
ಮಂಗಳೂರು, ಮಾ.15: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸೋಮವಾರ ಜಿ.ಪಂನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ತ್ರೈಮಾಸಿಕ ಸಮೀಕ್ಷಾ ಸಭೆಯಲ್ಲಿ ದ.ಕ. ಜಿಲ್ಲೆಯ ಜನಸಾಮಾನ್ಯರನ್ನು ಕಾಡುತ್ತಿರುವ ಮರಳಿನ ಅಭಾವದ ಸಮಸ್ಯೆ ಬಗ್ಗೆ ತೀವ್ರ ಚರ್ಚೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆಯೇ ಮರಳಿನ ವಿಷಯ ಪ್ರಸ್ತಾಪಿಸಿದ ಶಾಸಕ ಜೆ.ಆರ್ ಲೋಬೊ, ಜಿಲ್ಲೆಯಲ್ಲಿ ಮರಳಿನ ಸಮಸ್ಯೆಯಿಂದಾಗಿ ಜನಪ್ರತಿನಿಗಳು ಜನರಿಗೆ ಉತ್ತರ ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದೆ. ಜ.14ರಿಂದ ಇಂದಿನವರೆಗೆ ಮರಳು ಪೂರೈಕೆಯಾಗುತ್ತಿಲ್ಲ. ಸಿಆರ್ಝೆಡ್ನಡಿ ಮರಳುಗಾರಿಕೆಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ದೊರೆಯಬೇಕಾಗಿದೆ ಎಂದು ಅಕಾರಿಗಳು ಹೇಳುತ್ತಿದ್ದಾರೆ. ಇದರಿಂದ ನಾವು ತ್ರಿಶಂಕು ಸ್ಥಿತಿಯಲ್ಲಿದ್ದೇವೆ ಎಂದು ಆಕ್ಷೇಪಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಬೆಂಗಳೂರು ಮತ್ತು ಕೇರಳಕ್ಕೆ ನಿರಂತರವಾಗಿ ಸಾಗುತ್ತಿದೆ. ಆದರೆ ನಮಗೆ ಮಾತ್ರ ಮರಳು ಇಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೈ, ಮರಳಿನ ಸಮಸ್ಯೆ ರಾಜ್ಯಾದ್ಯಂತ ಇದೆ. ಜಿಲ್ಲೆಯಲ್ಲಿ ಸಿಆರ್ಝೆಡ್ ಹಾಗೂ ಸಿಆರ್ಝೆಡೇತರ ವಲಯ ಎಂಬ ಭಿನ್ನವಾದ ಸ್ಥಿತಿ ಇದೆ. ಸಿಆರ್ಝೆಡ್ನಡಿ ಮರಳುಗಾರಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿಗಾಗಿ ಅರ್ಜಿ ಸಲ್ಲಿಸುವಲ್ಲಿ ಆಗಿರುವ ವಿಳಂಬದಿಂದಾಗಿ ತೊಂದರೆಯಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಏಕರೂಪದ ಮರಳು ನೀತಿಗಾಗಿ ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಸಿಆರ್ಝೆಡೇತರ ಇರುವ ಕಾನೂನನ್ನು ಊರ್ಜಿತ ಮಾಡಿ ಕ್ರಮಕ್ಕೆ ಮುಂದಾಗಲಾಗಿದೆ. ಈ ನಡುವೆ ನಮ್ಮ ಮೇಲೆ ಮರಳು ಮಾಫಿಯಾ, ಅಕ್ರಮ ಮರಳುಗಾರಿಕೆಯ ಆರೋಪವೂ ಇರುವುದರಿಂದ ಕಾನೂನು ಬದ್ಧವಾಗಿಯೇ ಕ್ರಮಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಿಂದ ಬೇರೆಡೆಗೆ 15,000 ರೂ.ಗಳಿಗೆ ಮರಳು ಸಾಗಾಟವಾಗುತ್ತಿದೆ. ಇಲ್ಲಿನ ಅಕಾರಿಗಳ ಮೂಲಕವೇ ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಿದ ಶಾಸಕ ಜೆ.