ಉಡುಪಿ: ಕಾರ್ಕಳ ಜಿಲ್ಲಾ ಪಂಚಾಯತ್ ಸದಸ್ಯನ ಕೊಲೆಗೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ನಡೆದಿದೆ. ಕಳೆದ ರಾತ್ರಿ ದುಷ್ಕರ್ಮಿಗಳ ತಂಡ ಬೈಲೂರು ಜಿ.ಪಂ ಕ್ಷೇತ್ರದ ಸದಸ್ಯ ಸುಮಿತ್ ಶೆಟ್ಟಿ ಮೇಲೆ ಕೊಲೆ ನಡೆಸಲು ಯತ್ನಿಸಿದ್ದು ಸುಮಿತ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಸುಮಿತ್ ಶೆಟ್ಟಿಯ 6 ಗೆಳೆಯರಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

(ಸುಮಿತ್ ಶೆಟ್ಟಿ )
ಜಿಲ್ಲಾಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಅವರನ್ನು ಕೊಲೆ ಮಾಡುವ ವಿಫಲ ಯತ್ನ ನಡೆಸಲಾಗಿದೆ. ಕಳೆದ ರಾತ್ರಿ ಬೈಲೂರು ಬಸ್ಸು ನಿಲ್ದಾಣದ ಮಾರಿಗುಡಿಯ ಬಳಿ ಗುಂಡಿನ ದಾಳಿ ಹಾಗೂ ತಲವಾರಿನಿಂದ ಸುಮಿತ್ ಶೆಟ್ಟಿ ಮೇಲೆ ಧಾಳಿ ನಡೆಸಲಾಗಿದ್ದು ಸುಮಿತ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾದರೆ ಸುಮಿತ್ ಶೆಟ್ಟಿ ಗೆಳೆಯರಾದ ಸಂದೀಪ್, ರಾಕೇಶ್, ಅಮಿತ್, ಸುಧೀರ್, ದೇವದಾಸ್ ಹಾಗೂ ವಾಸು ಅವರ ಮೇಲೆ ತಲವಾರಿನಿಂದ ಹಲ್ಲೆ ಮಾಡಲಾಗಿದ್ದು ಇವರು ಇದೀಗ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸುಮಿತ್ ಶೆಟ್ಟಿ ಈ ಹಿಂದೆ ಭಜರಂಗ ದಳದ ಸಹ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದು ಈ ಸಂದರ್ಬದಲ್ಲೇ ಕೊಲೆ ಬೆದರಿಕೆಯ ಕರೆಗಳು ಬೇರೆ ಸಂಘಟನೆಗಳಿಂದ ಬಂದಿದ್ದವು. ಈ ಹಿಂದೆ ಸುಮಿತ್ ಗೆಳೆಯನಾಗಿದ್ದ ವಿಶು ಸುರತ್ಕಲ್ ನಿನ್ನೆ ಮದ್ಯಾಹ್ನದ ಹೊತ್ತಿಗೆ ಸುಮಿತ್ ಅವರಿಗೆ ಕರೆ ಮಾಡಿ ಕ್ರಿಮಿನಲ್ ಹಿನ್ನಲೆ ಹೊಂದಿರುವ ಪ್ರವೀಣ್ ವರ್ವಾಡಿ ಅವರಿಗೆ ಹಣ ನೀಡುವಂತೆ ಒತ್ತಾಯಿಸಿದ್ದ. ಇದಕ್ಕೆ ಒಪ್ಪದ ಸುಮಿತ್ ಅವರ ಮೇಲೆ ಕೊಲೆ ನಡೆಸುವ ಸಂಚಿನಿಂದ ಈ ದಾಳಿ ನಡೆಸಲಾಗಿದ್ದು ಪ್ರವೀಣ್ ವರ್ವಾಡಿ ಅವರ ಮೇಲೆ ಈಗಾಗಲೇ ಹಪ್ತಾ ವಸೂಲಿಯ 4ಕ್ಕೂ ಹೆಚ್ಚು ಕೇಸುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಈ ಘಟನೆಯ ಸಂಬಂಧ ಈಗಾಗಲೇ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Comments are closed.