ಬೆಂಗಳೂರು:ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ಪಿಯು ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರು ಹೋರಾಟವನ್ನು ತೀವ್ರಗೊಳಿಸಿದ್ದು, ಮೌಲ್ಯ ಮಾಪನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ ಎಂದು ಸರ್ಕಾರಕ್ಕೆ ನೇರವಾಗಿ ಸವಾಲು ಹಾಕುವ ಮೂಲಕ ಪಿಯು ಉಪನ್ಯಾಸಕರ ಮತ್ತು ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಂತಾಗಿದೆ.
ಪಿಯು ಮೌಲ್ಯಮಾಪಕರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಗುರುವಾರ ರಾಜ್ಯ ಸರ್ಕಾರ ಎಸ್ಮಾ ಕಾಯ್ದೆ ಪ್ರಯೋಗಿಸುವ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿತ್ತು. ಆದರೆ ಪ್ರತಿಭಟನೆ ನಡೆಸುತ್ತಿರುವ ಪಿಯು ಉಪನ್ಯಾಸಕರು ಯಾವುದೇ ಪರಿಣಾಮ ಎದುರಿಸಲು ಸಿದ್ಧ…ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಯಾಗುವವರೆಗೂ ಮೌಲ್ಯಮಾಪನ ಬಹಿಷ್ಕರಿಸುತ್ತೇವೆ. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕುಮಾರ್ ನಾಯಕ್ ವರದಿ ಜಾರಿಗೆ ಅಗ್ರಹಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಶನಿವಾರ 7ನೇ ದಿನಕ್ಕೆ ಕಾಲಿಟ್ಟಿದ್ದು, ಏಪ್ರಿಲ್ 13ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವುದಾಗಿ ಉಪನ್ಯಾಸಕರು ಪಟ್ಟುಹಿಡಿದಿದ್ದಾರೆ.
-ಉದಯವಾಣಿ