ಬೆಂಗಳೂರು, ಜೂ. ೧೮- ಸಾತ್ವಿಕ, ಸಭ್ಯ, ಸಮಾಜ ಸ್ಥಾಪನೆಗಾಗಿ ಶರಣರ ಸಂದೇಶಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ಅವ್ಯವಹಾರ, ಅಸೂಯೆ, ದ್ವೇಷ, ಸೇಡುಗಳಿಗೆ ಸಮಾಜ ಒಗ್ಗಿ ಕೊಂಡರೆ ಸಾತ್ವಿಕ ಚಿಂತನೆಗಳೇ ಇಲ್ಲದಂತಾಗುತ್ತದೆ ಎಂದು ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೋ.ರೂ ಚನ್ನಬಸಪ್ಪ ಎಚ್ಚರಿಸಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಎರಡು ದಿನಗಳ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದ ತೋರಿಕೆಗೆ, ಆಢಂಬರಕ್ಕೆ ಒಗ್ಗಿಕೊಂಡು ನೀತಿಹೀನರಾಗಿ ಬಾಳುವ ಹಂತಕ್ಕೆ ಸಮಾಜ ಸದ್ದಿಲ್ಲದೆ ಒಗ್ಗಿಕೊಳ್ಳುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಶ್ರಮಜೀವಿಗಳು, ಸಾಲ ಸೋಲಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳು, ಅಧಿಕಾರಿ ವರ್ಗದವರು ಭ್ರಷ್ಟಾಚಾರರಾಗುತ್ತಿದ್ದಾರೆ. ಧರ್ಮಗುರುಗಳ ಕರ್ಮಕಾಂಡ ಎಲ್ಲೆ ಮೀರಿದೆ. ಸಾಹಿತಿ, ಕಲಾವಿದರು ಸಮಾಜಕ್ಕೆ ಮಾರ್ಗದರ್ಶಕರಾಗುವ ಬದಲು ಅಶ್ಲೀಲ ಚಿಂತನೆಗಳನ್ನು ಪರಿಚಯಿಸುತ್ತಿದ್ದಾರೆ ಎಂದು ಆಪಾದಿಸಿದರು.
ವಿಶ್ವವಿದ್ಯಾನಿಲಯದ ಅಂಗಗಳು ಭ್ರಷ್ಟಾಚಾರದ ರಂಗಸಜ್ಜಿಕೆಗಳಾಗಿವೆ. ಅಧಿಕಾರದ ಅಮಲು ಹೆಚ್ಚುತ್ತಿದೆ. ಇಂತಹ ವಾತಾವರಣಗಳಿಂದ ಮುಕ್ತವಾಗಬೇಕಾದರೆ ವಚನ ಸಾಹಿತ್ಯದ ಬಲವಾದ ಆಂದೋಲನ ನಡೆಯಬೇಕಿದೆ ಎಂದು ಅವರು ಹೇಳಿದರು.
ವಚನ ಸಾಹಿತ್ಯವನ್ನು ಆಳವಾಗಿ ಓದದೆ ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಅಂಕಿತಗಳನ್ನೇ ಬದಲಿಸುವ ಕೇಡಿನ ಆತ್ಮದ್ರೋಹದ ಕೆಲಸ ಮತ್ತೊಂದಿಲ್ಲ ಎಂದರು. ಶರಣರ ಅನುಭವದ ಸಾಹಿತ್ಯಗಳನ್ನು ಎಂದಿಗೂ ಬದಲಿಸಲಾಗದು. ಏನೇ ಭಿನ್ನಾಭಿಪ್ರಾಯಗಳಿದ್ದರೂ ವಾದ, ಪ್ರತಿವಾದದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಗೊ.ರೂ. ಚನ್ನಬಸಪ್ಪ ಅವರು ಹೇಳಿದರು.
ವಚನ ಸಾಹಿತ್ಯ ಆಕಾಶದ ಹೂವಲ್ಲ, ಇದು ಈ ನೆಲದ ಹಣ್ಣು ಅದು ಪ್ರದರ್ಶನದ ಭಾಗವಲ್ಲ. ಆತ್ಮ ನಿರೀಕ್ಷೆ ಆರದ ಅಂತರಂಗ, ಸಮಾಜದ ಹಿತ ಚಿಂತಕ, ಸರಳ, ಸ್ವಸ್ಥ, ವಸ್ತುನಿಷ್ಠ, ನಿರ್ಭಯಗಳೇ ವಚನ ಸಾಹಿತ್ಯದ ಆಭರಣಗಳು ಎಂದರು.
ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ, ಬಸವಣ್ಣನವರ ವಿಚಾರಧಾರೆಗಳು, ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಪ್ರಸ್ತಾವಿಕ ಭಾಷಣ ಮಾಡಿದ ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಆರ್. ಭುಜೇಂದ್ರ ಅವರು ಪ್ರೊ. ಕಲಬುರಗಿ ಅವರ ಹತ್ಯೆಯ ನಂತರ ವಚನ ಸಾಹಿತ್ಯದ ತುಡಿತದಿಂದಾಗಿ ಈ ಸಮ್ಮೇಳನವನ್ನು ಏರ್ಪಡಿಸಿದ್ದಾಗಿ ಹೇಳಿದ ಅವರು, ರಾಷ್ಟ್ರ ಕಟ್ಟುವ ಯುವಕರಿಗೆ ವಚನ ಸಾಹಿತ್ಯ ಅತ್ಯಗತ್ಯವಾಗಿ ಬೇಕಿದೆ ಎಂದರು.
ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪೀಠಾಧ್ಯಕ್ಷರಾದ ಡಾ. ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ, ವಿಭೂತಿಪುರ ಮಠಾಧ್ಯಕ್ಷರಾದ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ, ಅಲ್ಲಮಗಿರಿ ಅಲ್ಲಮಪ್ರಭು ಪೀಠಾಧ್ಯಕ್ಷ ಬಸವಕುಮಾರ ಸ್ವಾಮೀಜಿ ಅವರು ದಿವ್ಯ ಸಾನಿಧ್ಯವಹಿಸಿದ್ದರು.
ಸಮಾರಂಭದಲ್ಲಿ ಲಂಡನ್ನ ಲ್ಯಾಮ್ಬೆತ್ ಕೌನ್ಸಿಲ್ನ ಮಾಜಿ ಮೇಯರ್ ಮೀರಜ್ ಪಾಟೀಲ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮತ್ತಿತರರು ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾದ ನಗರಾಧ್ಯಕ್ಷ ಎಂ.ಎಸ್. ನಟರಾಜ್ ಸ್ವಾಗತಿಸಿದರು.
ಕರ್ನಾಟಕ
Comments are closed.