ವೈಭವ, ಪ್ರಪಾತ, ಚೇತರಿಕೆ, ಕೊಂಚ ಸುಧಾರಣೆ-ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಸಾಗಿ ಬಂದ ಹಾದಿಯ ಸಂಕ್ಷಿಪ್ತ ವಿವರಣೆ ಇದು. ಹೌದು, ಬಿಎಸ್ಎನ್ಎಲ್ ದೂರಸಂಪರ್ಕ ರಂಗದಲ್ಲಿ ಯಾವ ಪರಿ ವರ್ಚಸ್ಸು ಗಳಿಸಿ ಹೊಸ ಎತ್ತರಕ್ಕೆ ತಲುಪಿತ್ತೋ, ಖಾಸಗಿ ಕಂಪನಿಗಳ ಪಾರಮ್ಯದಲ್ಲಿ ಅಷ್ಟೇ ವೇಗವಾಗಿ ಕುಸಿದು, ರೋಗಗ್ರಸ್ತವಾಯಿತು. ಇತ್ತೀಚಿನ ವರ್ಷಗಳಲ್ಲಂತೂ ಬಿಎಸ್ಎನ್ಎಲ್ ಅಂದರೆ ಬರೀ ಲಾಸ್ ಕಂಪನಿಯೆಂಬಂತೆ ಆಗಿಬಿಟ್ಟಿತ್ತು. ಹಾಗಾಗಿ, ಯಾರೂ ಇದಕ್ಕೆ ಬಂಡವಾಳ ಹೂಡುವುದಿರಲಿ, ಸುಧಾರಣೆ ಬಗ್ಗೆ ಮಾತಾಡುವ ಗೋಜಿಗೂ ಹೋಗುತ್ತಿರಲಿಲ್ಲ. ಖಾಸಗಿ ಕಂಪನಿಗಳು ಬಿಎಸ್ಎನ್ಎಲ್ನ ಸ್ಥಿತಿ ಕಂಡು ಒಳಗೊಳಗೆ ಸಂತೋಷ ಪಡುತ್ತಿದ್ದರೆ, ಇತ್ತ ಬಿಎಸ್ಎನ್ಎಲ್ನ ನಷ್ಟ ಹೆಚ್ಚುತ್ತಲೇ ಸಾಗಿತ್ತು. ಗ್ರಾಹಕರ ಸಂಖ್ಯೆ ಕರಗತೊಡಗಿತ್ತು. ಆದರೆ, ಈಗಿನ ಸ್ಟಾರ್ಟಪ್ ದುನಿಯಾದಲ್ಲಿ ತಾಜಾ ಚಿಂತನೆಗಳಿಗೆ ಬರವಿಲ್ಲ. ಯಾವುದೇ ಉದ್ಯಮದಲ್ಲೂ ಇಂಥ ತಾಜಾ ಚಿಂತನೆಯನ್ನು ಅನುಷ್ಠಾನ ಮಾಡಿ ಕಾರ್ಯಕ್ಷಮತೆ ಚುರುಕುಗೊಳಿಸಿದರೆ ನಷ್ಟದ ಮಾತೇ ಇಲ್ಲ ಎಂಬ ತಂತ್ರದ ಮೊರೆ ಹೋದ ಕೇಂದ್ರ ಸರ್ಕಾರ ಬಿಎಸ್ಎನ್ಎಲ್ಗೂ ‘ಅಚ್ಛೇ ದಿನ್’ ತಂದಿದೆ.
ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿ ಬಿಎಸ್ಎನ್ಎಲ್ ಲಾಭದತ್ತ ಹೊರಳಿದೆ. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸಲಿದೆ. ಕಳೆದ ವರ್ಷವಷ್ಟೇ (2013-14 ಆರ್ಥಿಕ ವರ್ಷ) 691 ಕೋಟಿ ರೂ. ನಷ್ಟ ಅನುಭವಿಸಿದ್ದ ಈ ಸಂಸ್ಥೆ ಪ್ರಸಕ್ತ ವರ್ಷ (2015-16 ಆರ್ಥಿಕ ವರ್ಷ) 672 ಕೋಟಿ ರೂ. ಲಾಭ (ಟಟಛ್ಟಿಚಠಿಜ್ಞಿಜ ಟ್ಟಟ್ಛಜಿಠಿ) ಮಾಡಿದೆ! ಈ ಆರ್ಥಿಕ ವರ್ಷಾಂತ್ಯಕ್ಕೆ ಇದು 2 ಸಾವಿರ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿರುವ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಈ ಮೂಲಕ ಬಿಎಸ್ಎನ್ಎಲ್ ಮತ್ತೆ ಚೇತರಿಸಿಕೊಂಡಿದ್ದು, ತನ್ನ ವರ್ಚಸ್ಸು, ಗ್ರಾಹಕರನ್ನು ಮತ್ತೆ ಪಡೆದುಕೊಳ್ಳಲಿದೆ ಎಂದಿದ್ದಾರೆ. ಬಿಎಸ್ಎನ್ಎಲ್ನ ಒಟ್ಟಾರೆ ಆದಾಯದಲ್ಲೂ ಶೇ.4ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 28,645 ಕೋಟಿ ರೂ.ಗಳಷ್ಟಿದ್ದ ಒಟ್ಟಾರೆ ಆದಾಯ ಈ ಬಾರಿ 30 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರತಿ ಗ್ರಾಹಕ ತಿಂಗಳಿಗೆ ಎಷ್ಟು ಹಣ ಪಾವತಿಸುತ್ತಾನೆ ಎಂಬುದು ಟೆಲಿಕಾಮ್ ಸಂಸ್ಥೆಗಳಿಗೆ ತಮ್ಮ ಕಾರ್ಯನಿರ್ವಹಣೆ ಹಾಗೂ ಲಾಭದ ದೃಷ್ಟಿಯಿಂದ ಮುಖ್ಯ. ಈ ಮಾನದಂಡದ ಆಧಾರದ ಮೇಲೆಯೇ ಎಪಿಆರ್ಯುು (ಅಡಛ್ಟಿಚಜಛಿ ್ಕಡಛ್ಞಿ್ಠ ಕಛ್ಟಿ ಖಿಠಛ್ಟಿ) ನಿರ್ಧರಿಸಲ್ಪಡುತ್ತದೆ. ಬಿಎಸ್ಎನ್ಎಲ್ ಮೊಬೈಲ್ ಗ್ರಾಹಕರ ಎಪಿಆರ್ಯುು ಕೂಡ ತಿಂಗಳಿಗೆ 108 ರೂಪಾಯಿಯಿಂದ 118 ರೂಪಾಯಿಗೆ ಹೆಚ್ಚಿದೆ. ಅಂದರೆ, ಗ್ರಾಹಕರಿಂದ ಬರುತ್ತಿರುವ ಹಣದ ಪ್ರಮಾಣ ಹೆಚ್ಚುತ್ತಿದ್ದು, ಸಂಸ್ಥೆಯ ಆರ್ಥಿಕ ಚಟುವಟಿಕೆಗಳಿಗೆ ಜೀವ ತುಂಬಿದೆ.
