ರಾಷ್ಟ್ರೀಯ

ಚೆನ್ನೈ: ಹಾಡುಹಗಲೇ ಇನ್‌ಫೋಸಿಸ್‌ ಮಹಿಳಾ ಉದ್ಯೋಗಿಯ ಬರ್ಬರ ಹತ್ಯೆ

Pinterest LinkedIn Tumblr

Swathi Infosys-700ಚೆನ್ನೈ : ನಗರದಲ್ಲಿ ಕೆಲವು ದಿನಗಳ ಹಿಂದೆ ಹಾಡು ಹಗಲಲ್ಲೇ ವಕೀಲರೊಬ್ಬರನ್ನು ಕೊಚ್ಚಿ ಕೊಲ್ಲಲಾಗಿತ್ತು. ಇದೀಗ ಇನ್‌ಫೋಸಿಸ್‌ ಸಂಸ್ಥೆಯ ಯುವ ಉದ್ಯೋಗಿಯಾಗಿರುವ 24ರ ಹರೆಯದ ಎಸ್‌ ಸ್ವಾತಿ ಎಂಬವರನ್ನು ನಂಗಂಬಾಕಂ ರೈಲು ನಿಲ್ದಾಣದಲ್ಲಿ ಇಂದು ಶುಕ್ರವಾರ ಬೆಳಗ್ಗೆ ಅದೇ ರೀತಿ ಕೊಚ್ಚಿ ಕೊಲೆಗೈಯಲಾಗಿದೆ.

ಅಮಾನುಷವಾಗಿ ಕೊಲೆಗೀಡಾಗಿರುವ ಸ್ವಾತಿ ಅವರು ಚೂಲೈಮೇಡು ಎಂಬಲ್ಲಿನ ನಿವಾಸಿಯಾಗಿದ್ದಾರೆ. ಆಕೆ ತನ್ನ ಕಚೇರಿ ಇರುವ ಮಹೀಂದ್ರಾ ಟೆಕ್‌ ಪಾರ್ಕ್‌ ಗೆ ಹೋಗಲು 2ನೇ ನಂಬರ್‌ ನ ಪ್ಲಾಟ್‌ ಫಾರಂನಲ್ಲಿ ರೈಲಿಗಾಗಿ ಕಾಯುತ್ತಿದ್ದರು. ಆಗ ಕಪ್ಪು ಪ್ಯಾಂಟ್‌, ಹಸಿರು ಶರ್ಟ್‌ ತೊಟ್ಟ ವ್ಯಕ್ತಿಯೋರ್ವ ಆಕೆಯ ಬಳಿಗೆ ಬಂದ.

ಸ್ವಾತಿಯೊಂದಿಗೆ ಈ ಅಪರಿಚಿತ ವ್ಯಕ್ತಿ ಕೆಲವು ನಿಮಿಷಗಳ ಕಾಲ ಆಕ್ರೋಶಭರಿತವಾಗಿ ವಾಗ್ಯುದ್ಧ ನಡೆಸಿದ. ಬಳಿಕ ತನ್ನ ಟ್ರಾವೆಲಿಂಗ್‌ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದ ಹರಿತವಾದ ಕತ್ತಿಯನ್ನು ಹೊರತೆಗೆದು ಆಕೆಯ ಮೇಲೆ ದಾಳಿ ಮಾಡಿ ಹಲವು ಬಾರಿ ಆಕೆಯನ್ನು ಕತ್ತಿಯಿಂದ ಹೊಡೆದ. ಆತನ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಸ್ವಾತಿ ಯತ್ನಿಸಿದಳಾದರೂ ಸಾಧ್ಯವಾಗದೆ ನೆಲಕ್ಕೆ ಬಿದ್ದಳು.

ಪ್ಲಾಟ್‌ ಫಾರಂನಲ್ಲಿದ್ದವರು ನೋಡ ನೋಡುತ್ತಿದ್ದಂತೆಯೇ ಈ ಅಮಾನುಷ ದಾಳಿಯ ಕೃತ್ಯ ನಡೆದು ಹೋಗಿತ್ತು. ಅವರು ಸ್ವಾತಿಯ ಬಳಿಗೆ ಧಾವಿಸಿ ಬರುವಷ್ಟರಲ್ಲಿ ಹಂತಕನು ಅಲ್ಲಿಂದ ಓಡಿ ಹೋಗಿದ್ದ.

ಕತ್ತಿಯಿಂದ ಹಲವಾರು ಮಾರಣಾಂತಿಕ ಏಟನ್ನು ಪಡೆದಿದ್ದ ಸ್ವಾತಿ ಗಂಭೀರವಾಗಿ ಗಾಯಗೊಂಡು ಪ್ಲಾಟ್‌ ಫಾರಂನಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಳು. ಸುಮಾರು ಎರಡು ತಾಸು ಕಾಲ ಸ್ವಾತಿಯ ಮೃತ ದೇಹ ಪ್ಲಾಟ್‌ ಫಾರಂನಲ್ಲೇ ಇತ್ತು. ಅನಂತರವೇ ಅದನ್ನು ಶವಾಗಾರಕ್ಕೆ ಒಯ್ಯಲಾಯಿತು.

ಸ್ವಾತಿಗೆ ಗೊತ್ತಿದ್ದ ವ್ಯಕ್ತಿಯೇ ಆಕೆಯನ್ನು ಕತ್ತಿಯಿಂದ ಕೊಚ್ಚಿ ಕೊಂದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಈ ಕೊಲೆ ರಹಸ್ಯವನ್ನು ಭೇದಿಸಲು ಪೊಲೀಸರೀಗ ಸ್ವಾತಿಯ ಮನೆಯವರನ್ನು, ಸ್ನೇಹಿತರನ್ನು ಪ್ರಶ್ನಿಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಅಪರಿಚಿತ ಹಂತಕನಿಗಾಗಿ ವ್ಯಾಪಕ ಬಲೆ ಬೀಸಿದ್ದಾರೆ.
-ಉದಯವಾಣಿ

Comments are closed.