
ಮಂಡ್ಯ: ಕನಸಿನ ರಾಣಿ ಮಾಲಾಶ್ರೀ ನಾಯಕರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ನಟಿ. ಅವರಿಗೆ ನಟನೆ ಬರುವುದಿಲ್ಲವೆಂದು ಯಾರಾದ್ರೂ ಹೇಳಿದರೆ ಅದು ತಪ್ಪು ಎಂದು ಸಚಿವ ಅಂಬರೀಶ್ ಮಾಲಾಶ್ರೀ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮಂಡ್ಯದ ಕೆ.ಆರ್.ಎಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಂಬರೀಶ್, ನಟನೆ ಗೊತ್ತಿಲ್ಲದೇ ಮಾಲಾಶ್ರೀ ಕಳೆದ 25 ವರ್ಷಗಳಿಂದ ಅಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಳೇ ಎಂದು ತಿರುಗೇಟು ನೀಡಿದ್ದಾರೆ. ಮಾಲಾಶ್ರೀ ಬಗ್ಗೆ ಯಾರೊಬ್ಬರು ಆ ರೀತಿ ಮಾತನಾಡಬಾರದು. ಅಂತಹ ಮಾತುಗಳು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ನಟನೆ ನಿರೀಕ್ಷಿತ ಮಟ್ಟಕ್ಕಿಲ್ಲ ಎಂದು ನಿರ್ದೇಶಕ ಇಮ್ರಾನ್ ಮಾಲಾಶ್ರೀಯವರಿಗೆ ಮೊಬೈಲ್ ಸಂದೇಶವನ್ನು ರವಾನಿಸಿ ತಮ್ಮನ್ನು ಚಿತ್ರದಿಂದ ಕೈಬಿಡಲಾಗಿದೆ ಎಂದು ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಮಾಲಾಶ್ರೀ ಸುದ್ದಿಗೋಷ್ಟಿ ಕರೆದಿದ್ದರು. ಎರಡೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟೆಸುತ್ತಿದ್ದೇನೆ. ಇಲ್ಲಿಯವರೆಗೆ ನನಗೆ ಯಾರೊಬ್ಬ ನಿರ್ದೆಶಕರು ಆ ರೀತಿ ಹೇಳಿರಲಿಲ್ಲ ಎಂದು ಕಣ್ಣೀರು ಹಾಕಿದ್ದರು.