ಕರ್ನಾಟಕ

ಹೆಚ್ಚುತ್ತಿರುವ ಡೆಂಗಿ, ಚಿಕೂನ್‌ಗುನ್ಯ: ಮೈಸೂರಿನಲ್ಲಿ ಅಧಿಕ

Pinterest LinkedIn Tumblr

pvec17shrckm1_0ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡೆಂಗಿ, ಚಿಕೂನ್‌ಗುನ್ಯ ರೋಗ ತೀವ್ರಗೊಂಡಿದೆ. ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಒಂದೇ ಹಾಸಿಗೆಯಲ್ಲಿ ಹಲವರು ಮಲಗಿ ಚಿಕಿತ್ಸೆ ಪಡೆಯುವ ಅನಿವಾರ್ಯ ಸ್ಥಿತಿಯೂ ತಲೆದೋರಿದೆ. ಹಲವೆಡೆ ಮಲೇರಿಯಾ ರೋಗವೂ ಬಾಧಿಸುತ್ತಿದೆ.
ರಾಜ್ಯದಲ್ಲೇ ಅತ್ಯಧಿಕ ಡೆಂಗಿ ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗಿಯ ಜತೆಗೆ ಚಿಕೂನ್‌ಗುನ್ಯ ಪ್ರಕರಣಗಳೂ ಹೆಚ್ಚಾಗಿದ್ದು, ಆತಂಕ ಮೂಡಿಸಿದೆ.
ಕಳೆದ ವರ್ಷ (ಜನವರಿ–ಜೂನ್) 57 ಡೆಂಗಿ ಹಾಗೂ 23 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿದ್ದವು. ಆದರೆ, ಈ ವರ್ಷ 131 ಡೆಂಗಿ, 66 ಚಿಕೂನ್‌ಗುನ್ಯ ಪ್ರಕರಣಗಳು ಕಂಡು ಬಂದಿವೆ. 131 ಡೆಂಗಿ ಪ್ರಕರಣಗಳ ಪೈಕಿ 95, 66 ಚಿಕೂನ್‌ಗುನ್ಯ ಪ್ರಕರಣಗಳಲ್ಲಿ 36 ಮೈಸೂರು ನಗರದಲ್ಲೇ ಪತ್ತೆಯಾಗಿವೆ.
ಡೆಂಗಿ ರೋಗಿಯ ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಪ್ರಮಾಣ 10 ಸಾವಿರಕ್ಕಿಂತ ಕಡಿಮೆ ಆದಾಗ ಮಾತ್ರ ರೋಗಿಗೆ ಪ್ಲೇಟ್‌ಲೆಟ್‌ ನೀಡಬೇಕು. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ 20– 30 ಸಾವಿರ ಇದ್ದರೂ ಪ್ಲೇಟ್‌ಲೆಟ್‌ ಹಾಕಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇಲ್ಲಿನ ಸಾಂಕ್ರಮಿಕ ರೋಗಗಳ ಆಸ್ಪತ್ರೆಯಲ್ಲಿ ಡೆಂಗಿ ಕಾಯಿಲೆಗೆ ಪ್ರಾಥಮಿಕ ಹಂತದ ಚಿಕಿತ್ಸೆ ಲಭ್ಯವಿದೆ. ಆದರೆ, ರೋಗವು ಉಲ್ಬಣಿಸಿದಾಗ ಚಿಕಿತ್ಸೆ ನೀಡಲು ತುರ್ತು ನಿಗಾ ಘಟಕ ಇಲ್ಲ. ಕೆ.ಆರ್.ಆಸ್ಪತ್ರೆಯಲ್ಲಿ ಇರುವ ಕೆಲವೇ ಕೆಲವು ತುರ್ತು ನಿಗಾ ಘಟಕ ಏನೇನೂ ಸಾಲದಾಗಿವೆ. ಹೀಗಾಗಿ, ಡೆಂಗಿ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಿದೆ.
ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಐಸಿಯು ಆರಂಭಕ್ಕೆ ಈಗಾಗಲೇ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ಅವರು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ. ಆದರೆ, ಇದುವರೆಗೂ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ.
