
ಲಂಡನ್: ಹೊಸ ಸ್ಮಾರ್ಟ್ಫೋನ್ ಬಿಡುಗಡೆಯಾದ ತಕ್ಷಣ ಒಂದು ಬೆಲೆಯಲ್ಲಿ ಮಾರಾಟವಾಗುತ್ತಿರುತ್ತದೆ. ಆದರೆ ಒಂದು ಎರಡು ತಿಂಗಳಿನಲ್ಲಿ ಬೆಲೆ ದಿಢೀರ್ ಕಡಿಮೆ ಆಗುತ್ತದೆ. ಯಾಕೆ ಬೆಲೆ ಕಡಿಮೆ ಆಗುತ್ತದೆ, ಯಾವ ಬ್ರಾಂಡಿನ ಫೋನಿನ ಬೆಲೆ ಸ್ವಲ್ಪ ಕಡಿಮೆ ಆಗುತ್ತದೆ ಎನ್ನುವ ಪ್ರಶ್ನೆ ನಿಮ್ಮಲ್ಲೂ ಹುಟ್ಟಬಹುದು. ಈ ಪ್ರಶ್ನೆಗೆ ಉತ್ತರ ಎನ್ನುವುಂತೆ ಇಂಗ್ಲೆಂಡಿನ ವೆಬ್ಸೈಟ್ ಅಧ್ಯಯನ ನಡೆಸಿ ವರದಿ ನೀಡಿದೆ.
ಯಾವುದೇ ಕಾರು ಬಿಡುಗಡೆಯಾದ ಒಂದೇ ವರ್ಷದಲ್ಲಿ ಸಾಮಾನ್ಯವಾಗಿ ಅಂದಾಜು ಶೇ.20 ರಷ್ಟು ಬೆಲೆ ಕಡಿಮೆ ಆಗಿರುತ್ತದೆ. ಆದರೆ ಸ್ಮಾರ್ಟ್ಫೋನ್ ಮೌಲ್ಯ ನಿರೀಕ್ಷೆ ಮಾಡದ ರೀತಿಯಲ್ಲಿ ಒಂದು, ಎರಡು ತಿಂಗಳಿನಲ್ಲಿ ಶೇ. 60ರಷ್ಟಿ ಕಡಿಮೆ ಆಗುತ್ತದೆ ಎಂದು ಮ್ಯೂಸಿಕ್ಮ್ಯಾಗ್.ಯುಕೆ ವರದಿ ಮಾಡಿದೆ.
ತನ್ನ ವರದಿಯಲ್ಲಿ ಐಫೋನ್ ಮಾತ್ರ ಬಿಡುಗಡೆಯಾದ ಸಮಯದಲ್ಲಿದ್ದ ಮೌಲ್ಯವನ್ನು ಕೆಲ ತಿಂಗಳವರೆಗೂ ಉಳಿಸಿಕೊಳ್ಳುತ್ತದೆ. ಆದರೆ ಬಹುತೇಕ ಆಂಡ್ರಾಯ್ಡ್ ಸಾಧನಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದೆ.
ಐಫೋನ್ 4 ಬಿಡುಗಡೆಯಾದ ಬಳಿಕವೂ ಶೇ.39ರಷ್ಟು ತನ್ನ ಮೌಲ್ಯವನ್ನು ಉಳಿಸಿಕೊಂಡಿದ್ದರೆ, ಐಫೋನ್ 6(16ಜಿಬಿ) 539 ಪೌಂಡ್ಗೆ( ಅಂದಾಜು 50 ಸಾವಿರ) ಬಿಡುಗಡೆಯಾದರೂ ಒಂದು ವರ್ಷದ ಬಳಿಕ ಶೇ.50ರಷ್ಟು ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ ಆದರೆ ಐಫೋನ್ 5ಗೆ ಮಾರುಕಟ್ಟೆಯಲ್ಲಿ ವಿವಿಧ ಸ್ಮಾರ್ಟ್ಫೋನ್ಗಳು ಫೈಟ್ ನೀಡಿದ ಕಾರಣ ಬಿಡುಗಡೆಯಾದ 8 ತಿಂಗಳಿನಲ್ಲಿ ಶೆ.66 ರಷ್ಟು ಮೌಲ್ಯ ಕುಸಿತಗೊಂಡಿದೆ ಎಂದು ತಿಳಿಸಿದೆ.
ಭಾರೀ ನಿರೀಕ್ಷೆ ಮೂಡಿಸಿದ್ದ 2014ರಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಬಿಡುಗಡೆಯಾದ 2 ತಿಂಗಳಿನಲ್ಲಿ ಅದರ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿತ್ತು. ಎಷ್ಟು ಮೌಲ್ಯ ಕಳೆದುಕೊಂಡಿತ್ತು ಎಂದರೆ 579 ಪೌಂಡಿಗೆ(ಅಂದಾಜು 51 ಸಾವಿರ ರೂ.) ಬಿಡುಗಡೆಯಾಗಿದ್ದ ಈ ಫೋನ್ 300 ಪೌಂಡಿಗೆ( ಅಂದಾಜು 28 ಸಾವಿರ ರೂ.) ಕುಸಿದಿತ್ತು ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಿದೆ.
ಎಚ್ಟಿಸಿ ಒನ್ ಎಂ9 ಮಾರ್ಚ್ 2015ರಲ್ಲಿ ಬಿಡುಗಡೆಯಾದಾಗ 579 ಪೌಂಡ್(ಅಂದಾಜು 51 ಸಾವಿರ ರೂ) ಇತ್ತು. ಆದರೆ ಒಂದೇ ತಿಂಗಳಿನಲ್ಲಿ ಶೇ.65ರಷ್ಟು ಮೌಲ್ಯವನ್ನು ಕಳೆದುಕೊಂಡಿತ್ತು ಎಂದು ವರದಿ ತಿಳಿಸಿದೆ.
ಯಾಕೆ ಫೋನ್ಗಳ ಬೆಲೆಗಳು ದಿಢೀರ್ ಕಡಿಮೆ ಆಗುತ್ತದೆ ಎನ್ನುವುದಕ್ಕೆ ಅದೇ ವಿಶೇಷತೆ ಇರುವ ಉಳಿದ ಕಂಪೆನಿಗಳ ಫೋನ್, ವೇಗ ಮತ್ತು ನೂತನ ತಂತ್ರಜ್ಞಾನ ಬಳಕೆ ಕಾರಣ ಎಂದು ವರದಿ ತಿಳಿಸಿದೆ. ಒಂದು ಫೋನಿಗೆ ಇರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಆ ಫೋನಿನ ಬೆಲೆಯನ್ನು ಕಂಪೆನಿಗಳು ಕಾಲಕ್ಕೆ ತಕ್ಕಂಥೆ ಪರಿಷ್ಕರಿಸುತ್ತಿರುತ್ತದೆ. ಭಾರತದಲ್ಲಿ ಹಬ್ಬ ಹರಿದಿನ ಸಮಯದಲ್ಲಿ ಕಂಪೆನಿಗಳು ಸ್ಮಾರ್ಟ್ಫೋನ್ ಬೆಲೆಗಳನ್ನು ಸ್ವಲ್ಪ ಕಡಿಮೆ ಮಾಡುತ್ತಿವೆ.
Comments are closed.