ಕುಂದಾಪುರ: ಕುಂದಾಪುರ ತಾಲೂಕಿನ ಕಂಡ್ಲೂರು ದೂಪದಕಟ್ಟೆಯಲ್ಲಿರುವ ಸಂತ ಅಂತೋನಿ ಪ್ರಾರ್ಥನಾ ಮಂದಿರದ ಎಡಭಾಗದ ಬಾಗಿಲಿನ ಚಿಲಕ ಒಡೆದ ಕಳ್ಳರು ಒಳಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು ಜೂ.22 ಬುಧವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಕುಂದಾಪುರ-ಸಿದ್ದಾಪುರ ರಾಜ್ಯ ಹೆದ್ದಾರಿಯ ದೂಪದಕಟ್ಟೆ ಎಂಬಲ್ಲಿರುವ ಸಂತ ಅಂತೋನಿ ಪ್ರಾರ್ಥನಾ ಮಂದಿರ ಇತೀಚೆಗೆ ಸ್ವತಂತ್ರ ಚರ್ಚ್ ಆಗಿ ಘೋಷಣೆಯಾಗಿ ನಿತ್ಯ ಪೂಜೆಗಳು ನಡೆಯುತ್ತಿತ್ತು. ಬುಧವಾರ ಬೆಳಿಗ್ಗೆ ಭಕ್ತರು ಪ್ರಾರ್ಥನಾ ಮಂದಿರಕ್ಕೆ ಪ್ರಾರ್ಥನೆಗೆ ಬಂದ ವೇಳೆ ಚರ್ಚ್ ಒಂದು ಬದಿಯ ಬಾಗಿಲಿನ ಚಿಲಕ ಮುರಿದಿರುವುದು ಬೆಳಕಿಗೆ ಬಂದಿದೆ. ಒಳಗಡೆ ಪರಿಶೀಲನೆ ನಡೆಸುವಾಗ ಕಪಾಟುಗಳನ್ನು ಜಲಾಡಿರುವುದು ಮತ್ತು ಕಾಣಿಕೆ ಹುಂದಿ ಒಡೆದಿರುವುದು ಬೆಳಕಿಗೆ ಬಂದಿದ್ದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವುದು ತಿಳಿದುಬಂದಿದೆ. ಆದರೇ ಕಾಣಿಕೆಹುಂದಿಯನ್ನು ಇತ್ತೀಚೆಗಷ್ಟೇ ಖಾಲಿಮಾಡಿದ್ದ ಕಾರಣ ಅದರಲ್ಲಿ ಹೆಚ್ಚೇನು ಹಣವಿರಲಿಲ್ಲ. ಹಣಕ್ಕಾಗಿ ಕಪಾಟುಗಳನ್ನು ಜಾಲಾಡಿದ ಕಾರಣ ಅದರಲ್ಲಿದ್ದ ಪೂಜಾ ಸಾಮಾಗ್ರಿಗಳು ಹಾನಿಯಾಗಿದ್ದು ಮಾತ್ರವಲ್ಲದೇ ಕಳ್ಳರು ಕಪಾಟಿನಲ್ಲಿದ್ದ ವಸ್ತುಗಳನ್ನು ಎಸೆದಿದ್ದಾರೆ.
ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಅಧೀನದಲ್ಲಿದ್ದ ಕಂಡ್ಲೂರು ಸಂತ ಅಂತೋನಿ ಪ್ರಾರ್ಥನಾ ಮಂದಿರವನ್ನು ಜೂ.10ರಂದು ಸ್ವತಂತ್ರ ಚರ್ಚ್ ಆಗಿ ಮಾಡಿದ್ದು ಮಾತ್ರವಲ್ಲದೇ ಇಲ್ಲಿನ ನೂತನ ಧರ್ಮ ಗುರುಗಳಾಗಿ ಫಾ. ವಿಕ್ಟರ್ ಡಿಸೋಜಾ ಅವರನ್ನು ನೇಮಿಸಲಾಗಿತ್ತು.
ಜೂ.೫ರ ರಾತ್ರಿ ಪ್ರಾರ್ಥನಾ ಮಂದಿರದ ಎದುರಿಗಿದ್ದ ಅಂತೋನಿಯವರ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ಈ ಭಾಗದಲ್ಲಿ ಅಶಾಂತಿ ನಿರ್ಮಿಸುವ ಕುಕೃತ್ಯ ನಡೆಸಿದ್ದರು. ಜೂ.೬ರಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು ಘಟನ ಸ್ಥಳಕ್ಕೆ ಎಸ್ಪಿ ಕೆ.ಅಣ್ಣಾಮಲೈ ಹಾಗೂ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ತನಿಖೆ ಭರವಸೆ ನೀಡಿದ್ದರು. ಆದರೇ ಆ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಅದೇ ಚರ್ಚಿನಲ್ಲಿ ಇನ್ನೊಂದು ಕಳ್ಳತನ ಯತ್ನ ನಡೆದಿರುವುದು ಭಕ್ತರನ್ನು ಸೇರಿದಂತೆ ಸ್ಥಳಿಯ ನಾಗರೀಕರಲ್ಲಿ ಆತಂಕವನ್ನುಂಟು ಮಾಡಿದೆ.
ಇದು ಕಳ್ಳತನ ಯತ್ನವೋ ಅಥವಾ ಕಳೆದ ಬಾರೊ ಚರ್ಚ್ ಎದುರಿನ ಅಂತೋನಿಯವರ ಮೂರ್ತಿ ಪುಡಿಗೈದ ರೀತಿಯಲ್ಲಿ ಕಿಡಿಗೇಡಿಗಳೇ ನಡೇಸಿದ ಕುಕೃತ್ಯವೋ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಎಸ್.ಐ. ನಾಸೀರ್ ಹುಸೇನ್ ಮೊದಲಾದವರು ಭೇಟಿನೀಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೇಸಿದೆ.
Comments are closed.