ಕಾಲ್ಡ್ರಾಪ್ ಸಮಸ್ಯೆ ಕಡಿಮೆ
ಕಾಲ್ಡ್ರಾಪ್ ಸಮಸ್ಯೆ ಮೊಬೈಲ್ ಗ್ರಾಹಕರನ್ನು ಕಾಡುತ್ತಿದ್ದು, ಈ ವಿಷಯ ನ್ಯಾಯಾಲಯದ ಅಂಗಳದವರೆಗೂ ತಲುಪಿದ್ದು ಗೊತ್ತಿರುವಂಥದ್ದೆ. ಹಲವು ದೂರಸಂಪರ್ಕ ಕಂಪನಿಗಳು ಇನ್ನೂ ಕಾಲ್ಡ್ರಾಪ್ ಸಮಸ್ಯೆ ಪರಿಹರಿಸಲು ಸೂಕ್ತ ದಾರಿ, ಪರಿಹಾರೋಪಾಯ ಸಿಗದೆ ಒದ್ದಾಡುತ್ತಿದ್ದರೆ ಬಿಎಸ್ಎನ್ಎಲ್ ಮಾತ್ರ ತನ್ನ ನೆಟ್ವರ್ಕ್ನ್ನು (ಜಾಲ) ವ್ಯಾಪಕವಾಗಿ ವಿಸ್ತರಿಸುವುದರ ಮೂಲಕ ಕಾಲ್ಡ್ರಾಪ್ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಂಡಿದೆ. ಗುಣಮಟ್ಟದ ಸೇವೆಯನ್ನು ಖಾತ್ರಿಪಡಿಸಲು ಕಳೆದ 2 ವರ್ಷಗಳಲ್ಲಿ 24 ಸಾವಿರ ಹೊಸ ಟವರ್ಗಳನ್ನು ಸ್ಥಾಪಿಸಿದೆ. 2016ರ ಒಂದೇ ವರ್ಷದಲ್ಲಿ 20 ಸಾವಿರ ಹೊಸ ಟವರ್ಗಳನ್ನು ಸ್ಥಾಪಿಸುವ ಗುರಿ ಇರಿಸಿಕೊಂಡಿದ್ದು, ಈ ನಿಟ್ಟಿನ ಕಾಮಗಾರಿ ಪ್ರಗತಿಯಲ್ಲಿದೆ. ಆದ್ದರಿಂದ, ವರ್ಷಾಂತ್ಯಕ್ಕೆ ಬಿಎಸ್ಎನ್ಎಲ್ನ ಒಟ್ಟು ಟವರ್ಗಳ ಸಂಖ್ಯೆ 1.25 ಲಕ್ಷಕ್ಕೆ ಏರಿಕೆಯಾಗಿದೆ. ಈ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಶೇಕಡ 40ರಷ್ಟು ನೆಟ್ವರ್ಕನ್ನು ವಿಸ್ತರಿಸಲಿದೆ. ಅಂದರೆ, ಬಿಎಸ್ಎನ್ಎಲ್ನ ವ್ಯಾಪ್ತಿ ಹಾಗೂ ಗುಣಮಟ್ಟದ ಸೇವೆ-ಎರಡರ ಪ್ರಮಾಣವೂ ಹೆಚ್ಚಲಿದೆ.
ನಕ್ಸಲ್ ಪೀಡಿತ ಪ್ರದೇಶದಲ್ಲೂ ಟವರ್
ಒಡಿಶಾ, ಛತ್ತೀಸ್ಗಢ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶದ ಅರಣ್ಯಪ್ರದೇಶ ಮತ್ತು ಗಡಿಪ್ರದೇಶಗಳು ನಕ್ಸಲ್ ಕರಿನೆರಳಲ್ಲಿ ಬದುಕುತ್ತಿದ್ದು, ಇಲ್ಲಿನ ಜನರಿಗೆ ಸಂವಹನ ಸಂಪರ್ಕ ಸಾಧನವನ್ನು ಒದಗಿಸುವುದು ಜಟಿಲವಾದ ಪ್ರಶ್ನೆಯಾಗಿತ್ತು. ಇದಕ್ಕೂ ಪರಿಹಾರ ಒದಗಿಸಿರುವುದು ಬಿಎಸ್ಎನ್ಎಲ್ನ ಹೆಗ್ಗಳಿಕೆ ಹಾಗೂ ಕಾರ್ಯಕ್ಷಮತೆಗೆ ಸಾಕ್ಷಿ ಎನ್ನುತ್ತಾರೆ ಸಚಿವ ರವಿಶಂಕರ್ ಪ್ರಸಾದ್. ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಮೊಬೈಲ್ ಟವರ್ ಅಳವಡಿಸುವ ಮೊದಲ ಹಂತ ಪೂರ್ಣಗೊಂಡಿದ್ದು, ಇವು ಸೌರ ವಿದ್ಯುತ್ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂಬುದು ಗಮನಾರ್ಹ. ಟವರ್ ಸ್ಥಾಪನೆಯ ಎರಡನೇ ಹಂತದ ಕಾಮಗಾರಿ ಕೂಡ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂಬುದು ಸಚಿವರ ಆಶ್ವಾಸನೆ.
