ಮನೋರಂಜನೆ

ಗಡ್ಡವಿಜಿ ಹೊಸ ಸಿನ್ಮಾ ವಾಜಿ; ನಾಯಿ ಹಿಡ್ಕೊಂಡ್‌ ಬಂದ್ರು ವಿಜಿ

Pinterest LinkedIn Tumblr

Prajwal-Poovaiah1ಗಡ್ಡವಿಜಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ನಾಯಿ ಹಿಡಿದು ಬರುತ್ತಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ! ಹೌದು, ಅವರ “ಪ್ಲಸ್‌’, ಮೈನಸ್‌ ಆಗುತ್ತಿದ್ದಂತೆಯೇ ಎಲ್ಲೂ ಸುದ್ದಿಯಾಗಿರಲಿಲ್ಲ. ಈಗ ಹೊಸದೊಂದು ಕಥೆ ಹೆಣೆದುಕೊಂಡು ಮತ್ತೆ ಗಾಂಧಿನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಗಡ್ಡವಿಜಿ. ಅಂದಹಾಗೆ, ಅವರು ನಿರ್ದೇಶಿಸಲು ಹೊರಟಿರುವ ಚಿತ್ರಕ್ಕೆ “ವಾಜಿ’ ಎಂದು ಹೆಸರಿಟ್ಟಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ನಾಯಿ ಹೈಲೈಟ್‌!! ಹಾಗಂತ ನಾಯಕ, ನಾಯಕಿ ಇಲ್ಲವೆಂದಲ್ಲ, ಚೇತನ್‌ ಗಂಧರ್ವ ನಾಯಕನಾದರೆ, ಪ್ರಜ್ವಲ್‌ಪೂವಯ್ಯ ನಾಯಕಿ. ಉಳಿದಂತೆ ಅನುಭವಿ ಕಲಾವಿದರ ದಂಡು ಎಂದಿನಂತೆ “ವಾಜಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ ಎಂಬುದು ಗಡ್ಡವಿಜಿ ಮಾತು.

ಈಗಾಗಲೇ ಚಿತ್ರದ ಬರವಣಿಗೆ ಕೆಲಸ ಮುಗಿಸಿರುವ ಗಡ್ಡವಿಜಿ, ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಕಳೆದ ಏಪ್ರಿಲ್‌, ಮೇ ತಿಂಗಳಲ್ಲೇ “ವಾಜಿ’ ಶುರುವಾಗಬೇಕಿತ್ತು. ಆದರೆ, ಕೆಲ ಕಾರಣಗಳಿಂದಾಗಿ ಚಿತ್ರ ಮುಂದಕ್ಕೆ ಹೋಗಿತ್ತು. ಈಗ ಎಲ್ಲವನ್ನೂ ಪೂರೈಸಿರುವ ವಿಜಿ, ಆಗಸ್ಟ್‌ 15 ರಿಂದ ಚಿತ್ರೀಕರಣ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರ ಬಹುತೇಕ ಮಲೆನಾಡು ಭಾಗದಲ್ಲೇ ನಡೆಯುವುದರಿಂದ ಮಳೆಗಾಲ ಮುಗಿಸಿಕೊಂಡು ಹೊರಡುವ ಐಡಿಯಾ ಅವರದ್ದು. “ಇಲ್ಲಿ “ವಾಜಿ’ ಅನ್ನೋದು ಒಂದು ಬುದ್ಧಿವಂತ ನಾಯಿಯ ಹೆಸರು. ಅದರ ಸುತ್ತವೇ ಇಡೀ ಕಥೆ ಸಾಗುತ್ತದೆ. ಅಷ್ಟೇ ಅಲ್ಲ, ನಾಯಿಯ ಜತೆಗೆ ನಾಯಕ, ನಾಯಕಿ ಇರುತ್ತಾರೆ. ಅಂದಮೇಲೆ ನಾಯಿಯೇ ಇಲ್ಲಿ ನಿಜವಾದ ಹೀರೋ’ ಅನ್ನುತ್ತಾರೆ ನಿರ್ದೇಶಕರು.

