
ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಚಿಂತನಶೀಲ ಸಂದೇಶಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆನ್ ಲೈನ್ ನಲ್ಲಿ ಮತ್ತು ತಾಂತ್ರಿಕತೆ ಬಳಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಭಾರತೀಯ ಮೂಲದ ಅಮೆರಿಕ ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಕಳೆದ ಐದು ವರ್ಷಗಳಲ್ಲಿ ಮೋದಿಯವರು 6 ಸಾವಿರಕ್ಕೂ ಹೆಚ್ಚು ಸಂದೇಶಗಳನ್ನು ಟ್ವೀಟ್ ಮಾಡಿರುವುದರ ಮೇಲೆ ಮಿಚಿಗನ್ ವಿಶ್ವವಿದ್ಯಾಲಯದ ಮಾಹಿತಿ ಶಾಲೆಯ ಸಹಾಯಕ ಉಪನ್ಯಾಸಕ ಜೊಯೊಜೀತ್ ಪಾಲ್ ಅವರು ವಿಶ್ಲೇಷಣೆ ನಡೆಸಿದ್ದಾರೆ. ಮೋದಿಯವರು ಸಾಂಪ್ರದಾಯಿಕ ಮಾಧ್ಯಮಗಳಿಂದ ದೂರವುಳಿದು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಕೆ ಮಾಡಿದ್ದಾರೆ.
ಚಿಂತನೆಗೆ ಒರೆಗೆ ಹಚ್ಚುವಂತಹ ಸಂದೇಶಗಳನ್ನು ಟ್ವಿಟ್ಟರ್ ನಲ್ಲಿ ಬಳಸುತ್ತಿರುವುದರಿಂದ ಮೋದಿಯವರಿಗೆ ಹಿಂದಿನ ಸಮಸ್ಯಾತ್ಮಕ ವಿಷಯಗಳಿಂದ ಮೇಲೆ ಬಂದು ತಾಂತ್ರಿಕವಾಗಿ ಜಾಗತಿಕ ಮಟ್ಟದ ನಾಯಕರಾಗಿ ಗುರುತಿಸಿಕೊಳ್ಳಲು ಅನುಕೂಲವಾಗಿದೆ. ಅವರು ನೇರವಾಗಿ ಮತದಾರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುತ್ತಾರೆ ಪಾಲ್.
ಭಾರತದ ಇದುವರೆಗಿನ ಪ್ರಧಾನ ಮಂತ್ರಿಗಳಲ್ಲಿ ಮೋದಿಯವರು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ನಿಮಗೆ ಮೋದಿಯವರ ಮಾತು ಕೇಳಬೇಕೆಂದರೆ ಅವರ ಸಾಮಾಜಿಕ ಜಾಲತಾಣಕ್ಕೆ ಹೋಗಿ. ಅಲ್ಲಿ ನೀವು ಸಾಮಾನ್ಯ ವ್ಯಕ್ತಿಯಾಗಿರಬಹುದು ಅಥವಾ ಮಾಧ್ಯಮದ ಪ್ರತಿನಿಧಿಯಾಗಿರಬಹುದು ನಿಮಗೆ ಸಂಪರ್ಕ ಸಾಧಿಸಬಹುದು ಎನ್ನುತ್ತಾರೆ ಪಾಲ್. ಅವರ ಅಧ್ಯಯನ ಆರ್ಥಿಕ ಮತ್ತು ರಾಜಕೀಯ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಪ್ರಧಾನ ಮಂತ್ರಿಯವರ ಅಭಿಪ್ರಾಯಗಳನ್ನು ತಿಳಿಸಲು ಸಾಮಾಜಿಕ ಮಾಧ್ಯಮ ಒಂದು ಪ್ರಾಥಮಿಕ ಮೂಲವಾಗಿದೆ ಎಂಬುದು ಅವರ ಅಭಿಮತ.
ಮೋದಿಯವರಲ್ಲಿ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮ ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಹೇಗೆ ಬದಲಾವಣೆಯನ್ನುಂಟುಮಾಡಿತು ಎಂಬುದನ್ನು ಪಾಲ್ ವಿವರಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಚೆನ್ನಾಗಿಯೇ ಬಳಸಿಕೊಂಡಿತು. ಸಾಂಪ್ರದಾಯಿಕವಾಗಿ ಬಿಜೆಪಿ ಗಟ್ಟಿಯಾದ ಪಕ್ಷ ಸಿದ್ದಾಂತವನ್ನು ಹೊಂದಿದೆ. ಇಲ್ಲಿ ಪಕ್ಷದ ಚಿಹ್ನೆ ಮುಖ್ಯವೇ ಹೊರತು ನಾಯಕರಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇಡೀ ಚರ್ಚೆ ಮೋದಿಯವರ ಬಗ್ಗೆಯೇ ನಡೆಯಿತು ಹೊರತು ಪಕ್ಷದ್ದಲ್ಲ ಎನ್ನುತ್ತಾರೆ ಪಾಲ್. ಸೆಲ್ಫಿ ವಿತ್ ಮೋದಿ ಟ್ವಿಟ್ಟರ್ ನಲ್ಲಿ ಒಂದು ವಿನೂತನ ಅಭಿಯಾನ.ಅವರು ಟ್ವೀಟ್ ಮಾಡಿದ ವಿಷಯಕ್ಕೆ ಕನಿಷ್ಠ ಸಾವಿರ ಸಲ ರಿಟ್ವೀಟ್ ಮಾಡಲಾಗಿದೆ. ತಮ್ಮ ಧನಾತ್ಮಕ ಸಂದೇಶಗಳನ್ನು ವಿವಾದರಹಿತವಾಗಿ ಕಳುಹಿಸಿದ ಹೆಗ್ಗಳಿಕೆ ನರೇಂದ್ರ ಮೋದಿಯವರದ್ದು ಎನ್ನುತ್ತಾರೆ ಜೊಯೊಜೀತ್ ಪಾಲ್.