
ಮಂಗಳೂರು, ಮೇ.21: ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಪಿ. ಬಾಳಿಗ ಹತ್ಯೆ ಪ್ರಕರಣದ ಬಳಿಕ ನಾಪತ್ತೆಯಾಗಿರುವ ಬಾಳಿಗ ಹತ್ಯೆ ಪ್ರಕರಣದ ಶಂಕಿತ ಆರೋಪಿ ಯುವ ಬ್ರಿಗೇಡ್ ನ ನರೇಶ್ ಶೆಣೈ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಎರಡನೇ ಬಾರಿಗೆ ಮುಂದೂಡಿದೆ.
ಈಗಾಗಲೇ ನರೇಶ್ ಶೆಣೈ ಪರ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಈಗ ಈ ಅರ್ಜಿ ವಿಚಾರಣೆ ಕೂಡ ಮುಂದೂಡಲ್ಪಟ್ಟಿದ್ದು, ಇದೀಗ ಹೈಕೋರ್ಟ್ 2ನೇ ಬಾರಿಗೆ ಅರ್ಜಿ ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿದೆ.
ಮಾರ್ಚ್ ೨೩ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು.
ದಿನಾಂಕ: 21-03-2016 ರಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು,
ಗಂಭೀರ ಗಾಯಗೊಂಡ ವಿನಾಯಕ ಪಾಂಡುರಂಗ ಬಾಳಿಗರನ್ನು ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತಲುಪಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ವಿನಾಯಕ ಪಾಂಡುರಂಗ ಬಾಳಿಗರವರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ವಿನಾಯಕ ಪಾಂಡುರಂಗ ಬಾಳಿಗರವರ ತಂಗಿಯಾದ ಅನುರಾಧ ಬಾಳಿಗರವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನಮೋ ಬ್ರಿಗೇಡ್ ಸಂಸ್ಥಾಪಕನಾಗಿದ್ದ ನರೇಶ್ ಶೆಣೈ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿದೆ. ಈತನ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದ ನಡುವೆಯೇ ಶೆಣೈ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಇದೀಗ ಹೈಕೋರ್ಟ್ 2ನೇ ಬಾರಿಗೆ ಅರ್ಜಿ ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿದೆ.
ಆರ್ ಟಿ ಎ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಶೈಲೇಶ್ @ ಶೈಲು (40) ಎಂಬಾತನನ್ನು ಕಳೆದ ಆರು ದಿನಗಳ ಹಿಂದೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ನ್ಯಾಯಲಯಕ್ಕೆ ಹಾಜಾರು ಪಡಿಸಿದ್ದರು. ಬಳಿಕ ಶೈಲೇಶ್ ನನ್ನು ಎಸಿಪಿ ತಿಲಕಚಂದ್ರ ನೇತೃತ್ವದಲ್ಲಿ ಕಸ್ಟಡಿಗೆ ಪಡೆದ ಪೊಲೀಸರು, ಬಾಳಿಗ ಹತ್ಯೆ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Comments are closed.