ಕರಾವಳಿ

ಬೈಕ್ ಸಹಿತ ಇಬ್ಬರು ಕಳ್ಳರ ಬಂಧನ

Pinterest LinkedIn Tumblr

baike_theft_accused

ಪುತ್ತೂರು, ಜೂ.24: ಕಳೆದ ಜನವರಿ ತಿಂಗಳಲ್ಲಿ ಕಳವಾಗಿದ್ದ ಬೈಕ್ ಒಂದನ್ನು ಪುತ್ತೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಸಾಮೆತ್ತಡ್ಕ ನಿವಾಸಿ ಪ್ರಸಾದ್ (23) ಮತ್ತು ಪಡೀಲ್ ನಿವಾಸಿ ಕಾರ್ತಿಕ್ (24) ಎಂದು ಗುರುಸಿಲಾಗಿದೆ.

ಪುತ್ತೂರು ನಗರ ಠಾಣಾ ಎಸ್‌ಐ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿ ನಿನ್ನೆ ನಸುಕಿನ ಜಾವ ನಗರದಲ್ಲಿ ಗಸ್ತು ತಿರುಗುತ್ತಿದ್ದಾಗ ಜೈನ ಭವನದ ಬಳಿ ಈ ಇಬ್ಬರು ಯುವಕರು ಬೈಕ್‌ನಲ್ಲಿ ಬರುತ್ತಿದ್ದು, ಸಂಶಯಾಸ್ಪದವಾಗಿ ಕಂಡು ಬಂದ ಕಾರಣ ಪೊಲೀಸರು ತಡೆ ಹಿಡಿದು ವಿಚಾರಿಸಿದರು. ಈ ಸಂದರ್ಭ ಅವರಲ್ಲಿದ್ದ ಬೈಕ್ ಕಳವು ಮಾಡಿದ್ದೆಂಬುದು ಬೆಳಕಿಗೆ ಬಂತು.

ಕಳೆದ ಜನವರಿ 10ರಂದು ನಗರದ ಪಡ್ನೂರು ಗ್ರಾಮದ ಕುಂಜಾರು ದೇವಸ್ಥಾನದ ಬಳಿ ನಿಲ್ಲಿಸಿದ್ದ ತನ್ನ ಬೈಕ್ ಕಳವಾಗಿರುವ ಬಗ್ಗೆ ಹರಿಪ್ರಸಾದ್ ಶೆಟ್ಟಿ ಎಂಬವರು ದೂರು ನೀಡಿದ್ದರು. ಅದೇ ಬೈಕ್ ಇದಾಗಿದ್ದು, ಆರೋಪಿಗಳು ಮಾರಾಟ ಮಾಡಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ನಿನ್ನೆ ಬೈಕ್‌ನ್ನು ಕಾಸರಗೋಡಿಗೆ ಕೊಂಡೊಯ್ದು ಮಾರಾಟ ಮಾಡುವ ಸನ್ನಾಹದಲ್ಲಿದ್ದರು ಎಂಬುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

ನಗರ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಬಂಧನ ಕಾರ್ಯಾಚರಣೆಯಲ್ಲಿ ಎಚ್.ಸಿ.ಗಳಾದ ನಾರಾಯಣ, ದಾಮೋದರ, ಪಿಸಿಗಳಾದ ಉದಯ ಕುಮಾರ್, ಪ್ರಶಾಂತ್ ಶೆಟ್ಟಿ, ಪ್ರಶಾಂತ್ ರೈ, ಮಲ್ಲೇಶ್, ಮೋಹನ್ ಅವರು ಭಾಗವಹಿಸಿದ್ದರು.

Comments are closed.