ಹಾಸನ ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ವರ್ಷ ಇಲ್ಲಿವರೆಗೆ 43 ಡೆಂಗಿ, 32 ಚಿಕೂನ್‌ಗುನ್ಯ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಇಲ್ಲಿವರೆಗೆ 7 ಡೆಂಗಿ, 3 ಚಿಕೂನ್‌ಗುನ್ಯ ಪ್ರಕರಣಗಳು ವರದಿಯಾಗಿದ್ದವು.
ಪ್ರಸಕ್ತ ಸಾಲಿನಲ್ಲಿ ಒಟ್ಟು 404 ಶಂಕಿತ ಡೆಂಗಿ ರೋಗಿಗಳನ್ನು ತಪಾಸಣೆ ನಡೆಸಿದ್ದು, 117 ರೋಗಿಗಳ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 223 ಶಂಕಿತ ಚಿಕೂನ್‌ಗುನ್ಯ ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 63 ಜನರ ರಕ್ತವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯ ಪ್ರಕರಣಗಳು ಹೆಚ್ಚಾಗಿವೆ. ಜನವರಿಯಿಂದ ಇಲ್ಲಿಯವರೆಗೆ 6 ಡೆಂಗಿ, 8 ಚಿಕೂನ್‌ಗುನ್ಯ ಪ್ರಕರಣಗಳು ವರದಿಯಾಗಿವೆ. 2015ರಲ್ಲಿ ಕೇವಲ 1 ಡೆಂಗೆ, 5 ಚಿಕೂನ್‌ಗುನ್ಯ ಪ್ರಕರಣಗಳಷ್ಟೇ ವರದಿಯಾಗಿದ್ದವು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಂಡುವಿಜಯನ್‌ ‘ಪ್ರಜಾವಾಣಿ’ಗೆ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಡೆಂಗಿ ಪ್ರಕಣಗಳು ಹೆಚ್ಚಾಗಿವೆ. ಇಲ್ಲಿವರೆಗೆ 19 ಡೆಂಗಿ ಪ್ರಕರಣಗಳು ವರದಿಯಾಗಿದ್ದರೆ, ಕಳೆದ ಸಾಲಿನಲ್ಲಿ ನಾಲ್ಕು ಪ್ರಕರಣಗಳಷ್ಟೇ ವರದಿಯಾಗಿದ್ದವು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್‌.ಶ್ರೀರಂಗಪ್ಪ ತಿಳಿಸಿದ್ದಾರೆ.
ಡೆಂಗಿ– 239 ಪ್ರಕರಣ
ಮಧ್ಯ ಕರ್ನಾಟಕದ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ಬಯಲುಸೀಮೆ ಜತೆ ಮಲೆನಾಡನ್ನು ಒಳಗೊಂಡ ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ. ಜನವರಿಯಿಂದೀಚೆಗೆ ಈ ಮೂರು ಜಿಲ್ಲೆಗಳಲ್ಲಿ 239 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಇದರ ಜೊತೆಗೆ 83 ಚಿಕೂನ್‌ಗುನ್ಯ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಕಳೆದ ಫೆಬ್ರುವರಿಯಲ್ಲಿ ಡೆಂಗಿಯಿಂದ ಶಿವಮೊಗ್ಗ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದರು.
ಚಿತ್ರದುರ್ಗ ನಗರ– ಡೆಂಗಿ ಹೆಚ್ಚಳ
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಜೂನ್‌ 15ರವರೆಗೆ 72 ಡೆಂಗಿ ಮತ್ತು 58 ಚಿಕೂನ್‌ಗುನ್ಯ ಪ್ರಕರಣಗಳು ದಾಖಲಾಗಿದೆ.
ಚಿಕೂನ್‌ಗುನ್ಯ: ಚಿತ್ರದುರ್ಗ ತಾಲ್ಲೂಕಿನಲ್ಲಿ ಈ 34 ಚಿಕೂನ್‌ಗುನ್ಯ ಪ್ರಕರಣಗಳು ದಾಖಲಾಗಿವೆ. ಜೂನ್ ತಿಂಗಳಲ್ಲಿ ಇಲ್ಲಿಯವರೆಗೆ 10 ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಜಯಮ್ಮ.
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಜೂನ್‌ 16ರವರೆಗೆ 88 ಮಂದಿಗೆ ಡೆಂಗಿ ಇರುವುದು ದೃಢಪಟ್ಟಿದೆ. ಇದೇ ಅವಧಿಯಲ್ಲಿ 16 ಚಿಕೂನ್‌ಗುನ್ಯ ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವನಾಥ.
