ಕರ್ನಾಟಕ

ಫೈನಾನ್ಸ್ ಹೆಸರಲ್ಲಿ 25 ಕೋಟಿ ರು. ವಂಚನೆ

Pinterest LinkedIn Tumblr

Aishwarya-ಬೆಂಗಳೂರು : ‘ನಿಮ್ಮ ಹಣ ಡಬಲ್ ಮಾಡಿಕೊಡ್ತೀವಿ.. 5 ವರ್ಷ ಕಟ್ಟಿದರೆ ಬಡ್ಡಿ ಸೇರಿಸಿ ಮೂರು ಪಟ್ಟು ವಾಪಸ್ ಕೊಡ್ತೀವಿ’ ಎಂದು ನಂಬಿಸಿ ಪಿಗ್ಮಿ ಕಟ್ಟಿಸಿ ಕೊಳ್ಳುವವರ ಬಗ್ಗೆ ಹುಶಾರಾಗಿರಿ! ಏಕೆಂದರೆ ಇದೇ ರೀತಿ ಸಾರ್ವಜನಿಕರಿಂದ 8 ವರ್ಷ ಪಿಗ್ಮಿ ಕಟ್ಟಿಸಿಕೊಂಡ ಭೂಪನೊಬ್ಬ, 25 ಕೋಟಿ ರು. ಟೋಪಿ ಹಾಕಿ ಪರಾರಿಯಾಗಿದ್ದಾನೆ. ಕಷ್ಟಕಾಲದಲ್ಲಿ ಒಟ್ಟು ಹಣ ಸಿಗುವ ಆಸೆಯಿಂದ ಹಣ ಕಟ್ಟಿದ್ದ ಸಾವಿರಕ್ಕೂ ಅಧಿಕ ಮಂದಿ ದಿಕ್ಕುತೋಚದೆ ಕಂಗಾಲಾಗಿದ್ದಾರೆ.ಬೆಂಗಳೂರಿನ ನೆಲಗೆದರನಹಳ್ಳಿಯ ಮಂಜು ನಾಥ್ (37) ಈ ‘ಪಿಗ್ಮಿ ದೋಖಾ‘ ಸೂತ್ರಧಾರ. ಎಂಟು ವರ್ಷಗಳ ಹಿಂದೆ ದಾಸರಹಳ್ಳಿ ಯಲ್ಲಿ‘ಐಶ್ವರ್ಯ ಮರ್ಚೆಂಟ್ಸ್ ಫೈನಾನ್ಸ್’ ಕಂಪನಿ ತೆರೆದಿದ್ದ ಈತ, ಆಟೋ ಡ್ರೈವರ್, ವ್ಯಾಪಾರಿ, ಕಾರ್ಮಿಕರ ಬಳಿ ನಿತ್ಯ ಹಣ ಕಟ್ಟಿಸಿಕೊಳ್ಳುತ್ತಿದ್ದ.

ಆರಂಭದಲ್ಲಿ ಹಣ ಕಟ್ಟಿದವರಿಗೆ ಬೇಕಾದ ಸಾಲ ನೀಡಿ ವಿಶ್ವಾಸ ಸಂಪಾದಿಸಿದ್ದ. ಸಾರ್ವಜನಿಕರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಮಂಜುನಾಥ್, ನೆಲಮಂಗಲ­ದಲ್ಲೂ ಕಚೇರಿ ತೆರೆದ. ಅಲ್ಲದೆ ಯಲಹಂಕ, ದೊಡ್ಡಬಳ್ಳಾಪುರ, ಗೌರಿಬಿದನೂರು, ರಾಮನಗರ, ಚನ್ನಪಟ್ಟಣದಲ್ಲಿ ವಲಯವಾರು ಕಚೇರಿಗಳನ್ನು ಆರಂಭಿಸಿ, ಸಾರ್ವಜನಿಕರಿಂದ ಅವರ ಇಚ್ಛಾನುಸಾರ 50 ರು.ಗಳಿಂದ 3,000 ರು. ವರೆಗೆ ಹಣ ಪಡೆದಿದ್ದ.ಮೇ ನಲ್ಲಿ ಪರಾರಿ: 2015ರ ಡಿಸೆಂಬರ್‌ವರೆಗೆ ವ್ಯವಹಾರ ನಡೆಸಿದ ಮಂಜುನಾಥ್, ನಂತರ ಹಣ ಕಟ್ಟಿದವರು ಸಾಲ ಕೇಳಿದರೆ ಹಿಂದೇಟು ಹಾಕುತ್ತಿದ್ದ. ಹಣ ಮರುಪಾವತಿಸುವಂvಕೇಳಿದರೂ, ಸಬೂಬು ಹೇಳುತ್ತಿದ್ದ. ಇದರಿಂದ ಅನುಮಾನಗೊಂಡ ಹಲವರು ಕೂಡಲೇ ಹಣ ವಾಪಸ್‌ಗೆ ಪಟ್ಟು ಹಿಡಿದಿದ್ದರು. ಇದೇ ಹಿನ್ನೆಲೆಯಲ್ಲಿ ಮೇ 3ರಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದಾದ ಕೆಲ ದಿನಗಳಲ್ಲಿಯೇ ಫೈನಾನ್ಸ್ ಕಚೇರಿಗಳು ಬಾಗಿಲು ಮುಚ್ಚಿವೆ.

