
ಮಂಗಳೂರು, ಜೂ.27: ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಿಸಿದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶಿಸಿದ ’ನೇಮೊದ ಬೂಳ್ಯ’ ತುಳು ಸಿನಿಮಾದ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಭಾನುವಾರ ಸಂಜೆ ಮಂಗಳೂರಿನ ಪುರಭವನದಲ್ಲಿ ಜರಗಿತು.
ತುಳು ರಂಗಭೂಮಿ ಹಾಗೂ ತುಳುಚಿತ್ರ ನಿರ್ದೇಶಕ, ನಿರ್ಮಾಪಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿ, ಸಿನಿಮಾದ ಯಶಸ್ವಿಗೆ ಶುಭಕೋರಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಸಂಗೀತಾ ನಿರ್ದೇಶಕ ವಿ.ಮನೋಹರ್, ನಟ ನಿರ್ದೇಶಕ, ನಿರ್ಮಾಪಕ ದೇವದಾಸ್ ಕಾಪಿಕಾಡ್, ಹಿರಿಯ ಚಿತ್ರ ನಿರ್ದೇಶಕರಾದ ಡಾ.ಸಂಜೀವ ದಂಡೆಕೆರಿ, ಡಾ.ರಿಚರ್ಡ್ ಕ್ಯಾಸ್ಟಲಿನೋ, ನಿರ್ಮಾಪಕ ಮೇಗಿನ ಮನೆ ಬಾಲಕೃಷ್ಣ ಶೆಟ್ಟಿ ಮೊದಲಾದವರು ’ನೇಮೊದ ಬೂಳ್ಯ’ ತುಳು ಸಿನಿಮಾದ ಧ್ವನಿ ಸುರಳಿಯನ್ನು ಬಿಡುಗಡೆಗೊಳಿಸಿದರು.

ಇನ್ನೂರು ವರ್ಷಗಳ ಹಿಂದಿನ ಸತ್ಯಘಟನೆ :
ಇನ್ನೂರು ವರ್ಷಗಳ ಹಿಂದೆ ಪುತ್ತೂರು ಸಮೀಪದ ಬೆಟ್ಟಂಪಾಡಿ ಎಂಬಲ್ಲಿ ನಡೆದ ಸತ್ಯಘಟನೆಯನ್ನು ಆಧಾರಿಸಿದ ಕತೆಯನ್ನು ಖ್ಯಾತ ನಾಟಕಕಾರ ಬಿ.ಕೆ.ಗಂಗಾಧರ ಕಿರೋಡಿಯನ್ ಅವರು ಈಗಾಗಲೇ ನಾಟಕರೂಪವನ್ನಾಗಿ ‘ನೇಮೊದ ಬೂಳ್ಯ’ ಎಂಬುದಾಗಿ ರಂಗಪರದೆಗೆ ತಂದಿದ್ದರು. ಇದೀಗ ಅದೇ ಕತೆಯನ್ನು ಅವರು ತುಳುವಿನಲ್ಲಿ ಸಿನಿಮಾ ಮಾಡಿದ್ದಾರೆ.
ಪರತಿಮಂಗಣೆ ಪಾಡ್ದನದ ಆಧಾರಿತ ಕತೆಯಾದ ‘ನೇಮೊದ ಬೂಳ್ಯ’ ಸಿನಿಮಾ ಸದ್ದುಗದ್ದಲವಿಲ್ಲದೆ ಚಿತ್ರೀಕರಣಗೊಂಡು ಈಗ ಬಿಡುಗಡೆಯ ಹಂತದಲ್ಲಿದೆ. ನವಮುಂಬಯಿಯ ಹೊಟೇಲ್ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ಅವರು ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಿದ್ದು, ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಬಿ.ಕೆ.ಗಂಗಾಧರ ಕಿರೋಡಿಯನ್ ಮಾಡಿದ್ದಾರೆ.
ಪರತಿಮಂಗಣೆ ದೈವದ ಪಾಡ್ದನ ಆಧಾರಿಸಿ ಸಿನಿಮಾ ತಯಾರಾಗಿದೆ. ವಿ.ಮನೋಹರ್ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಉಮಾಪತಿ ಬೆಂಗಳೂರು ಕ್ಯಾಮರಾ, ಪ್ರಕಾಶ್ ಕಾರಿಂಜ ಸಂಕಲನವಿದ್ದು, ಪ್ರತಾಪ್ ಸಾಲ್ಯಾನ್ ಕದ್ರಿ ಸಹ ನಿರ್ದೇಶಕರಾಗಿದ್ದಾರೆ.
