ಕರ್ನಾಟಕ

ಮರುಮೌಲ್ಯಮಾಪನದಿಂದ ಮೊದಲ ಸ್ಥಾನ

Pinterest LinkedIn Tumblr

pucಮೈಸೂರು: ನಗರದ ಯಾದವಗಿರಿ ರಾಮಕೃಷ್ಣ ವಿದ್ಯಾಶಾಲೆ ವಿದ್ಯಾರ್ಥಿ ರವೀಶ್‌ ಸುರೇಶ್‌ ಬನ್ನಿಹಟ್ಟಿ ಮರುಮೌಲ್ಯಮಾಪನದಲ್ಲಿ ಎಂಟು ಅಂಕ ಹೆಚ್ಚು ಪಡೆದಿದ್ದು, ಒಟ್ಟಾರೆ 600ಕ್ಕೆ 597 (ಶೇ 99.5) ಅಂಕ ಗಳಿಸಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಈ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಮೊದಲು ಬೆಂಗಳೂರು ಬಸವೇಶ್ವರ ನಗರದ ವಿವಿಎಸ್‌ ಸರ್ದಾರ್‌ ಪಟೇಲ್‌ ಪಿಯು ಕಾಲೇಜು ವಿದ್ಯಾರ್ಥಿನಿ ಟಿ.ರಕ್ಷಿತಾ 596 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದರು. ಫಲಿತಾಂಶ ಪ್ರಕಟವಾದಾಗ ರವೀಶ್‌ 600ಕ್ಕೆ 589 (ಶೇ 98.16) ಅಂಕ ಗಳಿಸಿದ್ದರು. ಸಂಸ್ಕೃತ, ಭೌತವಿಜ್ಞಾನ, ಗಣಿತ, ಜೀವವಿಜ್ಞಾನದಲ್ಲಿ 100ಕ್ಕೆ 100, ರಸಾಯನವಿಜ್ಞಾನದಲ್ಲಿ 99, ಇಂಗ್ಲಿಷ್‌ನಲ್ಲಿ 90 ಅಂಕ ಪಡೆದಿದ್ದರು.
ನಂತರ, ಇಂಗ್ಲಿಷ್‌ ಪತ್ರಿಕೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರುಮೌಲ್ಯಮಾಪನದಲ್ಲಿ 98 ಅಂಕ ಬಂದಿದೆ. ಈ ವಿದ್ಯಾರ್ಥಿ ಬೆಂಗಳೂರಿನ ಕೆಎಂಎಫ್‌ ಸಹಾಯಕ ನಿರ್ದೇಶಕ ಬಿ.ಪಿ.ಸುರೇಶ್‌ ಮತ್ತು ಡಾ.ನಳಿನಾ ದಂಪತಿ ಪುತ್ರ.
‘ಇಂಗ್ಲಿಷಿನಲ್ಲಿ ಅಂಕ ಸ್ವಲ್ಪ ಕಡಿಮೆಯಾಗಿದ್ದರಿಂದ ಅಂಥ ಬೇಸರ ಆಗಿರಲಿಲ್ಲ. ಮರುಮೌಲ್ಯಮಾಪನಕ್ಕೆ ಹಾಕಿದರೆ ಜಾಸ್ತಿ ಬರುತ್ತದೆ ಎಂಬ ವಿಶ್ವಾಸ ಇತ್ತು. ನಮ್ಮ ಇಂಗ್ಲಿಷ್‌ ಶಿಕ್ಷಕರು ಬಹಳ ಬೇಜಾರಾಗಿದ್ದರು. ಮರುಮೌಲ್ಯಮಾಪನಕ್ಕೆ ಹಾಕುವಂತೆ ಸಲಹೆ ನೀಡಿದ್ದರು. ಈಗ ಹೆಚ್ಚು ಅಂಕ ಬಂದಿರುವುದು ಬಹಳ ಖುಷಿ ಮೂಡಿಸಿದೆ. ಪ್ರಥಮ ಪಿಯುನಿಂದಲೇ ವ್ಯವಸ್ಥಿತ ತಯಾರಿ ನಡೆಸಿದ್ದೆ. ಪ್ರತಿನಿತ್ಯ 5–6 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಮುಂದೆ ಹೃದ್ರೋಗ ತಜ್ಞನಾಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ’ ಎಂದು ರವೀಶ್‌ ‘ಪ್ರಜಾವಾಣಿ’ಗೆ ಪತ್ರಿಕ್ರಿಯಿಸಿದರು.
ವ್ಯತ್ಯಾಸ ಸಹಜ: ‘ಮರು ಮೌಲ್ಯಮಾಪನದ ನಂತರ ಅಂಕಗಳಲ್ಲಿ ವ್ಯತ್ಯಾಸ ಆಗುತ್ತವೆ. ರ್‌್ಯಾಂಕ್‌ ಕೊಡುವ ಪದ್ಧತಿ ಇಲ್ಲ. ಹೆಚ್ಚು ಅಂಕ ಬಂದವರು ಪ್ರಥಮ ಎಂದಷ್ಟೇ ಹೇಳಬಹುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ರಾಮೇಗೌಡ ಹೇಳಿದರು.
ಮೌಲ್ಯಮಾಪನದಲ್ಲಿ ನಡೆದಿರುವ ಎಲ್ಲ ರೀತಿಯ ದೋಷಗಳ ಬಗ್ಗೆ ಪಟ್ಟಿ ಮಾಡಲಾಗುತ್ತದೆ. ಕ್ರಮ ಏನು ಎಂಬುದರ ಬಗ್ಗೆ ಮುಂದೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ
ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಮೊದಲ ಹಂತದ ಮರುಮೌಲ್ಯಮಾಪನದ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಇನ್ನೂ ಮೌಲ್ಯಮಾಪನ ನಡೆಯುತ್ತಿರುವ ಉಳಿದ ಉತ್ತರ ಪತ್ರಿಕೆಗಳ ಫಲಿತಾಂಶವನ್ನು ನಂತರ ಪ್ರಕಟಿಸಲಾಗುವುದು ಎಂದು ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವೆಬ್‌ಸೈಟ್: www.pue.kar.nic.in

Comments are closed.