ರಾಷ್ಟ್ರೀಯ

ನಾನು ಯಾರಿಗೂ ಸಂದರ್ಶನ ನೀಡಿಲ್ಲ…ಮಾಧ್ಯಮಗಳ ವರದಿಯಿಂದ ಆಶ್ಚರ್ಯವಾಗಿದೆ: ಮಲ್ಯ ಸ್ಪಷ್ಟನೆ

Pinterest LinkedIn Tumblr

vijay mallya1

ನವದೆಹಲಿ; ಇತ್ತೀಚೆಗಷ್ಟೇ ಸುದ್ದಿಯಾಗಿದ್ದ ಖಾಸಗಿ ಪತ್ರಿಕೆಯೊಂದಿಗಿನ ಇಮೇಲ್ ಸಂದರ್ಶನ ಕುರಿತ ಹೇಳಿಕೆಯನ್ನು ಮದ್ಯದ ದೊರೆ ವಿಜಯ್ ಮಲ್ಯ ಅವರು ತಿರಸ್ಕರಿಸಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮಲ್ಯ ಅವರು, ಮಾಧ್ಯಮಗಳ ವರದಿ ನೋಡಿ ಆಶ್ಚರ್ಯವಾಯಿತು. ನಾನು ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿಯೇ ಇಲ್ಲ. ಪರಿಶೀಲಸದೆಯೇ ವರದಿ ಮಾಡಲು ಹೇಗೆ ಸಾಧ್ಯ. ನಾನು ಯಾರೊಂದಿಗೂ ಮಾತನಾಡಿಲ್ಲ. ಯಾವ ಹೇಳಿಕೆಯನ್ನು ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದರಂತೆ ಮಲ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪತ್ರಿಕೆಯು, ಮಲ್ಯ ಅವರೊಂದಿಗನ ಸಂಪೂರ್ಣ ಸಂದರ್ಶನವನ್ನು ನಾವು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದೇವೆ. ಮಲ್ಯ ಅವರ ಹೇಳಿಕೆಯನ್ನು ಪರಿಶೀಲಿಸುತ್ತೇವೆ. ಎಂದು ಸಂಡೇ ಗಾರ್ಡಿಯನ್ ಸಂಪಾದಕ ಪಂಕಜ್ ವೊಹ್ರಾ ಅವರು ಹೇಳಿಕೊಂಡಿದ್ದಾರೆ.

ಈ ಹಿಂದಷ್ಟೇ ಪತ್ರಿಕೆಯೊಂದಕ್ಕೆ ಇಮೇಲ್ ಮೂಲಕ ಮಲ್ಯ ಅವರು ಸಂದರ್ಶನವನ್ನು ನೀಡಿದ್ದಾರೆಂದು ಹೇಳಲಾಗುತ್ತಿತ್ತು. ಸಂದರ್ಶನದಲ್ಲಿ ದೇಶದಲ್ಲಿ ನನ್ನನ್ನು ಈಗಾಗಲೇ ಅಪರಾಧಿ ಎಂದು ಬಿಂಬಿಸಲಾಗುತ್ತಿದ್ದು, ಪ್ರಸ್ತುತ ಭಾರತಕ್ಕೆ ಬರಲು ಇದು ಸರಿಯಾದ ಸಮಯವಲ್ಲ. ಬ್ಯಾಂಕುಗಳು ಎಲ್ಲಾ ರೀತಿಯ ಆಯಾಮಗಳನ್ನು ಪರಿಶೀಲಿಸಿದ ನಂತರವಷ್ಟೇ ನನಗೆ ಹಣವನ್ನು ನೀಡಿದೆ. ನನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಹಾಗೂ ಯಾವುದರಿಂದಲೂ ನಾನು ಓಡಿ ಹೋಗುತ್ತಿಲ್ಲ. ವೈಯಕ್ತಿಕ ಕೆಲಸಗಳಿಂದಾಗಿ ನಾನು ಲಂಡನ್ ನಲ್ಲಿದ್ದೇನೆ.

ಸಾಲದ ಸಮಸ್ಯೆ ನನ್ನ ವ್ಯವಹಾರದ ವಿಚಾರ. ಬ್ಯಾಂಕುಗಳು ನನಗೆ ಸಾಲ ನೀಡಿದಾಗ ಎಲ್ಲಾ ರೀತಿಯ ಸಮಸ್ಯೆಗಳನ್ನು ತಿಳಿದುಕೊಂಡೇ ನೀಡಿದೆ. ಪ್ರಸ್ತುತ ನಮ್ಮ ವ್ಯವಹಾರಗಳು ಕುಸಿತವನ್ನು ಕಂಡಿದೆ ನಿಜ. ಹಾಗೆಂದ ಮಾತ್ರಕ್ಕೆ ನನ್ನ ಖಳನಾಯಕನಾಗಿ ಬಿಂಬಿಸಬೇಡಿ. ಪ್ರಸ್ತುತ ನನ್ನನ್ನು ಕೆಲವು ಪಟ್ಟಭದ್ರತಾ ಹಿತಾಸಕ್ತಿಗಳು ಬಲಿಪಶುವಂತೆ ಬಳಸಿಕೊಳ್ಳುತ್ತಿವೆ. ನನ್ನ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಹೇಳಿಕೊಂಡಿದ್ದಾರೆಂದು ಹೇಳಲಾಗುತ್ತಿತ್ತು.

ಇದೀಗ ಮಲ್ಯ ಅವರೇ ನಾನು ಸಂದರ್ಶನವನ್ನು ನೀಡಿಲ್ಲ. ಯಾವ ಹೇಳಿಕೆಯನ್ನು ನೀಡಿಲ್ಲ ಎಂದು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Write A Comment