ಹೈದರಾಬಾದ್, ಮಾ.22- ದಲಿತ ಸಮುದಾಯದ ಪಿಎಚ್‌ಡಿ ಅಭ್ಯರ್ಥಿ ರೋಹಿತ್‌ವೇಮುಲ ಆತ್ಮಹತ್ಯೆ ಹಾಗೂ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದೀರ್ಘ ಕಾಲ ರಜೆ ಮೇಲೆ ತೆರಳಿದ್ದ ಹೈದರಾಬಾದ್ ವಿಶ್ವವಿದ್ಯಾನಿಲಯದ ಉಪಕುಲಪತಿ (ವಿಸಿ) ಅಪ್ಪಾರಾವ್ ಅವರು ಇಂದು ಕರ್ತವ್ಯಕ್ಕೆ ಹಾಜರಾದಾಗ ವಿದ್ಯಾರ್ಥಿಗಳು ಅವರ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದರು.
ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆಯ ಹಿಂದೆ ಉಪಕುಲಪತಿ ಅಪ್ಪಾರಾವ್ ಪ್ರಚೋದನೆ ಇದೆ ಎಂಬ ಗಂಭೀರ ಆರೋಪವನ್ನು ವಿದ್ಯಾರ್ಥಿಗಳು ಹಾಗೂ ಅವರ ಬೆಂಬಲಿಗರು ಮಾಡಿದ್ದು, ಅವರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಈ ಸಂದರ್ಭ ಅಪ್ಪಾರಾವ್ ರಜೆಯಲ್ಲಿ ತೆರಳಿದ್ದರು. ಎರಡು ತಿಂಗಳ ಸುದೀರ್ಘ ರಜೆಯ ನಂತರ ಇಂದು ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಸಂಘಟನೆಯ ಮುಖಂಡನೊಬ್ಬನನ್ನು ಥಳಿಸಿದ್ದಾರೆ ಎಂದು ಆರೋಪಿಸಿ ಅಪ್ಪಾರಾವ ಅವರು ರೋಹಿತ್ ವೇಮುಲ ಹಾಗೂ ಅವನ ಇತರ ಸಂಗಡಿಗರನ್ನು ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಿಂದ ಅಮಾನತು ಮಾಡಿದ್ದರು. ಜಾತಿ ತಾರತಮ್ಯ ಅನುಸರಿಸುತ್ತಿದ್ದಾರೆ ಎಂದು ವಿಸಿ ಅವರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಜ.17ರಂದು ರೋಹಿತ್ ಅವನ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.