ಕಳೆದ ಜನವರಿಯಿಂದ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 79 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. 9 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ.
ಹೈ.ಕ. ಬಾಧಿಸದ ಡೆಂಗಿ, ಚಿಕೂನ್‌ ಗುನ್ಯ
ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಇನ್ನೂ ಸರಿಯಾಗಿ ಮಳೆಯಾಗದೇ ಇರುವುದರಿಂದ ಡೆಂಗಿ ಮತ್ತು ಚಿಕೂನ್‌ ಗುನ್ಯದಂತಹ ರೋಗ ಹೆಚ್ಚಾಗಿ ಬಾಧಿಸಿಲ್ಲ.
ಬಳ್ಳಾರಿಯನ್ನು ಹೊರತುಪಡಿಸಿ ಈ ಪ್ರದೇಶದಲ್ಲಿ 37 ಡೆಂಗಿ, 27 ಚಿಕೂನ್‌ ಗುನ್ಯ ಪ್ರಕರಣಗಳು ವರದಿಯಾಗಿವೆ.
ಕೊಪ್ಪಳ ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ 18 ಡೆಂಗಿ, ನಾಲ್ಕು ಚಿಕೂನ್‌ ಗುನ್ಯ ಪ್ರಕರಣಗಳು ವರದಿಯಾಗಿವೆ. 18 ಡೆಂಗಿ ಪ್ರಕರಣಗಳ ಪೈಕಿ 8 ಕೊಪ್ಪಳ ನಗರದಲ್ಲೇ ಪತ್ತೆಯಾಗಿವೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀಕಾಂತ ಬಾಸೂರ ಹೇಳುತ್ತಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಈ ವರ್ಷ ಮೇ ಅಂತ್ಯದವರೆಗೆ ಮೂರು ಡೆಂಗಿ, ಎರಡು ಚಿಕೂನ್‌ಗುನ್ಯ ಪ್ರಕರಣಗಳು ಕಂಡುಬಂದಿದೆ.
‘ರಾಯಚೂರು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 6 ಡೆಂಗಿ ಹಾಗೂ 3 ಚಿಕೂನ್‌ ಗುನ್ಯ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾರಾಯಣಪ್ಪ ಮಾಹಿತಿ ನೀಡಿದ್ದಾರೆ.
ಬೀದರ್‌ ಜಿಲ್ಲೆಯಲ್ಲಿ ಆರು ತಿಂಗಳ ಅವಧಿಯಲ್ಲಿ ಡೆಂಗಿ ಪ್ರಕರಣ ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ.ಎ.ಜಬ್ಬಾರ್‌ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಆರು ತಿಂಗಳಲ್ಲಿ 10ಡೆಂಗಿ, 15ಚಿಕೂನ್ ಗುನ್ಯ ಪ್ರರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಜೂನ್‌ ತಿಂಗಳಲ್ಲೇ 208 ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡೆಂಗಿ ಜ್ವರ ಪ್ರಕರಣಗಳು ಹೆಚ್ಚಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 341 ಪ್ರಕರಣಗಳು ವರದಿಯಾಗಿವೆ. ಡೆಂಗಿ ಜ್ವರದಿಂದ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿರುವುದಾಗಿ ಹೇಳಲಾಗಿದ್ದು, ಆರೋಗ್ಯ ಇಲಾಖೆ ಇದನ್ನು ದೃಢಪಡಿಸಿಲ್ಲ. ಜಿಲ್ಲೆಯಲ್ಲಿ ಚಿಕೂನ್‌ ಗುನ್ಯದ ಹಾವಳಿ ಅಷ್ಟಾಗಿ ಇಲ್ಲ.
ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ 434 ಡೆಂಗಿ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಜೂನ್ ತಿಂಗಳಲ್ಲಿಯೇ ಡೆಂಗಿ ಜ್ವರದ ತೀವ್ರತೆ ಹೆಚ್ಚಾಗಿದ್ದು, ಇದುವರೆಗೆ 208 ಪ್ರಕರಣಗಳು ವರದಿಯಾಗಿವೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 19, ಮಂಗಳೂರು ತಾಲ್ಲೂಕಿನಲ್ಲಿ 19, ಬಂಟ್ವಾಳ 40, ಸುಳ್ಯ 46, ಬೆಳ್ತಂಗಡಿ 34, ಪುತ್ತೂರು ತಾಲ್ಲೂಕಿನಲ್ಲಿ 50 ಪ್ರಕರಣಗಳು ಕಂಡು ಬಂದಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಉಡುಪಿ: ಡೆಂಗಿ ನಿಯಂತ್ರಣ
ಉಡುಪಿ ಜಿಲ್ಲೆಯಲ್ಲಿ ಮೇ 31ರ ವರೆಗೆ ಒಟ್ಟು 139 ಡೆಂಗಿ ಪ್ರಕರಣಗಳು ವರದಿಯಾಗಿವೆ. ಕಾರ್ಕಳದ ಮಾಳ ಹಾಗೂ ಬಜಗೋಳಿಯಲ್ಲಿ ತಲಾ ಒಂದೊಂದು ಸಂಶಯಾಸ್ಪದ ಡೆಂಗಿಗೆ ಸಾವು ಸಂಭವಿಸಿದೆ. ಈ ವರೆಗೆ ಚಿಕೂನ್‌ ಗುನ್ಯಾ ಪ್ರಕರಣ ವರದಿಯಾಗಿಲ್ಲ.
‘ಕಳೆದ ವರ್ಷ ಮೇ ಅಂತ್ಯದ ವೇಳೆಗೆ 331 ಡೆಂಗಿ ಪ್ರಕರಣಗಳು ವರದಿಯಾಗಿದ್ದವು. ಈ ಬಾರಿ ಅದನ್ನು ನಿಯಂತ್ರಿಸಲು ಕ್ರಮ ಕೈಗೊಂಡ ಪರಿಣಾಮ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಎರಡು ಸಂಶಯಾಸ್ಪದ ಸಾವಿಗೆ ಸಂಬಂಧಿಸಿದಂತೆ ಬೆಂಗಳೂರಿನಿಂದ ವರದಿ ಬರಬೇಕಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಕೂನ್ ಗುನ್ಯ 46 ಹಾಗೂ ಡೆಂಗಿ ಜ್ವರದ 29 ಪ್ರಕರಣಗಳು ಇರುವುದು ದೃಢಪಟ್ಟಿದೆ. 1,109 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ನಗರದ ಟಿಪ್ಪುನಗರದಲ್ಲಿ 13, ಕಳಸಾಪುರ 5, ಮರ್ಲೆ 8, ಲಕ್ಯಾದಲ್ಲಿ 2 ಚಿಕೂನ್ ಗುನ್ಯ ಪ್ರಕರಣ ಪತ್ತೆಯಾಗಿವೆ. ಕಳಸಾಪುರದಲ್ಲಿ 4, ಲಕ್ಯಾ 1, ಮಾರ್ಕೆಟ್‌ ರಸ್ತೆ 1 ಹಾಗೂ ಶಂಕರಪುರದಲ್ಲಿ 1 ಡೆಂಗಿ ಜ್ವರ ಪ್ರಕರಣ ಕಂಡುಬಂದಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜೆ.ಗಂಗಾಧರ್‌ ತಿಳಿಸಿದ್ದಾರೆ.
ತುಮಕೂರು ನಗರದಲ್ಲಿ ಹೆಚ್ಚು ಪ್ರಕರಣ
ತುಮಕೂರು ಜಿಲ್ಲೆಯಲ್ಲಿ ಕಳೆದ ಜನವರಿ ತಿಂಗಳಿಂದ ಇಲ್ಲಿಯವರೆಗೆ ಡೆಂಗಿ 18, ಚಿಕುನ್‌ಗುನ್ಯಾ 29, ಮಲೇರಿಯಾ 8 ಪ್ರಕರಣಗಳು ಪತ್ತೆಯಾಗಿವೆ.
ತುಮಕೂರು ನಗರದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್‌.ಶಶಿಕಲಾ ‘ಪ್ರಜಾವಾಣಿ’ ಗೆ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸದ್ಯ ಡೆಂಗಿ, ಚಿಕೂನ್ ಗುನ್ಯದಂತಹ ಸಾಂಕ್ರಾಮಿಕ ರೋಗಗಳು ಹರಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ವಿ.ರಂಗಸ್ವಾಮಿ ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 1 ಡೆಂಗಿ, 3 ಚಿಕೂನ್‌ ಗುನ್ಯಾ ಮತ್ತು 5 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ. 2015ರ ಜನವರಿಯಿಂದ ಡಿಸೆಂಬರ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ 227 ಡೆಂಗಿ, 198 ಚಿಕೂನ್‌ ಗುನ್ಯಾ ಮತ್ತು 33 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆ ತಗ್ಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಮೇಶ್‌ಬಾಬು ತಿಳಿಸಿದರು.
