗೆ ರಾಜಾರೋಷವಾಗಿ ಎಸೆಯುತ್ತಿದ್ದರು. ಮಳೆಗಾಲ ಆರಂಭವಾಗುತ್ತಿದ್ದಂತೆ ಕಸಕ್ಕೆ ನೀರು ಸೇರಿ ಕೊಳೆಯಲಾರಂಭಿಸಿದ್ದಲ್ಲದೆ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ.

ಸಮಸ್ಯೆಯಿಂದ ಕಂಗಾಲಾಗಿರುವ ಕೆಲವರು ಕಸದ ಸಮಸ್ಯೆಗೆ ಮುಕ್ತಿ ನೀಡುವಂತೆ ಗಂಜಿಮಠ ಪಂಚಾಯತ್‌ಗೆ ಒಂದೇ ಸಮನೆ ಒತ್ತಡ ಹೇರಿದ್ದರು. ಗಂಜಿಮಠ ಪಂಚಾಯತ್ ಆಡಳಿತ ಮಂಡಳಿ ಕೈಕಂಬದ ವ್ಯಕ್ತಿಯೋರ್ವನಿಗೆ ಕಸ ತೆಗೆದು ವಿಲೇವಾರಿಗೊಳಿಸಲು ಗುತ್ತಿಗೆ ನೀಡಿತ್ತು. ನಿನ್ನೆ ಲಾರಿ ಸಮೇತ ಬಂದ ಗುತ್ತಿಗೆದಾರ ಸುಮಾರು ಒಂದು ಲೋಡ್‌ನಷ್ಟು ಕಸವನ್ನು ಲಾರಿಯಲ್ಲಿ ತುಂಬಿಸಿ ಅದನ್ನು ತೆಗೆದುಕೊಂಡು ಗಂಜಿಮಠ ಸಮೀಪದ ಐಟಿ ಪಾರ್ಕ್ ಬಳಿ ಸುರಿದು ಕೈತೊಳೆದುಕೊಂಡಿದ್ದಾನೆ.

ಇದರಿಂದಾಗಿ ಸ್ಥಳದಲ್ಲಿ ಗಬ್ಬುನಾತ ಹಬ್ಬಿದ್ದು ಈ ಕಸ ನೀರಿನ ಮೂಲಗಳಿಗೆ ಸೇರಿ ಇನ್ನಿಲ್ಲದ ತೊಂದರೆ ಸೃಷ್ಟಿಸಿ ಡೆಂಗ್ಯೂನಂಥ ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಸಿದೆ.

Comments are closed.