
ಮಂಗಳೂರು, ಜೂ. 17: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗೆ ಸುಲಲಿತವಾಗಿ ಕರ್ತವ್ಯ ನಿರ್ವಹಿಸಲು ತುಳು ಭಾಷೆ ಕಲಿಕಾ ತರಬೇತಿ ಪ್ರಕ್ರಿಯೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆರಂಭಗೊಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನುರಿತ ಭಾಷಾ ಭೋದಕರಿಂದ 10 ದಿನಗಳ ಕಾಲ ತರಬೇತಿಯನ್ನು ಆಯೋಜಿಸಲಾಗಿದೆ. ಸದ್ರಿ ಕಾರ್ಯಾಗಾರದಲ್ಲಿ ಮಂಗಳೂರು ನಗರ ಪೊಲೀಸ್‌ನ 22ಸಿಬ್ಬಂದಿ ಭಾಗವಹಿಸಿದ್ದಾರೆ. ತುಳು ಭಾಷೆ ಗೊತ್ತಿಲ್ಲದ ಒಂದು ಠಾಣೆಯ ಇಬ್ಬರಂತೆ ಒಟ್ಟು 22 ಮಂದಿ ಪೊಲೀಸರು ಮೊದಲ ತಂಡ ದಲ್ಲಿ ತುಳು ಕಲಿಯುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಅಂಚೆ ತೆರಪಿನ ಶಿಕ್ಷಣ ವಿಭಾಗವು ತುಳು ಡಿಪ್ಲೊಮಾ ಕೋರ್ಸು ನಡೆಸುತ್ತಿದ್ದು, ಅದರ ವತಿಯಿಂದ ಪೊಲೀಸರಿಗೆ ತುಳು ಕಲಿಕೆ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಹೆಚ್ಚು ಪ್ರಚಲಿತ ವಿದೆ ಹಾಗೂ ಇದು ಪ್ರಮುಖ ವ್ಯಾವಹಾರಿಕ ಭಾಷೆಯೂ ಆಗಿದೆ. ಪೊಲೀಸರು ಜನರೊಂದಿಗೆ ನೇರ ಸಂಪರ್ಕದಲ್ಲಿರುತ್ತಿದ್ದು, ಈ ದಿಶೆಯಲ್ಲಿ ಜಿಲ್ಲೆಯ ಜನಸಾಮಾನ್ಯರ ಜತೆ ಸಂವಹನ ನಡೆಸಲು ಸುಲಭ ಸಾಧ್ಯವಾಗುವ ನಿಟ್ಟಿನಲ್ಲಿ ತುಳು ಭಾಷೆಯ ಅರಿವು ಇಲ್ಲದ ಪೊಲೀಸರಿಗೆ ತುಳು ಕಲಿಸಲು ನಿರ್ಧರಿಸಲಾಗಿದೆ.
ವಿ.ವಿ. ಕಾಲೇಜಿನ ವಾಣಿಜ್ಯ ಉಪನ್ಯಾಸಕ ಮತ್ತು ತುಳು ಡಿಪ್ಲೊಮಾ ಕೋರ್ಸಿನ ಸಂಯೋಜಕ ಹಾಗೂ ಎನ್‌ಸಿಸಿ ನೌಕಾ ದಳ ವಿಭಾಗದ ಆಫೀಸರ್ ಡಾ| ಯತೀಶ್ ಅವರು ಈ ತುಳು ಕಲಿಕೆಯ ಸಂಯೋಜಕ ರಾಗಿರುತ್ತಾರೆ. ಡಾ| ವಿಶ್ವನಾಥ ಬದಿಕಾನ ಮತ್ತು ಡಾ| ಕಿಶೋರ್ ಕುಮಾರ್ ಶೇಣಿ ಅವರು ತುಳು ಭಾಷೆಯನ್ನು ಪೊಲೀಸರಿಗೆ ಕಲಿಸುತ್ತಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೆಟ್‌ನಲ್ಲಿ ಇರುವ ಸುಮಾರು 800 ಮಂದಿ ಪೊಲೀಸರ ಪೈಕಿ ಶೇ. 30ರಷ್ಟು ಮಂದಿ ಹೊರ ಜಿಲ್ಲೆಯವರು. ಅವರಿಗೆ ಕರಾವಳಿ ಜಿಲ್ಲೆಗಳ ತುಳು, ಬ್ಯಾರಿ, ಕೊಂಕಣಿ ಭಾಷೆ ಬರುವುದಿಲ್ಲ. ಇಲ್ಲಿ ತುಳು ವ್ಯಾವಹಾರಿಕ ಭಾಷೆ ಆಗಿರುವುದರಿಂದ ಈ ಭಾಷೆಯ ಕನಿಷ್ಠ ಜ್ಞಾನವಾದರೂ ಇರಬೇಕೆಂದು ತೀರ್ಮಾನಿಸಿ, ಹೊರ ಜಿಲ್ಲೆಗಳಿಂದ ಬಂದಿರುವ ಎಲ್ಲ ಪೊಲಿಸ್ ಅಧಿಕಾರಿಗಳಿಗೆ ಮತ್ತು ಸಿಬಂದಿಗೆ ತುಳು ಕಲಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾರಿ ಭಾಷೆಯನ್ನೂ ಪೊಲೀಸರಿಗೆ ಕಲಿಸುವ ಉದ್ದೇಶವಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
Comments are closed.