ಮುಂಬೈ

ಮಹಾರಾಷ್ಟ್ರ: ಇಲ್ಲಿನ ಒಂದು ಬಿಂದಿಗೆ ನೀರಿಗಾಗಿ ಎಂಟು ದಿನ ಕಾಯಬೇಕು!

Pinterest LinkedIn Tumblr

water

ಲಾತೂರ್: ಮಹಾರಾಷ್ಟ್ರದಲ್ಲಿ ನೀರಿನ ಕೊರತೆ ಎದುರಾಗಿದ್ದು, ರಾಜ್ಯದ ಲಾತೂರ್ ನಗರದಲ್ಲಿ ಹಾಹಾಕಾರ ಉಂಟಾಗಿದೆ. ಇಲ್ಲಿನ ಜನರು ನೀರು ತುಂಬಿಸಿಕೊಳ್ಳುವುದಕ್ಕೆ ಹರಸಾಹಸ ಮಾಡುತ್ತಿದ್ದು, ಒಂದು ಬಿಂದಿಗೆ ನೀರನ್ನು ತುಂಬಿಸಿಕೊಳ್ಳಲು ಕಳೆದ ಎಂಟು ದಿನಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಮಾ.22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಯಿತು, ಆದರೆ ಇದೇ ದಿನದಂದು ಇಡಿ ವಿಶ್ವಕ್ಕೆ ಮುಂದೊಂದು ದಿನ ಎದುರಾಗಬಹುದಾದ ನೀರಿನ ಸಂಕಷ್ಟದ ಸ್ಥೂಲ ನೋಟ ಮಹಾರಾಷ್ಟ್ರದ ಲಾತೂರ್ ನಲ್ಲಿ ಸಿಕ್ಕಿದೆ. ಲಾತೂರ್ ನ ವಿವೇಕಾನಂದ ಚೌಕ ನಲ್ಲಿರುವ ವಾಟರ್ ಟಾಂಕರ್ ಬಳಿ ನೀರು ತುಂಬಿಸಿಕೊಳ್ಳಲು ಕಾದು ಕುಳಿತಿರುವ ಜನರು ಎಂಟು ದಿನಗಳಿಂದ ನೀರಿಗಾಗಿ ಕಾಯುತ್ತಲೇ ಇದ್ದಾರೆ.

5 ಲಕ್ಷ ಜನರನ್ನೊಳಗೊಂಡ ನಗರಸಭೆಯಾಗಿರುವ ಲಾತೂರ್ ನಗರದಲ್ಲಿ ತೀವ್ರ ಬರ ಉಂಟಾಗಿದ್ದು, ಜಿಲ್ಲಾಡಳಿತ ನೀರು ತುಂಬಿಸಿಕೊಳ್ಳುವ ಕೇಂದ್ರಗಳ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ನೀರು ತುಂಬಿಸಿಕೊಳ್ಳುವ ಕೇಂದ್ರಗಳ ಬಳಿ ಇತ್ತೀಚೆಗೆ ಹಲವು ಸಾವು ಸಂಭವಿಸಿದೆ. ಆದರೆ ಅವು ನೇರವಾಗಿ ನೀರಿನ ವಿಷಯಕ್ಕೆ ಸಂಬಂಧಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ನೀರು ಹಿಡಿಯುವ ವಿಷಯಕ್ಕೆ ಮಾರಾಮಾರಿ, ವಾಗ್ವಾದ ನಡೆಯುವ ಮಟ್ಟಕ್ಕೆ ಅಲ್ಲಿನ ಜನರು ನೀರಿನ ಅಭಾವದಿಂದ ಕಂಗೆಟ್ಟಿದ್ದಾರೆ.

ಇಲ್ಲಿನ ಜನರು ಸ್ವಲ್ಪವಾದರೂ ನೀರು ತುಂಬಿಸಿಕೊಳ್ಳಲು ಕನಿಷ್ಠ 12 ಗಂಟೆಗಳಷ್ಟು ಸಮಯ ಕಾಯಬೇಕಾಗುತ್ತದೆ, ಅಧಿಕಾರಿಗಳು 8 ದಿನಕ್ಕೊಮ್ಮೆ ನೀರು ನೀಡುವುದಾಗಿ ಭರವಸೆ ನೀಡಿದ್ದರು, ಅದಕ್ಕಾಗಿ ಕಾದು ಕುಳಿತರೆ ನಮಗೆ ಕುಡಿಯಲು ಸಹ ನೀರು ಸಿಗುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Write A Comment