
ಪುತ್ತೂರು,ಜೂನ್.13: ಕನ್ನಡ ಸಾಹಿತ್ಯ ಪರಿಷತ್ನ ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬಿ. ಐತ್ತಪ್ಪ ನಾಯ್ಕ್ ನೇಮಕಗೊಂಡಿದ್ದಾರೆ. ಅಧ್ಯಕ್ಷರ ನೇಮಕ ಪ್ರಕ್ರಿಯೆ ಸಭೆಯು ಜೂ.12 ರಂದು ಇಲ್ಲಿನ ಅನುರಾಗ ವಠಾರದಲ್ಲಿ ನಡೆದಿದ್ದು, ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ರವರು ಈ ಆಯ್ಕೆಯನ್ನು ಘೋಷಿಸಿದ್ದಾರೆ.
ಶಾಲೆಗಳು ಕನ್ನಡ ಸಂಘದಿಂದ ವಂಚಿತರಾಗಬಾರದು. ಪ್ರೌಢಶಾಲೆಯಿಂದ ಹಿಡಿದು ಅಂಗನವಾಡಿಯಲ್ಲೂ ಕನ್ನಡ ಸಂಘ ಪ್ರಾರಂಭಗೊಳ್ಳಬೇಕು ಎಂದು ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು. ಪರಿಷತ್ತಿನಲ್ಲಿ ಸದಸ್ಯರಾಗಲು ಅಪೇಕ್ಷಿಸುವವರು ತಮ್ಮನ್ನು ತಾವು ತೊಡಗಿಸಿಕೊಳ್ಳುವವರಾಗಿರಬೇಕು. ಇದೊಂದು ರಾಜಕೀಯ ಸಂಘಟನೆಯಲ್ಲ ಎಂದ ಅವರು ಪುತ್ತೂರು ತಾಲೂಕು ಜಿಲ್ಲೆಗೆ ಹೆಚ್ಚು ಶಕ್ತಿ ಕೊಟ್ಟ ಕೇಂದ್ರ ಎಂದರು.
ಶಾಲೆ ಶಾಲೆಗಳಲ್ಲಿ ಸಾಹಿತ್ಯ ಸ್ಪರ್ಧೆ ನಡೆಯಲಿ : ನಮಗೆ ಪುಸ್ತಕ ಮುದ್ರಣ ಮಾಡಿಯೂಗೊತ್ತು, ಹೊತ್ತುಕೊಂಡು ಹೋಗಿಯೂ ಗೊತ್ತು. ಮುಂದೆ ಹೊಸ ಸ್ವರೂಪ ತರುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಶಾಲೆ ಶಾಲೆಗಳಲ್ಲಿ ಸಾಹಿತ್ಯದ ಕುರಿತು ಸ್ಪರ್ಧೆ ಮಾಡಬೇಕು ಎಂದು ಕಲ್ಕೂರ ಸಲಹೆ ನೀಡಿದರು.
ಮಕ್ಕಳಲ್ಲಿ ಓದುವ ಹವ್ಯಾಸ ಮೂಡಿಸಬೇಕು: ಶಾಲೆಗಳನ್ನು ಕೇಂದ್ರ ಮಾಡಿಕೊಂಡು ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಬೇಕು ಎಂದು ಶಿಕ್ಷಣ ತಜ್ಞ ಡಾ| ಸುಕುಮಾರಗೌಡ ಹೇಳಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ನ ನೂತನ ಕಾರ್ಯದರ್ಶಿ ಸರೋಜಿನಿ ವಂದಿಸಿದರು.
ಸಾಹಿತ್ಯ ಪರಿಷತ್ನ ನೂತನ ಅಧ್ಯಕ್ಷರಿಂದ ಪದಾಧಿಕಾರಿಗಳ ಘೋಷಣೆ :ಕನ್ನಡ ಸಾಹಿತ್ಯ ಪರಿಷತ್ನ ನೂತನ ಅಧ್ಯಕ್ಷ ಬಿ. ಐತ್ತಪ್ಪ ನಾಯಕ್ರವರು ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು. ಕಾರ್ಯದರ್ಶಿಯಾಗಿ ನಿವೃತ್ತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಮೇನಾಲ, ಕೋಶಾಧಿಕಾರಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಎನ್.ಕೆ. ಜಗನ್ನಿವಾಸ್ರಾವ್, ಮಹಿಳಾ ಪ್ರತಿನಿಧಿಯಾಗಿ ವತ್ಸಲಾರಾಜ್ಞಿ, ಹಿಂದುಳಿದ ವರ್ಗಗಳ ಸದಸ್ಯರಾಗಿ ನಿವೃತ್ತ ಮುಖ್ಯಗುರು ಕುಮಾರ್ ಕೆ., ಸದಸ್ಯರಾಗಿ ನೆಲ್ಯಾಡಿ ಸೈಂಟ್ ಜಾರ್ಜ್ ಶಿಕ್ಷಣ ಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್, ರಾಮಕುಂಜ ಸಂಸ್ಕೃತ ಶಾಲಾ ಮುಖ್ಯಗುರು ನಾರಾಯಣ ಭಟ್ ಟಿ, ಗಡಿನಾಡ ಧ್ವನಿ ಸಂಪಾದಕ ಅಬೂಬಕ್ಕರ್ ಆರ್ಲಪದವು, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿ’ಸೋಜ, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ| ಹೆಚ್.ಜಿ. ಶ್ರೀಧರ್ ಆಯ್ಕೆಗೊಂಡಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಡಾ| ವರದರಾಜ ಚಂದ್ರಗಿರಿ ಸೇರಿದಂತೆ ಹಲವರನ್ನು ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
Comments are closed.