ಕರ್ನಾಟಕ

ಸಿದ್ದು ಪದಚ್ಯುತಿಗೆ ಅಚಲ ಯತ್ನ: ಸೊರಗಿದ ಭಿನ್ನಮತ

Pinterest LinkedIn Tumblr

cmmಬೆಂಗಳೂರು, ಜೂ. ೨೭- ಭಿನ್ನರ ಶಕ್ತಿ ದಿನೇದಿನೇ ಕ್ಷೀಣಿಸುತ್ತಿದ್ದರೂ, ಛಲಬಿಡದ ತ್ರಿವಿಕ್ರಮನಂತೆ ಈ ಗುಂಪಿನ ನಾಯಕರೆಂದು ಗುರುತಿಸಿಕೊಂಡಿರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಇಂದೂ ಸಿದ್ದರಾಮಯ್ಯರ ನಾಯಕತ್ವ ಬದಲಾವಣೆ ಆಗಬೇಕು ಎಂಬ ತಮ್ಮ ಒಂದಂಶದ ಹೋರಾಟವನ್ನು ಮುಂದುವರೆಸಿದ್ದಾರೆ.

ತಮ್ಮ ನಿವಾಸದಲ್ಲಿ ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿದ ಅವರು, ನಾಯಕತ್ವ ಬದಲಾವಣೆ ಹೋರಾಟವನ್ನು ಜೀವಂತವಾಗಿರಿಸುವ ಪ್ರಯತ್ನ ಮುಂದುವರೆಸಿದ್ದಾರೆ.
ಭಿನ್ನರ ಗುಂಪಿನ ನಾಯಕತ್ವ ವಹಿಸಿಕೊಳ್ಳಲು ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರು, ಆಸಕ್ತಿ ತೋರದಿದ್ದರೂ, ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.
ಶಾಸಕರಾದ ಡಾ. ಮಾಲಕ ರೆಡ್ಡಿ, ಪುಟ್ಟರಂಗ ಶೆಟ್ಟಿ, ನರೇಂದ್ರ, ಮತ್ತಿತರರು ಇಂದು ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ತೆರಳಿ ಮುಂದಿನ ಹೋರಾಟದ ಬಗೆಗಿನ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.
ಸಿದ್ದರಾಮಯ್ಯ ನಾಯಕತ್ವ ಬದಲಾವಣೆಯಾಗಬೇಕು ಎಂದು ಪಟ್ಟು ಹಿಡಿದಿರುವ ಶ್ರೀನಿವಾಸ್ ಪ್ರಸಾದ್, ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ಮುಂದುವರೆಸಿದ್ದಾರೆ. ಎಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಅವರು ನಿನ್ನೆ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಅದಕ್ಕೂ ಜಗ್ಗದ ಶ್ರೀನಿವಾಸ್ ಪ್ರಸಾದ್ ಭಿನ್ನಮತೀಯ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ.
ಜುಲೈ 4 ರಿಂದ ಆರಂಭವಾಗಲಿರುವ ಅಧಿವೇಶನ ಸಂದರ್ಭದಲ್ಲಿ ಅತೃಪ್ತ ಶಾಸಕರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನು ಮುಂದುವರೆಸುವ ಚಿಂತನೆಯಲ್ಲಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡು ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿಬಿದ್ದಿರುವ ಅಂಬರೀಶ್, ಕಮರುಲ್ ಇಸ್ಲಾಂ, ಮುಂತಾದವರೊಂದಿಗೆ ನಿಕಟ ಸಂಪರ್ಕ ಸಾಧಿಸುತ್ತಲೇ ಭಿನ್ನಮತೀಯ ಶಾಸಕರನ್ನೆಲ್ಲಾ ಕಲೆಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭಿನ್ನ ಶಾಸಕರ ಗುಂಪನ್ನು ಒಡೆಯುವ ಪ್ರಯತ್ನ ಮುಂದುವರೆಸಿದ್ದು, ಆ ಗುಂಪಿನಲ್ಲಿ ಕಾಣಿಸಿಕೊಂಡವರಿಗೆ ನಿಗಮ ಮಂಡಳಿಗಳ ಹಾಗೂ ಇತರೆ ರಾಜಕೀಯ ಸ್ಥಾನಮಾನ ಕಲ್ಪಿಸುವತ್ತ ಕಾರ್ಯಕ್ರಮ ರೂಪಿಸಿದ್ದಾರೆ.
ಭಿನ್ನರ ಚಟುವಟಿಕೆಗಳನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಸ್ಥಳೀಯವಾಗೆ ತಮ್ಮ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಿ ಎಂಬ ಉದ್ದೇಶದಿಂದ ಹೈಕಮಾಂಡ್ ಸಂಧಾನಕ್ಕಾಗಿ ಯಾರನ್ನೂ ಕಳುಹಿಸುವ ಪ್ರಯತ್ನ ಮಾಡಿಲ್ಲ.

Comments are closed.