ಕರ್ನಾಟಕ

ಸಚಿವ ಸಂಪುಟ ಪುನಾರಚನೆ; ಕಾಂಗ್ರೆಸ್ಸ್ ನೊಳಗೆ ಭುಗಿಲೆದ್ದ ಆಕ್ರೋಶ, ಹಲವೆಡೆ ಪ್ರತಿಭಟನೆ

Pinterest LinkedIn Tumblr

pro

ಬೆಂಗಳೂರು: ಸಚಿವ ಸಂಪುಟ ಪುನಾರಚನೆಯಲ್ಲಿ ಒಕ್ಕಲಿಗರಿಗೆ ತೀವ್ರ ಅನ್ಯಾಯವಾಗಿರುವುದನ್ನು ವಿರೋಧಿಸಿ ಮಂಡ್ಯ, ವಿಜಯನಗರ, ಕೋಲಾರ, ಬೆಂಗಳೂರು ಗ್ರಾಮಾಂತರ ಮುಂತಾದ ಕಡೆ ಆಕ್ರೋಶ ಭುಗಿಲೆದ್ದಿದೆ. ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ಪುನಾರಚನೆ ಮಾಡಿರುವ ಸಿದ್ದರಾಮಯ್ಯ 14 ಸಚಿವರನ್ನು ಕೈ ಬಿಟ್ಟಿದ್ದು, 13 ಸಚಿವರನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ಒಕ್ಕಲಿಗ ಸಮುದಾಯದ ಕಿಮ್ಮನೆ ರತ್ನಾಕರ ಹಾಗೂ ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದು, ಈ ಸ್ಥಾನಕ್ಕೆ ಬೇರೆ ಯಾರನ್ನೂ ಈ ಸಮುದಾಯದಿಂದ ತೆಗೆದುಕೊಳ್ಳದಿರುವುದಕ್ಕೆ ಆಕ್ರೋಶ ಭುಗಿಲೆದ್ದಿದೆ.

ವಿಜಯನಗರದಲ್ಲಿ ಎಂ.ಕೃಷ್ಣಪ್ಪ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಿದರೆ, ಮಂಡ್ಯಾದಲ್ಲಿ ಅಂಬರೀಶ್ ಅಭಿಮಾನಿಗಳು ಆತ್ಮಹತ್ಯೆಯಂತಹ ಪ್ರಯತ್ನಕ್ಕೂ ಕೈ ಹಾಕಿದ್ದಾರೆ. ಸರ್ಕಾರದಲ್ಲಿ ಮೊದಲಿನಿಂದಲೂ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ. ಸಚಿವ ಸಂಪುಟ ಪುನಾರಚನೆ ವಿಷಯದಲ್ಲೂ ಕೂಡ ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಎಂ.ಕೃಷ್ಣಪ್ಪ, ಅಂಬರೀಶ್ ಬೆಂಬಲಿಗರು, ಇನ್ನಿತರೆ ಒಕ್ಕಲಿಗ ಮುಖಂಡರು ಅತೃಪ್ತಿ, ಅಸಮಾಧಾನ ವ್ಯಕ್ತಪಡಿಸಿ ರಸ್ತೆಗಿಳಿದು ಪ್ರತಿಭಟನೆ, ಧರಣಿ ನಡೆಸಿದ್ದಾರೆ.

ನಗರದಲ್ಲಿ ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಪ್ರತಿಭಟನೆ, ರಸ್ತೆ ತಡೆ ನಡೆಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅತ್ತ ಮಂಡ್ಯದಲ್ಲಿ ಅಂಬರೀಶ್ ಅಭಿಮಾನಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಮೈಸೂರು-ಬೆಂಗಳೂರು ರಸ್ತೆ ತಡೆ ನಡೆಸಿದ್ದರಿಂದ ಕಿಲೋಮಿಟರ್ ಕಟ್ಟಲೆ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಅಂಬಿ ಅಭಿಮಾನಿಯೊಬ್ಬ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಯಂತಹ ಪ್ರಯತ್ನಕ್ಕೆ ಕೈ ಹಾಕಿದ್ದು, ಪೊಲೀಸರ ಸಕಾಲಿಕ ಕ್ರಮದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಂಬಿ ಪರವಾಗಿ ಚಲನಚಿತ್ರೋದ್ಯಮ ಸಿಡಿದೆದ್ದಿದೆ. ಅಂಬರೀಶ್ ಅವರನ್ನು ಕೈ ಬಿಡಬಾರದು ಎಂದು ಒಕ್ಕಲಿಗರ ಸಮುದಾಯ ಆಗ್ರಹಿಸಿದೆ. ಅಕಸ್ಮಾತ್ ಅಂಬರೀಶ್ ಹಾಗೂ ಕಿಮ್ಮನೆ ರತ್ನಾಕರ್ ಅವರನ್ನು ಕೈ ಬಿಟ್ಟರೆ ಆ ಸ್ಥಾನಗಳಿಗೆ ಒಕ್ಕಲಿಗರನ್ನೇ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ. ಕೊನೆ ಕ್ಷಣದಲ್ಲಿ ಕೊನೆ ಕ್ಷಣದಲ್ಲಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಇಂದು ವಿಜಯನಗರ, ಟೋಲ್‌ಗೇಟ್, ಬೆಂಗಳೂರು-ಮೈಸೂರು ರಸ್ತೆ, ಬಿಎಚ್‌ಇಎಲ್ ವೃತ್ತ, ವಿಜಯನಗರ ಮೆಟ್ರೋ ಸ್ಟೇಷನ್‌ಗೆ ನುಗ್ಗಿ ಪ್ರತಿಭಟನೆ ನಡೆಸಿದರು.