ಕಾರ್ಕಳ, ಕೆಮ್ಮಣ್ಣು , ನಿಟ್ಟೆ ಮೊದಲಾದ ಗ್ರಾಮೀಣ ಪರಿಸರದಲ್ಲಿ ಒಂದೇ ಹಂತದಲ್ಲಿ 32 ದಿನಗಳ ಕಾಲ ಸಿನಿಮಾಕ್ಕೆ ಸತತ ಚಿತ್ರೀಕರಣ ನಡೆದಿತ್ತು.
ಸಿನಿಮಾದಲ್ಲಿ ಪ್ರೀತಂ ಶೆಟ್ಟಿ ಕಡಾರ್ ಪ್ರದಾನ ಪಾತ್ರ ನಟಿಸಿದ್ದರೆ ಪರತಿ ಮಂಗಣೆಯಾಗಿ ಕಿರುತೆರೆ ನಟಿ ರಜನಿ ಅಭಿನಯಿಸಿದ್ದಾರೆ. ಉಳಿದಂತೆ ಖಳನಾಯಕ ಅಣ್ಣಪ್ಪ ಬಲ್ಲಾಳನಾಗಿ ಪ್ರದೀಪ್‌ಚಂದ್ರ ಉಡುಪಿ ನಟಿಸಿದ್ದಾರೆ. ರಮೇಶ್ ಭಟ್, ಮಂಡ್ಯರಮೇಶ್, ವಿ.ಮನೋಹರ್, ರಘುರಾಮ ಶೆಟ್ಟಿ, ರಮೇಶ್ ಕಲ್ಲಡ್ಕ, ಮೋಹನ್ ಬೋಳಾರ್, ಶ್ರೀಮತಿ ಜಯಶೀಲ, ಪವಿತ್ರ ಶೆಟ್ಟಿ, ವೀಣಾ ಶೆಟ್ಟಿ, ಪ್ರತಿಭಾ, ಜಲಜ ಬೆಂಗಳೂರು, ಇಂದಿರಾ, ಮಮತಾ, ಯೋಗಿತಾ, ಹರಿಣಿ ಮೊದಲಾದವರು ತಾರಾಗಣದಲ್ಲಿದ್ದಾರೆ.ಸಿನಿಮಾ ಅಕ್ಟೋಬರ್ ನಲ್ಲಿ ತೆರೆಕಾಣಲಿದೆ.
ಇದೊಂದು ಸತ್ಯ ಘಟನೆ ಆಧಾರಿತ ಸಿನಿಮಾ. ಪುತ್ತೂರು ತಾಲೂಕಿನ ಬೊಟ್ಟಂಪಾಡಿ ಈಗ ಬೆಟ್ಟಂಪಾಡಿ ಎಂಬುದಾಗಿ ಹೆಸರು ಬದಲಾಗಿದೆ. ಪರತಿ ಮಂಗಣೆ ಪಾಡ್ದನವನ್ನಾಧರಿಸಿ ಬಿ.ಕೆ.ಗಂಗಾಧರ ಕಿರೋಡಿಯನ್ ಕತೆ ಚಿತ್ರಕತೆ ಬರೆದಿದ್ದಾರೆ. ಸಿನಿಮಾದಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ತುಂಬಾ ಸೊಗಸಾಗಿದೆ. ಸತ್ಯ ಘಟನೆ ಎಂಬ ಕಲ್ಪನೆಯಲ್ಲಿ ಪ್ರೇಕ್ಷಕರಿಗೂ ಭಕ್ತಿಭಾವ ಉಂಟಾಗುತ್ತದೆ. ಕತೆಯನ್ನು ನಿರೂಪಿಸಿದ ಶೈಲಿಯಲ್ಲಿ ಕಲಾವಿದರು ಪಾತ್ರಗಳಾಗಿ ಜೀವತುಂಬಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ನೈಜತೆ ಮೂಡಿದೆ ಎಂದು ನಿರ್ದೇಶಕ ಬಿ.ಕೆ.ಗಂಗಾಧರ ಕಿರೋಡಿಯನ್ ತಿಳಿಸಿದ್ದಾರೆ.
Comments are closed.