ಮಂಗಳೂರು,ಮಾ.18: ರಾಜ್ಯ ಸರಕಾರದ ಎಸ್.ಎಫ್.ಸಿ. ಅನುದಾನದಿಂದ ಪಾಲಿಕೆ ವ್ಯಾಪ್ತಿಯ ಮನೆಗಳಿಗೆ ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ವಿತರಿಸುವ ಪಾಲಿಕೆಯ ಯೋಜನೆ ಸಾರ್ವಜನಿಕ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ. ಮೇಯರ್ ಪದವಿ ಸ್ವೀಕರಿಸುತ್ತಲೇ ಪ್ಲಾಸ್ಟಿಕ್ ನಿಷೇದದ ಮಂತ್ರ ಪಠಿಸಿದ ಮೇಯರ್ರವರು ತಮ್ಮ ಪ್ರಥಮ ಕೊಡುಗೆಯಾಗಿ ಜನತೆಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ವಿತರಿಸಲು ಯೋಜನೆ ಹಾಕಿರುವುದು ಅವರ ಹೇಳಿಕೆಗೆ ವ್ಯತಿರಿಕ್ತವಾಗಿದೆ.
1.90 ಕೋಟಿ ರೂಪಾಯಿಗಳ ಎಸ್.ಎಫ್.ಸಿ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸುವುದನ್ನು ಬಿಟ್ಟು ಸಾರ್ವಜನಿಕರಿಗೆ ಕಸದ ಬುಟ್ಟಿ ನೀಡುವ ವ್ಯರ್ಥ ಯೋಜನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಹಿಂದೆ ನಗರದ ಕೆಲವು ವಾರ್ಡುಗಳಲ್ಲಿ ಇಂತಹ ಕಸದ ಬುಟ್ಟಿಗಳನ್ನು ವಿತರಿಸಿದ ಬಗ್ಗೆ ಅವುಗಳ ಬಳಕೆ ಮತ್ತು ಈಗ ಅವುಗಳ ಅಸ್ಥಿತ್ವದ ಬಗ್ಗೆ ಸಂಪೂರ್ಣ ವರದಿಯನ್ನು ತರಿಸಿ ಪಾಲಿಕೆ ಸಭೆಯಲ್ಲಿ ಅದನ್ನು ಮಂಡಿಸಬೇಕಾಗಿ ಆಗ್ರಹಿಸುತ್ತೇವೆ.
ಪಾಲಿಕೆ ವ್ಯಾಪ್ತಿಯ ಹೆಚ್ಚಿನ ಎಲ್ಲಾ ಮನೆಗಳಲ್ಲಿ ಕಸದ ಬುಟ್ಟಿ ಇರುವುದು ಸಾಮಾನ್ಯವಾಗಿರುವಾಗ ಪುನಃ ಪ್ಲಾಸ್ಟಿಕ್ ಕಸದ ಬುಟ್ಟಿಯನ್ನು ಪಾಲಿಕೆ ವತಿಯಿಂದ ನೀಡಲು ಯೋಜನೆ ರೂಪಿಸುವುದರ ಹಿಂದೆ ಆಡಳಿತದವರ ಸ್ವಹಿತಾಸಕ್ತಿ ಅಡಗಿರುತ್ತದೆ. ಈ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸುತ್ತೇವೆ.
