ಕುಂದಾಪುರ: ತಾಲ್ಲೂಕಿನ ಬೈಂದೂರು ಸಮೀಪದ ಶಿರೂರು ಗ್ರೀನ್ವ್ಯಾಲಿ ನ್ಯಾಶನಲ್ ಸ್ಕೂಲ್ ಬಸ್ಸು ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಶಿರೂರಿನ ಸಂಕದಗುಂಡಿ ಎಂಬಲ್ಲಿ ಮಂಗಳವಾರ ನಡೆದಿದೆ. ಅಪಘಾತದಲ್ಲಿ ಶಾಲಾ ವಾಹನದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ ಸಂಜೆ ಶಾಲೆ ಮುಗಿದ ತರುವಾಯ ಶಾಲಾ ವಿದ್ಯಾರ್ಥಿಗಳನ್ನು ಕುಳ್ಳೀರಿಸಿಕೊಂಡು ಹೋಗುತ್ತಿದ್ದ ಶಾಲಾ ಬಸ್ಸು ಹಾಗೂ ಎದುರಿನಿಂದ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಶಾಲಾ ಬಸ್ಸಿನ ಎಡಭಾಗ ಹಾಗೂ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದ್ರಷ್ಟವಶಾತ್ ಶಾಲಾ ಬಸ್ಸಿನಲ್ಲಿದ್ದ ವಿದ್ಯಾರ್ಥಿಳು ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಕಾರಿನಲ್ಲಿದ್ದ ಕಾರು ಚಾಲಕ ಹಾಗೂ ಸವಾರರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತ ನಡೆದ ಬಳಿಕ ಶಾಲಾ ವಿದ್ಯಾರ್ಥಿಗಳನ್ನು ಇನ್ನೊಂದು ವಾಹನದಲ್ಲಿ ಮನೆಗೆ ಕಳುಹಿಸಲಾಗಿತ್ತು.
ಜನರಲ್ಲಿ ಭಯ…
ಕಳೆದ ಮಂಗಳವಾರ ಬೆಳಿಗ್ಗೆ ತ್ರಾಸಿಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ಕಾರು ಹಾಗೂ ಖಾಸಗಿ ಬಸ್ಸು ಡಿಕ್ಕಿಯಲ್ಲಿ ಎಂಟು ಪುಟಾಣಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಲ್ಲದೇ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡ ಆತಂಕಕಾರಿ ಘಟನೆ ಹಾಗೂ ಸೋಮವಾರ ಉಡುಪಿಯ ಬೀಡಿನಗುಡ್ಡೆಯಲ್ಲಿ ಶಾಲಾ ಬಸ್ಸುಗಳೆರಡರ ಮುಖಾಮುಖಿ ಅಪಘಾತ ಕೊಂಚದರಲ್ಲೇ ತಪ್ಪಿಹೋದ ಘಟನೆ ಬೆನ್ನಲ್ಲೇ ಬೈಂದೂರು ಶಿರೂರಿನಲ್ಲಿ ಶಾಲಾ ವಾಹನ ಅಪಘಾತ ನಡೆದಿರುವುದು ಪೋಷಕರು ಹಾಗೂ ಜನರನ್ನು ಭೀತರನ್ನಾಗಿಸಿದೆ.
ಮಳೆಗಾಲದ ಸಂದರ್ಭದಲ್ಲಿ ಶಾಲಾ ವಾಹನ ಚಾಲಕರು ಕೂಡ ಸಾಕಷ್ಟು ಜವಬ್ದಾರಿಯುತವಾಗಿ ಚಾಲನೆ ನಡೆಸಬೇಕಾಗಿದ್ದು ತಮ್ಮ ವಾಹನದಲ್ಲಿರುವ ಮಕ್ಕಳ ಬಗೆಗಿನ ಸಂಪೂರ್ಣ ಕಾಳಜಿ ಅವರ ಮೇಲಿದೆ ಎಂಬುದನ್ನು ಅರಿತು ಕಾರ್ಯನಿರ್ವಹಿಸಬೇಕಿದೆ.
Comments are closed.