ಕನ್ನಡ ವಾರ್ತೆಗಳು

ಬೈಕ್ ಗೆ ಕಾರು ಡಿಕ್ಕಿ : ಸವಾರ ಮೃತ್ಯು- ಸಹ ಸವಾರ ಗಂಭೀರ ಗಾಯ

Pinterest LinkedIn Tumblr

puttur_car_bike_acdent

ಪುತ್ತೂರು, ಮಾ.26: ಕಾರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಹಸವಾರ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟಣೇ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೀರಾಜೆ ಎಂಬಲ್ಲಿ ನಡೆದಿದೆ.

ಮೃತರನ್ನು ಕಡಬ ಸಮೀಪದ ಕುಟ್ಟುಪ್ಪಾಡಿ ಗ್ರಾಮದ ಅಮೈ ನಿವಾಸಿ ಶಿವಪ್ಪ ಪೂಜಾರಿ ಎಂಬವರ ಪುತ್ರ ಜಿನ್ನಪ್ಪ ಪೂಜಾರಿ (57) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಮೃತ ಜಿನ್ನಪ್ಪ ಪೂಜಾರಿಯವರ ಹತ್ತಿರದ ಸಂಬಂಧಿ ಪೆರ್ಲದಕೆರೆ ನಿವಾಸಿ ಪ್ರಶಾಂತ್ (30) ಗಾಯಾಳು.

ಘಟನೆ ವಿವರ :
ಇವರು ಬೈಕಿನಲ್ಲಿ ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆ ಬರುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆ ಹೋಗುತ್ತಿದ್ದ ಬಜತ್ತೂರು ಗ್ರಾಮದ ಪರಂಗಾಜೆ ನಿವಾಸಿ ಕುರಿಯಕೋಸ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಅಲ್ಟೋ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸುಮಾರು 25 ಅಡಿ ದೂರದಲ್ಲಿ ಚರಂಡಿಗೆ ಎಸೆಯಲ್ಪಟ್ಟಿದ್ದು, ಬೈಕ್‌ನಲ್ಲಿದ್ದ ಓರ್ವ ಚರಂಡಿಯಲ್ಲಿದ್ದರೆ ಇನ್ನೋರ್ವ ರಸ್ತೆಗೆ ಎಸೆಯಲ್ಪಟ್ಟಿದ್ದರು. ಈರ್ವರು ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದು, ತಕ್ಷಣ ಧಾವಿಸಿ ಬಂದ ಸ್ಥಳೀಯರು ಹಾಗೂ ಕಾರು ಚಾಲಕ ಕುರಿಯಕೋಸ್ ಆಸ್ಪತ್ರೆಗೆ ಸಾಗಿಸಿದರೂ ವಿಪರೀತ ರಕ್ತಸ್ರಾವದಿಂದಾಗಿ ದಾರಿ ಮದ್ಯೆ ಚಿನ್ನಪ್ಪ ಪೂಜಾರಿ ಮೃತಪಟ್ಟಿದ್ದಾರೆ. ಕಾರು ಚಾಲಕನ ಅಜಾಗರೂಕತೆಯ ಚಾಲನೆಯಿಂದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿ ಕಡಬ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment