
ಮಂಡ್ಯ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಶೀಘ್ರದಲ್ಲೇ ಸಿದ್ದರಾಮಯ್ಯ ಸಚಿವ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ರಮ್ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದು, ಅದರಂತೆ ಸಿಎಂ ರಮ್ಯಾ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ವಸತಿ ಸಚಿವ ಅಂಬರೀಶ್ ಸಂಪುಟದಿಂದ ಹೊರಬಿದ್ದ ಬೆನ್ನಲ್ಲೇ ಮಾಜಿ ಸಂಸದೆ ರಮ್ಯಾ ವಾಸವಿದ್ದ ಮಂಡ್ಯದಲ್ಲಿನ ಮನೆಯ ನವೀಕರಣ ಕಾರ್ಯಭರದಿಂದ ಸಾಗಿದೆ.ಮಾಜಿ ಸಂಸದೆ ರಮ್ಯಾ ಶೀಘ್ರದಲ್ಲೇ ಈ ಮನೆಯಲ್ಲಿ ವಾಸಿಸಲು ಬರಲಿದ್ದಾರೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ, ಮನೆಗೆಲ್ಲ ಸುಣ್ಣ ಬಣ್ಣ ಬಳಿಯಲಾಗುತ್ತಿದೆ. ದುರಸ್ತಿ ಕಾರ್ಯ ನಡೆದಿದೆ. ವಿಧಾನ ಪರಿಷತ್ಗೆ ನಾಮಕರಣಗೊಂಡು ಸಂಪುಟ ಸೇರಿ ಜಿಲ್ಲಾ ಮಂತ್ರಿ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂಬ ಗಾಳಿ ಸುದ್ದಿಗಳಿಗೆ ಇನ್ನಷ್ಟು ರೆಕ್ಕೆ- ಪುಕ್ಕ ಮೂಡಿದಂತಾಗಿದೆ.
ಲೋಕಸಭೆ ಚುನಾವಣೆ ವೇಳೆ ಮಂಡ್ಯದ ಕೆ.ಆರ್.ರಸ್ತೆಯಲ್ಲಿನ ಸಾದತ್ ಅಲಿಖಾನ್ ಅವರ ಮನೆಯನ್ನು ರಮ್ಯಾ ಪಡೆದುಕೊಂಡಿದ್ದರು. ರಮ್ಯಾ ಮೇಲಿನ ಪ್ರೀತಿ ಅಭಿಮಾನದಿಂದ ಸಾದತ್ ಈ ಮನೆಯನ್ನು ಉಚಿತವಾಗಿ ನೀಡಿದ್ದರು. ಚುನಾವಣಾ ಪ್ರಚಾರ ಕಾರ್ಯ ಚಟುವಟಿಕೆಗೆ ಈ ಮನೆ ಬಳಕೆಯಾಗಿತ್ತು. ಆದರೆ ರಮ್ಯಾ ಈ ಮನೆಯಲ್ಲಿ ವಾಸಿಸಿರಲಿಲ್ಲ. ಒಂದೆರಡು ಬಾರಿ ಬಂದು ಹೋಗಿದ್ದರಷ್ಟೇ. ಚುನಾವಣೆಯಲ್ಲಿ ಸೋತ ನಂತರ ರಮ್ಯಾ ಈ ಮನೆಗೆ ಮತ್ತೆ ಬಂದಿರಲಿಲ್ಲ.
Comments are closed.