ಶಾಕ್!: ‘ಐಶ್ವರ್ಯ ಮರ್ಚೆಂಟ್ಸ್ ಫೈನಾನ್ಸ್ ಎಂಬ ಬ್ಲೇಡ್ ಕಂಪನಿಗೆ ಲಕ್ಷಾಂತರ ರುಪಾಯಿ ಪಿಗ್ಮಿ ಕಟ್ಟಿದ್ದ ಗ್ರಾಹಕರು ದಿಕ್ಕು ತೋಚದೆ ಕಂಗಾಲಾಗಿ ದ್ದಾರೆ. ನನ್ನ ಬಾವ ಮೈದುನನ ಕಿಡ್ನಿ ಆಪರೇಷನ್‌ಗೆ ಎಂದು ಕಟ್ಟಿದ ಎರಡೂವರೆ ಲಕ್ಷ ರುಪಾಯಿ ತೆಗೆ ದುಕೊಳ್ಳಲು ಹೋದರೆ, ಆಫೀಸ್ ಮುಚ್ಚಲಾಗಿತ್ತು. ಮಂಜುನಾಥ್‌ಗೆ ಕರೆ ಮಾಡಿದರೆ ಸ್ವಿಚ್ ಆಫ ಬರುತ್ತಿದೆ. ದಿನಾಲೂ ಪಿಗ್ಮಿ ಕಟ್ಟಿಸಿಕೊಳ್ಳುತ್ತಿದ್ದ ಯುವಕರು ನಾಪತ್ತೆಯಾಗಿ ದ್ದಾರೆ. ಏನು ಮಾಡ ಬೇಕು ಗೊತ್ತಾಗುತ್ತಿಲ್ಲ’ ಎಂದು ಕಣ್ಣೀರಿಡುತ್ತಾರೆ ನೆಲಮಂಗಲದ ಚಂದ್ರಶೇಖರ್.

ಮೂರಂತಸ್ತಿನ ಮನೆ? ಆರೋಪಿ ಮಂಜುನಾಥ್ ಸಾರ್ವಜನಿಕರಿಂದ ಸಂಗ್ರಹಿಸಿದ 25 ಕೋಟಿ ರು.ಗೂ ಅಧಿಕ ಹಣದಲ್ಲಿ, ನೆಲಗೆದರೇನಹಳ್ಳಿ ಯಲ್ಲಿ ಮೂರಂ ತಸ್ತಿನ ಮನೆ ನಿರ್ಮಿಸಿದ್ದಾನೆ. ಜತೆಗೆ ರಿಯಲ್ ಎಸ್ಟೇಟ್ ವಹಿವಾಟು ನಡೆಸಿ, 20ಕ್ಕೂ ಹೆಚ್ಚು ನಿವೇಶನ ಖರೀದಿಸಿದ್ದಾನೆ ಎಂಬುದು ಹಣ ಕಳೆದುಕೊಂಡವರ ಆರೋಪ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ, ಮನೆ ಹಾಗೂ ಆಸ್ತಿ ಹರಾಜು ಹಾಕಿ ಹಣ ವಾಪಸು ಕೊಡಿಸಲಿ ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

ಐದು ಠಾಣೆಗಳಲ್ಲಿ ದೂರು

ಮಂಜುನಾಥ್ ವಿರುದ್ಧ ಐದು ಠಾಣೆಗಳಲ್ಲಿ ವಂಚನೆ ದೂರು ದಾಖಲಾಗಿದೆ. ನೆಲಮಂಗಲ, ತ್ಯಾಮಗೊಂಡ್ಲು, ಪೀಣ್ಯ, ಮಾದನಾಯಕನಹಳ್ಳಿ, ರಾಜಗೋಪಾಲನಗರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗಿದೆ. ದೂರು ದಾಖಲಾಗಿ, ತಿಂಗಳು ಕಳೆಯುತ್ತಿದ್ದರೂ, ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರು ನೀಡಿದ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.