
ಬೆಂಗಳೂರು: ಶಿವಾಜಿನಗರದಲ್ಲಿ ಗ್ಯಾಂಗ್‌ವಾರ್ ನಡೆಸಿ ರೌಡಿ ಪರ್ವೀಜ್‌ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ರೌಡಿ ಶೀಟರ್ ಶಬ್ಬೀರ್ (34) ಮತ್ತು ಆತನ ಸಹಚರನನ್ನು ಎಚ್‌ಬಿಆರ್ ಲೇ ಔಟ್ ಬಳಿ ಕೆ.ಜೆ.ಹಳ್ಳಿ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆಂಗಳೂರು ನಗರ ಪೊಲೀಸರು ಕೇವಲ 5 ತಾಸಿನಲ್ಲೇ ಶಬ್ಬೀರ್ ಜತೆ ಮತ್ತೊಬ್ಬ ರೌಡಿ ಬರ್ಕಾತ್‌ನನ್ನು ಬಂಧಿಸಿದ್ದಾರೆ.
ಶಿವಾಜಿನಗರದ ರೌಡಿಗಳ ಗ್ಯಾಂಗ್‌ವಾರ್ ಗುಂಡಿನ ದಾಳಿ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೂರ್ವ ವಲಯದ ಪೊಲೀಸರು ನಾಕಾ ಬಂದಿ ಮಾಡಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಡೆದಿದ್ದೇನು:
ರಾತ್ರಿ 10 ಗಂಟೆಗೆ ಪರ್ವೀಜ್ ಹತ್ಯೆಯಾದ ನಂತರ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಬೇಟೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಈ ನಡುವೆ ಇಂದು ಮುಂಜಾನೆ 3 ಗಂಟೆ ಸಂದರ್ಭದಲ್ಲಿ ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ಪ್ರಸಾದ್ ಅವರು ಗಸ್ತಿನಲ್ಲಿದ್ದಾಗ ಸಾರಾಯಿ ಪಾಳ್ಯ ಬಸ್ ನಿಲ್ದಾಣದ ಬಳಿ ನಂಬರ್ ಪ್ಲೇಟ್ ಇಲ್ಲದ ಹೀರೋ ಹೋಂಡಾ ಸ್ಪೆಂಡ್ಲರ್ ವಾಹನ ಹೋಗುತ್ತಿರುವುದನ್ನು ನೋಡಿ ಅನುಮಾನಗೊಂಡು ತಮ್ಮ ವಾಕಿ ಟಾಕಿಯ ಮೂಲಕ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಿದ್ದಾರೆ.
ಬೈಕ್ ನಾಗವಾರ, ಗೋವಿಂದಪುರ, ಎಚ್‌ಬಿಆರ್ ಲೇ ಔಟ್ ಕಡೆಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಅಲರ್ಟ್ ಆಗಿ ತಪಾಸಣೆ ಕಾರ್ಯವನ್ನು ಚುರುಕುಗೊಳಿಸಿದ್ದರು.ಈ ನಡುವೆ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಮತ್ತು ಹೆಡ್‌ಕಾನ್ಸ್‌ಟೇಬಲ್ ಪದ್ಮನಾಭ್, ಕಾನ್ಸ್‌ಟೇಬಲ್ ರಾಜು, ಆಂತೋಣಿ ಬೈಕ್‌ನ್ನು ಅರಣ್ಯ ಪ್ರದೇಶದ ಬಳಿ ನೋಡಿ ತಡೆಯಲು ಮುಂದಾದರು. ಆಗ ಬೈಕ್ ಓಡಿಸುತ್ತಿದ್ದ ಬರ್ಕಾತ್ ಏಕಾಏಕಿ ಡ್ರಾಗರ್ ತೆಗೆದು ಪೊಲೀಸರು ಮೇಲೆಯೇ ಹಲ್ಲೆಗೆ ಮುಂದಾದ.
ಇದಲ್ಲದೆ ರೌಡಿ ಶಬ್ಬೀರ್ ಕೂಡ ತನ್ನ ಜೇಬಿನಲ್ಲಿಟ್ಟುಕೊಂಡಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಲು ಮುಂದಾದ. ಇದರಿಂದ ಎಚ್ಚೆತ್ತುಕೊಂಡ ಕಾನ್‌ಸ್ಟೇಬಲ್ ಪದ್ಮನಾಭ ಅವರ ಮೇಲೆರಗಿ ಪಿಸ್ತೂಲು ಕಿತ್ತುಕೊಳ್ಳಲು ಹೋದಾಗ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಆದರೂ ಛಲ ಬಿಡದೆ ಮುನ್ನುಗ್ಗಿದಾಗ ಸಮಯ ಪ್ರಜ್ಞೆ ತೋರಿ ಸಿಬ್ಬಂದಿಗಳ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಅವರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ.
ಆದರೂ ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ರೌಡಿಗಳ ದಾಳಿಗೆ ಮುಂದಾದಾಗ ಇನ್ಸ್‌ಪೆಕ್ಟರ್ ಹಾರಿಸಿದ ಒಂದು ಗುಂಡು ಶಬ್ಬೀರ್‌ನ ಎಡ ತೊಡೆಗೆ, ಮತ್ತೊಂದು ಗುಂಡು ಬರ್ಕಾತ್‌ನ ಎಡಗಾಲಿನ ಮಂಡಿಗೆ ಬಡಿದು ಓಡುತ್ತಿದ್ದ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಕಾನ್ಸ್‌ಸ್ಟೇಬಲ್ ಪದ್ಮನಾಭ್ ಅವರ ಎಡಗೈಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಾಯಗೊಂಡಿರುವ ರೌಡಿಗಳನ್ನು ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಕೃತ್ಯಕ್ಕೆ ಬಳಸಿದ ಪಿಸ್ತೂಲು ಒಂದು ಚಾಕು, ಡ್ರ್ಯಾಗರ್, ಚಾಕು, ಎರಡು ಮೊಬೈಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಬರ್ಕಾತ್ ಕೂಡ ಹಲವು ಅಪರಾಧ ಕೃತ್ಯ ನಡೆಸಿದ್ದು ನಗರದ ಹಲವು ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
Comments are closed.