ಆರ್. ಲೋಬೊ, ಜಿಲ್ಲೆಯ ಮರಳಿನ ಸಮಸ್ಯೆಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಜಿಲ್ಲಾಕಾರಿ ಎ.ಬಿ. ಇಬ್ರಾಹೀಂ ಮಾತನಾಡಿ, ಜಿಲ್ಲೆಯಲ್ಲಿ ಸಿಆರ್ಝೆಡೇತರ 38 ಬ್ಲಾಕ್ಗಳನ್ನು ಗುರುತಿಸಿ, 37 ಬ್ಲಾಕ್ಗಳಲ್ಲಿ ಮರುಳುಗಾರಿಕೆಗೆ ಅವಕಾಶ ನೀಡಿ ಜನವರಿಯಲ್ಲಿ ಟೆಂಡರ್ ಕರೆಯಲಾಗಿತ್ತು. ಟೆಂಡರ್ ನಿಯಮ ಕಠಿಣವಾಗಿದ್ದ ಕಾರಣ ಯಾರು ಟೆಂಡರ್ ಹಾಕಿರಲಿಲ್ಲ. ಮತ್ತೆ ಮಾ.29ರಿಂದ ಟೆಂಡರ್ ಆರಂಭಿಸಿ 22 ಗುತ್ತಿಗೆದಾರರಿಗೆ ಮರಳು ತೆಗೆಯಲು ಔಪಚಾರಿಕ ಆದೇಶ ದೊರೆಯಲಿದೆ. ಇದೇ ವೇಳೆ ಮನಪಾ ವ್ಯಾಪ್ತಿಯ ಸರಕಾರಿ ನಿರ್ಮಾಣ ಕಾಮಗಾರಿಗಳಿಗೆ ಅರ್ಕುಳ ಬ್ಲಾಕ್, ಜಿಪಂ ವ್ಯಾಪ್ತಿಗೆ ಉಪ್ಪಿನಂಗಡಿ ಬ್ಲಾಕ್ ಹಾಗೂ ಪಿಡಬ್ಲುಡಿಗೆ ಕೂಡಾ ಪ್ರತ್ಯೇಕ ಬ್ಲಾಕ್ ನಿಗದಿಪಡಿಸಲಾಗಿದೆ. ಉಳಿದಂತೆ 29 ಬ್ಲಾಕ್ಗಳಿಗೆ ಮತ್ತೆ ಶಾರ್ಟ್ ಟೆಂಡರ್ ಕರೆಯಲಾಗಿದ್ದು, ಮಾ.23 ಕೊನೆಯ ದಿನವಾಗಿದೆ. ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದರು.

ಉತ್ತರದಿಂದ ತೃಪ್ತರಾಗದ ಐವನ್ ಡಿಸೋಜ ಹಾಗೂ ಜೆ.ಆರ್. ಲೋಬೊ, ಮಾ.23ರವರೆಗಿನ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಭೆಯಲ್ಲಿ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರಲ್ಲದೆ, ಇಲ್ಲವಾದಲ್ಲಿ ಸಭೆ ಬಹಿಷ್ಕರಿಸುವುದಾಗಿ ಹೊರ ನಡೆಯಲು ಮುಂದಾದರು.
ಸಭೆಯಲ್ಲಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್ ಕೂಡಾ ಪರ್ಯಾಯ ವ್ಯವಸ್ಥೆಗೆ ಸಭೆಯಲ್ಲೇ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿದರು. ಸಂದರ್ಭ ಸಚಿವ ರೈ, ಕಾನೂನು ರೀತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಅವಕಾಶ ಇಲ್ಲದಂತೆ ಜಿಲ್ಲೆಯ ಮರಳು ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಕಾರಿ ಅವರು ಇಂದೇ ಸಂಬಂಧಪಟ್ಟವರ ಸಭೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಮೊಯ್ದಿನ್ ಬಾವ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮೇಯರ್ ಹರಿನಾಥ್, ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ದ.ಕ.ಜಿಪಂ ಸಿಇಒ ಶ್ರೀವಿದ್ಯಾ, ಪಾಲಿಕೆ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಉಪಸ್ಥಿತರಿದ್ದರು.