ಪುತ್ತೂರು /ವಿಟ್ಲ, ಮೇ .20: ಖಾತಾ ಬದಲಾವಣೆಗೆ ಹಣದ ಬೇಡಿಕೆಯಿಟ್ಟು, ಕೃಷಿಕರಿಂದ ಹಣ ಪಡೆಯುತ್ತಿದ್ದ ವೇಳೆ ಗ್ರಾಮಕರಣಿಕ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ಪುಣಚ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಕೊಳ್ನಾಡು, ಸಾಲೆತ್ತೂರು ಪ್ರಭಾರ ಹಾಗೂ ಪುಣಚ ಗ್ರಾಮಕರಣಿಕ ರಂಜಿತ್ ಕೆ.ಆರ್. ದಾಳಿಯಲ್ಲಿ ಸಿಲುಕಿದ ವ್ಯಕ್ತಿಯಾಗಿದ್ದಾರೆ.
ಕಂಬಳಿಮೂಲೆ ನಿವಾಸಿ ನಾಗರಾಜ ಭಟ್ ಎಂಬವರು ಪಾಲಸ್ತಡ್ಕ ಎಂಬಲ್ಲಿ 2 ಎಕ್ರೆ ಕೃಷಿ ಜಮೀನು ಖರೀದಿಸಿದ್ದು, 50ದಿನದಿಂದ ಖಾತಾ ಬದಲಾವಣೆಗಾಗಿ ಗ್ರಾಮಕರಣಿಕರ ಕಚೇರಿಗೆ ಓಡಾಡುತ್ತಿದ್ದಾರೆ. ಕೆಲಸ ಆಗಿರಲಿಲ್ಲವಾದರೂ ಕಚೇರಿಗೆ ಬಂದು ಭೇಟಿಯಾಗಲು ಸೂಚಿಸುತ್ತಾ ಹಣದ ಬೇಡಿಕೆಯನ್ನಿಡುತ್ತಿದ್ದರೆನ್ನಲಾಗಿದೆ. ಇದರಿಂದ ನೊಂದ ಅವರು ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಿಸಿದ್ದರು.
ಗ್ರಾಮಕರಣಿಕರಿಂದ 6ಸಾವಿರ ರೂ. ಬೇಡಿಕೆ ಬಂದಿದ್ದರಿಂದ ನಿನ್ನೆ ಬೆಳಗ್ಗೆ ಎಸಿಬಿ ಅಧಿಕಾರಿಗಳಿಗೆ ತಿಳಿಸಿದಾಗ ಹಣಕ್ಕೆ ರಾಸಾಯನಿಕ ಪೌಡರ್ ಬೆರೆಸಿ ಕೊಂಡೊಯ್ಯಲು ಸೂಚಿಸಿದ್ದಾರೆ. ಹಣ ಪಡೆದುಕೊಂಡ ಗ್ರಾಮ ಕರಣಿಕರು ಮತ್ತಷ್ಟು ಹೆಚ್ಚಿನ ಹಣವನ್ನು ಬೇಡಿಕೆ ಇಟ್ಟಿದ್ದು, 500 ರೂ. ಹೆಚ್ಚುವರಿಯಾಗಿ ನೀಡಿ ಉಳಿದುದನ್ನು ಮತ್ತೆ ವ್ಯವಸ್ಥೆ ಮಾಡುವುದಾಗಿ ತಿಳಿಸುತ್ತಾರೆ. ಈ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಪಂಚನಾಮೆ ಮಾಡಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಅಧೀಕ್ಷಕ ಚೆನ್ನಬಸವಣ್ಣ ಗಂಗೋಟಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಸುಧೀರ್ ಹೆಗ್ಡೆ, ಇನ್ಸ್ಪೆಕ್ಟರ್ಗಳಾದ ಯೋಗೀಶ್ ಕುಮಾರ್, ದಿನಕರ ಶೆಟ್ಟಿ, ಸಿಬ್ಬಂದಿ ಉಮೇಶ್, ರಾಧಾಕೃಷ್ಣ, ರಾಕೇಶ್ ಎಂ, ವಿಟ್ಲ ಹೋಬಳಿ ಕಂದಾಯ ನಿರೀಕ್ಷಕರಾದ ದಿವಾಕರ, ಕಂದಾಯ ಸಹಾಯಕ ಗಿರೀಶ್ ಹಾಜರಿದ್ದರು.

Comments are closed.