
ಮಂಗಳೂರು,ಜೂ.28: ಕಾನೂನುಗಳಿರುವುದು ದುರ್ಘಟಣೆಗಳು ನಡೆದ ನಂತರ ಅದಕ್ಕೆ ಪರಿಹಾರಾರ್ಥವಾಗಿ, ಆದರೆ ಮಹಿಳೆಯರು ಮತ್ತು ಮಕ್ಕಳು ತಮ್ಮ ಮೇಲೆ ಆಗುತ್ತಿರುವ ಅತ್ಯಾಚಾರ, ದೌರ್ಜನ್ಯ ಮತ್ತು ಶೋಷಣೆಗಳಿಂದ ಮುಕ್ತರಾಗಲು ದುರ್ಘಟಣೆಗಳು ಸಂಭವಿಸದಂತೆ ಸದಾ ಜಾಗ್ರತೆಯಿಂದ ಇರಬೇಕೆಂದು 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಅವರು ಕರೆನೀಡಿದರು.
ಅವರು ಇಂದು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂರ್ಣಿಮಾ ಅವರು ಮಾತನಾಡಿ ಮಹಿಳೆಯರು ತಮಗೆ ಆಗುವ ಅನ್ಯಾಯ, ಅತ್ಯಾಚಾರ, ಶೋಷಣೆಗಳ ವಿರುದ್ಧ ಕಾನೂನು ನೆರವನ್ನು ಪಡೆದು ನೆಮ್ಮದಿಯ ಜೀವನ ನಡೆಸಲು ಮುಂದಾಗಬೇಕೆಂದು ಕರೆ ನೀಡಿದರು.

ನ್ಯಾಯವಾಧಿ ಉದಯಾನಂದ ಅವರು ಪೋಕ್ಸೋ ಕಾಯಿದೆ ಮತ್ತು ಅನಿತಾ ಕಿಣಿ ಮಹಿಳೆಯರ ಕುರಿತಾದ ಕಾನೂನುಗಳು ಎಂಬ ವಿಷಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಚಂದ್ರಿಕಾ ಅವರು ಮಾನವ ಸಾಗಾಣಿಕೆಯಿಂದ ತೊಂದರೆಗೊಳಗಾದವರಿಗೆ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಾ ದೌರ್ಜನ್ಯಕ್ಕೊಳಗಾದ ಅಸಾಯಕ 18 ರಿಂದ 45ವರ್ಷದೊಳಗಿನ ಮಹಿಳೆಯರು ಉದ್ಯೋಗಿನಿ ಯೋಜನೆಯಡಿಯಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ ಬ್ಯಾಂಕ್‌ಗಳ ಮೂಲಕ ಗರಿಷ್ಠ ರೂ. 1 ಲಕ್ಷದವರೆಗೂ ಸಾಲ ಸೌಲಭ್ಯಗಳನ್ನು ದೊರಕಿಸಲಾಗುತ್ತಿದ್ದು ಇಲಾಖೆ ವತಿಯಿಂದ ಗರಿಷ್ಠ ರೂ. 10 ಸಾವಿರದವರೆಗೂ ಸಹಾಯಧನ ದೊರಕುವುದೆಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲಣ್ಣಗೌಡ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂರಕ್ಷಣಾಧಿಕಾರಿ ಎ. ಉಸ್ಮಾನ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ: ಸವಿತಾ ಮೊದಲಾದವರು ಉಪಸ್ಥಿತರಿದ್ದರು.
Comments are closed.