
ನ್ಯೂಯಾರ್ಕ್: ಮನೆಗೆಲಸವನ್ನ ಪರಸ್ಪರ ಹಂಚಿಕೊಂಡು ಮಾಡುವ ದಂಪತಿಗಳು ಹೆಚ್ಚು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ ಎನ್ನುತ್ತಿದೆ ಹೊಸ ಸಂಶೋಧನೆ. ಜರ್ನಲ್ ಆಫ್ ಮ್ಯಾರೇಜ್ ಅಂಡ್ ಫ್ಯಾಮಿಲಿಯ ಮುಂದಿನ ಸಂಚಿಕೆಯಲ್ಲಿ ಈ ಕುರಿತಾದ ಸಂಶೋಧನೆಯ ವರದಿ ಪ್ರಕಟಗೊಳ್ಳಲಿದೆ.
2006ರಲ್ಲಿ ಅಮೆರಿಕದ ದಂಪತಿಗಳಲ್ಲಿ ದಾಂಪತ್ಯದ ತೃಪ್ತಿ ಕುರಿತಾಗಿ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಈ ಸಂಶೋಧನೆಯ ಪ್ರಕಾರ, ಸಮನಾಗಿ ಮನೆಗೆಲಸವನ್ನ ಹಂಚಿಕೊಂಡು ಮಾಡುವ ದಂಪತಿಗಳು ತಿಂಗಳಿಗೆ ಸರಾಸರಿ 6-8 ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ, ಮನೆಗೆಲಸವನ್ನೆಲ್ಲ ಒಬ್ಬರೇ ಮಾಡುವ ದಂಪತಿಗಳಲ್ಲಿ ಇದರ ಸರಾಸರಿ ತಿಂಗಳಿಗೆ 5 ಎಂದು ತಿಳಿದುಬಂದಿದೆ.
ಅಡುಗೆ ಮಾಡುವುದು, ಬಟ್ಟೆಒಗೆಯುವುದು, ಪಾತ್ರೆ ತೊಳೆಯುವುದು, ಶಾಪಿಂಗ್ ಇವೇ ಮುಂತಾದ ಮನೆಗೆಲಸಗಳನ್ನ ಹಂಚಿಕೊಂಡು ಮಾಡುವುದರಿಂದ ದಾಂಪತ್ಯದಲ್ಲಾಗುವ ಬದಲಾವಣೆ ಬಗ್ಗೆ ಸಂಶೋಧಕರು ಸೂಕ್ಷ್ಮವಾಗಿ ಅಂಕಿ ಅಂಶ ಕಲೆಹಾಕಿದ್ದಾರೆ. ಪರಸ್ಪರ ಹಂಚಿಕೊಳ್ಳುವುದರಿಂದ ಪರಸ್ಪರ ಗೌರವ, ಪ್ರೀತಿ ಹೆಚ್ಚಾಗಿ ದೈಹಿಕ ಸಂಬಂಧದ ವೃದ್ಧಿಗೂ ನಾಂದಿಯಾಗುತ್ತದೆ ಎಂಬುದು ಸಂಶೋಧನೆಯ ಪ್ರಮುಖಾಂಶ.
ಸಂಶೋಧನೆಯಿಂದ ಹೊರಬಂದ ಮತ್ತೊಂದು ಪ್ರಮುಖಾಂಶವೆಂದರೆ, ಅಮೆರಿಕದಂತಹ ಮುಂದುವರೆದ ರಾಷ್ಟ್ರದಲ್ಲೂ ಈಗಲೂ ಮನೆಗೆಲಸ ಮಾಡುವವರು ಸ್ತ್ರೀಯರೇ ಹೆಚ್ಚು. ಶೇ.63ರಷ್ಟು ಮನೆಗಳಲ್ಲಿ ಸ್ತ್ರೀಯರೇ ಮನೆಗೆಲಸದ ನಿರ್ವಾಹಕರಾಗಿದ್ದಾರೆ.
Comments are closed.