ಜನರ ಕೈಯಲ್ಲಿ ಆಡಳಿತ!
ಎನ್ಡಿಎ ಸರ್ಕಾರದ ಎರಡು ವರ್ಷದ ಸಾಧನೆಯನ್ನು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಬಣ್ಣಿಸಿದ್ದು ಹೀಗೆ. ‘‘ಜನಧನ ಯೋಜನೆ, ಆಧಾರ್ ಕಾರ್ಡ್, ಮೊಬೈಲ್ ಫೋನ್ ಮೂಲಕ ಆಡಳಿತ ಜನರ ಕೈಗೆ ತಲುಪಿದೆ. 125 ಕೋಟಿ ಜನಸಂಖ್ಯೆಯ ದೇಶದಲ್ಲಿ 102 ಕೋಟಿ ಜನರ ಬಳಿ ಮೊಬೈಲ್ ಫೋನ್ಗಳಿವೆ. 101 ಕೋಟಿ ಜನರ ಬಳಿ ಆಧಾರ್ ಕಾರ್ಡ್ಗಳಿವೆ. 40 ಕೋಟಿ ಜನರು ಇಂಟರ್ನೆಟ್ ಬಳಸುತ್ತಿದ್ದಾರೆ. ವಾಜಪೇಯಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬಿಎಸ್ಎನ್ಎಲ್ 10 ಸಾವಿರ ಕೋಟಿ ರೂ. ಆದಾಯ ಗಳಿಸಿತ್ತು. ಆದರೆ, ಯುಪಿಎ ಆಡಳಿತದ 10 ವರ್ಷದ ಅವಧಿಯಲ್ಲಿ ಅದು 8 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಯಿತು. ಇಷ್ಟೊಂದು ನಷ್ಟದಲ್ಲಿದ್ದ ಸಂಸ್ಥೆಯನ್ನು ಮೇಲೆತ್ತುವುದು ಸುಲಭದ ಕೆಲಸವಾಗಿರಲಿಲ್ಲ. ಈಗಿನ ಸರ್ಕಾರ ಆ ಸವಾಲನ್ನು ಸ್ವೀಕರಿಸಿದ್ದು, ಅದರ ಫಲಿತಾಂಶ ಈಗ ದೇಶದ ಮುಂದಿದೆ. 627 ಕೋಟಿ ರೂ. ಲಾಭ ಮಾಡಿರುವ ಬಿಎಸ್ಎನ್ಎಲ್ ವರ್ಷಾಂತ್ಯಕ್ಕೆ 2 ಸಾವಿರ ಕೋಟಿ ರೂ. ಲಾಭ ಮಾಡಲಿದೆ. ಮುಂದಿನ ವರ್ಷ ಇದು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ’’.
ಸವಾಲುಗಳೂ ಇವೆ
ಬಿಎಸ್ಎನ್ಎಲ್ ಆರ್ಥಿಕವಾಗಿ ಲಾಭದತ್ತ ಹೊರಳಿದರೂ ಸವಾಲುಗಳು ಸಾಕಷ್ಟಿವೆ.
ಗ್ರಾಹಕರ ದೂರುಗಳು ತುಂಬ ಇದ್ದು, ಅವರು ಬಿಎಸ್ಎನ್ಎಲ್ ಸೇವೆಯಿಂದ ಸಂತುಷ್ಟರಾಗಿಲ್ಲ. ಹಾಗಾಗಿ, ಈ ನಿಟ್ಟಿನಲ್ಲಿ ತುರ್ತು ಸ್ಪಂದನೆ, ಪರಿಹಾರದ ಅಗತ್ಯವಿದೆ.