ಡೆಂಗಿ: ಬಾಗಲಕೋಟೆಯಲ್ಲಿ ಯುವತಿ ಸಾವು
ಉತ್ತರ ಕರ್ನಾಟಕ ಭಾಗದಲ್ಲಿ ಬಾಗಲಕೋಟೆ ಮತ್ತು ಬೆಳಗಾವಿ, ವಿಜಯಪುರ, ಬಳ್ಳಾರಿ, ಹಾವೇರಿ ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಹೆಚ್ಚಳವಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಯುವತಿಯೊಬ್ಬಳು ಡೆಂಗಿಗೆ ಬಲಿಯಾಗಿದ್ದಾರೆ.
ಜನವರಿಯಿಂದ ಮೇ ಅಂತ್ಯದವರೆಗೆ ಪತ್ತೆಯಾದ ಡೆಂಗಿ, ಮಲೇರಿಯಾ ಪ್ರಕರಣಗಳು ಜಿಲ್ಲಾವಾರು ಹೀಗಿವೆ. ಬಾಗಲಕೋಟೆ ಜಿಲ್ಲೆಯಲ್ಲಿ 46, ಬೆಳಗಾವಿಯಲ್ಲಿ 56, ವಿಜಯಪುರದಲ್ಲಿ 63, ಬಳ್ಳಾರಿಯಲ್ಲಿ 55, ಧಾರವಾಡದಲ್ಲಿ 18, ಗದಗದಲ್ಲಿ ಏಳು, ಹಾವೇರಿಯಲ್ಲಿ 61, ಉತ್ತರ ಕನ್ನಡದಲ್ಲಿ 14 ಡೆಂಗಿ ಪ್ರಕರಣಗಳು ವರದಿಯಾಗಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ 146, ಬೆಳಗಾವಿಯಲ್ಲಿ 10, ವಿಜಯಪುರದಲ್ಲಿ 36, ಬಳ್ಳಾರಿಯಲ್ಲಿ 20, ಹಾವೇರಿಯಲ್ಲಿ 34, ಉತ್ತರ ಕನ್ನಡದಲ್ಲಿ 12 ಮಲೇರಿಯಾ ಪ್ರಕರಣಗಳು ವರದಿಯಾಗಿವೆ.
ಮಂಡ್ಯದಲ್ಲಿ ಇಳಿಕೆ
ಮಂಡ್ಯ ಜಿಲ್ಲೆಯಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಡೆಂಗಿ, ಚಿಕೂನ್‌ಗುನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ 84 ಡೆಂಗಿ ಪ್ರಕರಣಗಳಿದ್ದವು, ಈ ವರ್ಷ ಇಲ್ಲಿವರೆಗೆ ಕೇವಲ 4 ಪ್ರಕರಣಗಳಷ್ಟೇ ವರದಿಯಾಗಿವೆ. ಚಿಕೂನ್‌ಗುನ್ಯ ಪ್ರಕರಣಗಳು ಕಳೆದ ಸಾಲಿನಲ್ಲಿ 65 ವರದಿಯಾಗಿದ್ದವು, ಈ ಸಾಲಿನಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.
ಮೈಸೂರಿನಲ್ಲಿ ಅತಿ ಹೆಚ್ಚು ಡೆಂಗಿ ಮತ್ತು ಮಂಗಳೂರಿನಲ್ಲಿ ಅತಿ ಹೆಚ್ಚು ಮಲೇರಿಯಾ ಪ್ರಕರಣಗಳು ವರದಿ ಆಗಿವೆ. ಬೆಂಗಳೂರಿನಲ್ಲಿ ಈ ವರ್ಷ ಡೆಂಗಿ ಪ್ರಕರಣ ಕಡಿಮೆ
-ಯು.ಟಿ.ಖಾದರ್‌, ಆರೋಗ್ಯ ಸಚಿವ

Comments are closed.