
ಮಂಗಳೂರು,ಮಾ.19 : ಸರಕಾರ, ಜಿಲ್ಲಾಡಳಿತ ಮರಳು ನೀತಿ ರೂಪಿಸುವಲ್ಲಿ ಉಂಟುಮಾಡಿರುವ ಗೊಂದಲದಿಂದಾಗಿ ಜಿಲ್ಲೆಯಲ್ಲಿ ಮರಳಿನ ಅಭಾವ ತಲೆದೋರಿದ್ದು ಮುಖ್ಯವಾಗಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಕೆಲಸವಿಲ್ಲದೆ ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ತಕ್ಷಣ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಸಕ್ರಮ ಮರಳುಗಾರಿಕೆಗೆ ಅನುಮತಿ ನೀಡಬೇಕು ಎಂದು ಡಿವೈಎಫ್ಐ ಒತ್ತಾಯಿಸಿದೆ.
ಅದೇ ಸಂದರ್ಭ ಈಗಲೂ ಜಿಲ್ಲಾಡಳಿತದ ಕಣ್ಣು ತಪ್ಪಿಸಿ ಪೊಲೀಸರ ವಿವಿಧ ಇಲಾಖೆಗಳ ಶಾಮಿಲಾತಿಯೊಂದಿಗೆ ಅಕ್ರಮ ಮರಳುಗಾರಿಕೆ ಹವ್ಯಾಸವಾಗಿ ನಡೆಯುತ್ತಿದೆ. ಇಂತಹ ಅಕ್ರಮದಲ್ಲಿ ತೊಡಗಿಕೊಂಡಿರುವ ಮರಳು ಮಾಫಿಯಾದ ಮಂದಿ ಸ್ಥಳೀಯರಿಗೆ ಮರಳು ನಿರಾಕರಿಸುತ್ತಿದ್ದು ಕೇರಳಕ್ಕೆ ರಾಜರೋಷವಾಗಿ ಮರಳು ಸಾಗಿಸುತ್ತಿದ್ದಾರೆ. ಮುಖ್ಯವಾಗಿ ಪಾವೂರು,ಹರೇಕಳ ಮರಳು ಧಕ್ಕೆಗಳು ಅಕ್ರಮ ಮರಳುಗಾರಿಕೆ ಕೇರಳ ಸಾಗಾಟದ ಕೇಂದ್ರಳಾಗಿದ್ದು ಕೊಣಾಜೆ ಠಾಣೆಯ ಪೋಲೀಸರ ಎಸ್ಕಾರ್ಟ್ನಲ್ಲೇ ಕೇರಳಕ್ಕೆ ಮರಳು ಸಾಗಿಸಲಾಗುತ್ತಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆಪಾದಿಸಿದೆ.
ಗ್ರಾಮಸ್ಥರು, ಸಂಘಟನೆಗಳು ಅಕ್ರಮ ಸಾಗಾಟದ ವಿರುದ್ಧ ದೂರು ನೀಡಿದರೆ ಅವರನ್ನೇ ಬೆದರಿಸುವ ಕೆಲಸ ನಡೆಯುತ್ತದೆ. ಜಿಲ್ಲಾಧಿಕಾರಿಗಳು ಇಂತಹ ಅಂತರಾಜ್ಯ ಸಾಗಾಟವನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ ಸ್ಥಳೀಯರಿಗೆ ಮರಳು ದೊರಕುವಂತೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.