ನೆಟವರ್ಕ್ ವಿಸ್ತರಿಸುತ್ತಿದ್ದರೂ ನಗರಪ್ರದೇಶಗಳಲ್ಲೇ ನೆಟ್ವರ್ಕ್ನ ಕ್ಷಮತೆ ಕ್ಷೀಣಿಸುತ್ತಿದೆ.
ಖಾಸಗಿ ಕಂಪನಿಗಳು ತೀವ್ರ ಸ್ಪರ್ಧೆ ಒಡ್ಡಿದ್ದು, ಮಾರುಕಟ್ಟೆಯನ್ನೂ ಆವರಿಸಿಕೊಂಡಿವೆ.
ಬಿಎಸ್ಎನ್ಎಲ್ ಇನ್ನಷ್ಟು ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸುತ್ತಿದೆ.
ಉಚಿತ ರೋಮಿಂಗ್ ವಿಸ್ತರಣೆ
ದೇಶದಲ್ಲಿ ಎಲ್ಲೇ ಸಂಚರಿಸಿದರೂ ಒಳಬರುವ ಕರೆಗಳನ್ನು ಉಚಿತವಾಗಿ ಸ್ವೀಕರಿಸುವ ಸೌಲಭ್ಯವನ್ನು ಬಿಎಸ್ಎನ್ಎಲ್ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಈ ಸೌಲಭ್ಯದಿಂದ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈ ಯೋಜನೆಯನ್ನು ಕಳೆದ ವರ್ಷ ಆರಂಭಿಸಿತ್ತು.
4ಜಿ ಸೇವೆ
ಇಂಟರ್ನೆಟ್ನ 4ಜಿ (4ನೇ ತಲೆಮಾರು) ಸೇವೆ ಒದಗಿಸಲು ಹಲವು ಪ್ರತಿಷ್ಠಿತ ದೂರಸಂಪರ್ಕ ಕಂಪನಿಗಳ ನಡುವೆ ಸ್ಪರ್ಧೆ ರಂಗೇರಿರುವಾಗಲೇ, ಈ ಸ್ಪರ್ಧಾ ಅಖಾಡಕ್ಕೆ ಬಿಎಸ್ಎನ್ಎಲ್ ಕೂಡ ಧುಮುಕಿದೆ. ದೇಶಾದ್ಯಂತದ 14 ಟೆಲಿಕಾಮ್ ಸರ್ಕಲ್ಗಳಲ್ಲಿ 4ಜಿ ಸೇವೆ ಆರಂಭಿಸುತ್ತಿರುವ ಬಿಎಸ್ಎನ್ಎಲ್ ಬಳಿ 20 ಮೆಗಾಹರ್ಟ್ಸ್ ಬ್ರಾಡ್ಬ್ಯಾಂಡ್ ವೈರ್ಲೆಸ್ ಎಕ್ಸೆಸ್ ಸ್ಪೆಕ್ಟ್ರಮ್ ಲಭ್ಯವಿದೆ. ಪ್ರಾಯೋಗಿಕವಾಗಿ ಈಗಾಗಲೇ ಅದು ಚಂಡೀಗಢದಲ್ಲಿ 4ಜಿ ಸೇವೆ ಆರಂಭಿಸಿದೆ.
ಹೀಗಿದೆ BSNL
ಸ್ಥಾಪನೆ: 2000 ಅಕ್ಟೋಬರ್ 1
ಈಗಿನ ಅಧ್ಯಕ್ಷ:
ಅನುಪಮ್ ಶ್ರೀವಾಸ್ತವ್
ಒಟ್ಟು ಆಸ್ತಿ ಮೌಲ್ಯ: 893 ಬಿಲಿಯನ್ ಡಾಲರ್
ಒಟ್ಟು ಗ್ರಾಹಕರು:
93.29 ಮಿಲಿಯನ್
ಸಿಬ್ಬಂದಿ: 2.16 ಲಕ್ಷಕ್ಕೂ ಅಧಿಕ
ವ್ಯಾಪ್ತಿ: 800ಕ್ಕಿಂತ ಅಧಿಕ ನಗರ, 1 ಸಾವಿರಕ್ಕೂ ಅಧಿಕ ಪಟ್ಟಣ
Comments are closed.