ರೊಚ್ಚಿಗೆದ್ದ ಕಾರ್ಯಕರ್ತರು ವಿಜಯನಗರ, ಮಾರೇನಹಳ್ಳಿ , ಬಿಎಚ್‌ಇಎಲ್ ವೃತ್ತದ ಬಳಿ ರಸ್ತೆತಡೆ ನಡೆಸಿ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ಜನರು ಆತಂಕಕ್ಕೊಳಗಾಗಬೇಕಾಯಿತು. ವಿಜಯನಗರ ಮೆಟ್ರೋ ರೈಲ್ವೆ ನಿಲ್ದಾಣದ ಮೂಲಕ ಮೆಟ್ರೋ ಟ್ರೈನ್‌ಗೆ ನುಗ್ಗಿದ ಕೃಷ್ಣಪ್ಪ ಬೆಂಬಲಿಗರು, ಕೃಷ್ಣಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಇತ್ತ ಮೈಸೂರು ರಸ್ತೆಯಲ್ಲಿ ರಸ್ತೆತಡೆ ನಡೆಸಿದ್ದರಿಂದ ಟ್ರಾಫಿಕ್‌ಜಾಮ್ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.

ನಿನ್ನೆ ಎಂ.ಕೃಷ್ಣಪ್ಪನವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಸಂತಸಗೊಂಡ ಬೆಂಬಲಿಗರು ಎತ್ತರದೆತ್ತರದ ಕಟೌಟ್‌ಗಳನ್ನು ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇಂದು ಬೆಳಗ್ಗೆ ಪುಷ್ಪಗುಚ್ಛಗಳನ್ನಿಡಿದು ಅವರ ಮನೆ ಬಳಿಗೆ ಹೋದಾಗ ಕೃಷ್ಣಪ್ಪನವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಸುದ್ದಿ ಕೇಳಿ ಆಕ್ರೋಶಗೊಂಡು ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದರು. ರಸ್ತೆಯಲ್ಲಿ ಕುಳಿತು ಧರಣಿಗೆ ಮುಂದಾದರು. ಇದರಿಂದ ವಿಜಯನಗರದ ಹಲವು ಭಾಗಗಳಲ್ಲಿ ಟ್ರಾಫಿಕ್‌ಜಾಮ್ ಹೆಚ್ಚಾಯಿತು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಹರಸಾಹಸಪಡಬೇಕಾಯಿತು.

ನಿನ್ನೆ ರಾತ್ರಿವರೆಗೂ ಎಲ್ಲ ಸರಿಯಾಗಿತ್ತು. ಆದರೆ ನಮ್ಮ ಪಕ್ಷದ ಕೆಲವರ ಪಿತೂರಿಯಿಂದಲೇ ಸಚಿವ ಸ್ಥಾನವನ್ನು ತಪ್ಪಿಸಲಾಗಿದೆ ಎಂದು ಕ್ಷೇತ್ರದ ಪಾಲಿಕೆ ಸದಸ್ಯರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಎಂ.ಕೃಷ್ಣಪ್ಪ ಅವರು ಬೆಳ್ಳಂಬೆಳ್ಳಗೆಯೇ ಮನೆಯಿಂದ ಹೊರ ಹೋಗಿದ್ದಾರೆ ಎಂದು ಹೇಳಲಾಗಿದ್ದು, ಸಿಎಂ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಪ್ರಭಾವಿ ಸಚಿವರೊಬ್ಬರು ಇವರ ವಿರುದ್ಧ ಕೆಲವು ದಾಖಲೆಗಳನ್ನು ಹೈಕಮಾಂಡ್‌ಗೆ ರವಾನಿಸಿ ಮಂತ್ರಿ ಸ್ಥಾನಕ್ಕೆ ತಡೆವೊಡ್ಡಿದ್ದಾರೆ ಎಂದು ಹೇಳಲಾಗಿದೆ.

Comments are closed.