ಹಾಗಾದರೆ, “ವಾಜಿ’ ಅಂದರೇನು? ಇದಕ್ಕೆ ಉತ್ತರಿಸುವ ಗಡ್ಡವಿಜಿ, ದಾಸ ಸಾಹಿತ್ಯದಲ್ಲಿ ಬಿಲ್‌ ವಿದ್ಯ ಪ್ರವೀಣ, ಕುದುರೆ ಸವಾರ, ಮುಖ್ಯಸ್ಥ… ಹೀಗೆ ನಾನಾ ಅರ್ಥಗಳಿವೆ. ಕಥೆ ಬಗ್ಗೆ ಹೇಳುವುದಾದರೆ, ಒಂದು ವಿಡಂಬನೆಯ ಚಿತ್ರ ಅನ್ನಬಹುದು. ಮೂಢನಂಬಿಕೆ, ಮೌಡ್ಯತೆ ಅನಾದಿಕಾಲದಿಂದಲೂ ಇದೆ.ಈ ಮೌಡ್ಯ ತೆಗೆಯಲು ಅಸಾಧ್ಯ ಎಂಬ ಮಾತಿದೆ. ಎಲ್ಲರ ಪ್ರಯತ್ನವಿದ್ದರೆ ಅದು ಸಾಧ್ಯ. ಇದು ಚಿತ್ರದ ತಿರುಳಾಗಿದ್ದರೂ ಸಹ, ಇಡೀ ಚಿತ್ರವನ್ನು ಕಮರ್ಷಿಯಲ್‌ ಅಂಶಗಳೊಂದಿಗೆ ಚಿತ್ರಿಸುತ್ತಿರುವುದಾಗಿ ಹೇಳುವ ಗಡ್ಡವಿಜಿ, ಇದು ನನ್ನ ಮೂರನೇ ನಿರ್ದೇಶನದ ಚಿತ್ರ. ಕಮರ್ಷಿಯಲ್‌ ಆಗಿ ನಾನು ಗೆಲ್ಲಬೇಕು. ಗಟ್ಟಿ ನೆಲೆನಿಲ್ಲಬೇಕು ಎಂಬ ಉದ್ದೇಶದಿಂದ ತುಂಬಾ ಚೆನ್ನಾಗಿಯೇ ಈ ಬಾರಿ ಸ್ಕ್ರಿಪ್ಟ್ ಮಾಡಿಕೊಂಡಿದ್ದೇನೆ. ಇಲ್ಲಿ ಗೆಳೆಯರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ.

ಇದೊಂದು ಪ್ರಯೋಗಾತ್ಮಕ ಚಿತ್ರ ಹೌದಾದರೂ, ಪಕ್ಕಾ ಕಮರ್ಷಿಯಲ್‌ ಸಿನಿಮಾ ಎನಿಸುವಷ್ಟರಮಟ್ಟಿಗೆ ಚಿತ್ರ ಮಾಡ್ತೀನಿ. ನನ್ನೊಂದಿಗೆ ಇರುವ ಯಾರೂ ಸಹ ಸಂಭಾವನೆ ಇಲ್ಲದೆಯೇ ಕೆಲಸ ಮಾಡುತ್ತಿದ್ದಾರೆ. ಕರಿಸುಬ್ಬು ಅವರ ಬ್ಯಾನರ್‌ನಲ್ಲಿ “ವಾಜಿ’ ತಯಾರಾಗುತ್ತಿದೆ.

ಇನ್ನೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಗುರುಪ್ರಶಾಂತ್‌ರೈ, ಭಾಸ್ಕರ್‌ ರೆಡ್ಡಿ ಹಾಗು ಗುರುಪ್ರಸಾದ್‌ ಈ ಮೂವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಮುಂಬೈನ ಮಾಧವ್‌ ಸಹ ಸ್ವಲ್ಪ ದಿನಗಳ ಮಟ್ಟಿಗೆ ಬಂದು ಕ್ಯಾಮೆರಾ ಹಿಡಿಯಲಿದ್ದಾರೆ. ಸಂಗೀತ ನಿರ್ದೇಶಕರಾದ ವೀರ್‌ಸಮರ್ಥ್ ಹಾಗು ರವಿಬಸ್ರೂರು ಈ ಇಬ್ಬರೂ ಸಂಗೀತ ನೀಡುತ್ತಿದ್ದಾರೆ. ಎಂದಿನಂತೆ ಯೋಗರಾಜ್‌ಭಟ್‌ ಅವರಿಲ್ಲಿ ಸ್ಕ್ರಿಪ್ಟ್ ಓದಿ, ತಿದ್ದಿ ತೀಡಿ, ಗೀತೆ ಗೀಚುವ ಜವಾಬ್ದಾರಿ ಹೊತ್ತಿದ್ದಾರೆ ಎನ್ನುತ್ತಾರೆ ಗಡ್ಡವಿಜಿ.
-ಉದಯವಾಣಿ

Comments are closed.