ರಾಷ್ಟ್ರೀಯ

ಮಲ್ಯ ಪರಾರಿಗೆ ಎನ್‌ಡಿಎ ರಹದಾರಿ : ಕಾಂಗ್ರೆಸ್‌ನಿಂದ ಪಂಚ ಪ್ರಶ್ನೆಗಳು…

Pinterest LinkedIn Tumblr

Vijay_Mallya

ನವದೆಹಲಿ: ಹೆಂಡದ ದೊರೆ ವಿಜಯ್ ಮಲ್ಯ ತಪ್ಪಿಸಿಕೊಂಡು ಹೋಗಲು ಎನ್‌ಡಿಎ ಸರ್ಕಾರವೇ ಕಾರಣ ಎಂದಿರುವ ಕಾಂಗ್ರೆಸ್ ಪಕ್ಷ `ಐದು ಮೂಲಭೂತ ಪ್ರಶ್ನೆಗಳಿಗೆ` ಉತ್ತರ ನೀಡುವಂತೆ ಸರ್ಕಾರಕ್ಕೆ ಕೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಕಪ್ಪು ಹಣ ಹಿಂದಕ್ಕೆ ತರುತ್ತೇವೆ ಎಂಬ ಮಾತಿಗೆ ತಪ್ಪಿರುವ ಸರ್ಕಾರ ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಪರಾರಿಯಾಗಲು ಆಸ್ಪದ ನೀಡಿದೆ ಎಂದರು.

ಕಾಂಗ್ರೆಸ್ ಐದು ಮೂಲಭೂತ ಪ್ರಶ್ನೆಗಳು ಕೆಳಕಂಡಂತಿವೆ.
1. 9000 ಕೋಟಿ ರೂ.ಗಳ ವಸೂಲಿಗಾಗಿ ವಿಜಯ್‌ಮಲ್ಯರನ್ನು ಹಸ್ತಾಂತರಿಸುವಂತೆ ಬ್ರಿಟನ್ ಸರ್ಕಾರದ ಮೇಲೆ ಸರ್ಕಾರ ಒತ್ತಡ ಹೇರುವುದೆ?

2. ಲಂಡನ್ನಿಗೆ ತೆರಳುವ ಮುನ್ನ ಮಾ. 1 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಹಣಕಾಸು ಕಾರ್ಯದರ್ಶಿಯನ್ನು ಭೇಟಿಯಾಗಿದ್ದರು. ಈ ಬಗ್ಗೆ ಜೇಟ್ಲಿ ಪ್ರಧಾನ ಮಂತ್ರಿ ಮೋದಿ ಅವರಿಗೆ ತಿಳಿಸಿದ್ದರೆ? ಈ ಬಗ್ಗೆ ಸರ್ಕಾರ ಸಂಸತ್ತಿಗೆ ತಿಳಿಸುವುದೆ?

3. ವಿಜಯಮಲ್ಯ ಅವರ ಶೋಧಕ್ಕಾಗಿ (ಲುಕ್ ಔಟ್) ಸಿಬಿಐ ಹೊರಡಿಸಿದ್ದ ನೋಟೀಸ್‌ನ್ನು ಮಾಹಿತಿ ಶೋಧಕ್ಕಾಗಿ ಎಂದು ಸಿಬಿಐ ಇದ್ದಿತು. ಇದರ ಹಿಂದಿನ ಉದ್ದೇಶವೇನು?

4. ಜಾರಿ ನಿರ್ದೇಶನಾಲಯ ಮಲ್ಯರಿಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ. ನ್ಯಾಯಾಲಯವೊಂದು ಜಾಮೀನುರಹಿತ ವಾರಂಟ್ ಹೊರಡಿಸಿದೆ. ಇವೆಲ್ಲ ಭಾರತಕ್ಕೆ ಬರಬಾರದೆಂದು ಹೊರಟಿರುವ ಮಲ್ಯ ಕುರಿತಂತೆ ಜನರ ಕಣ್ಣೊರೆಸುವ ತಂತ್ರಗಳೇ?

5. ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯ ಅಧ್ಯಕ್ಷ ಪದವಿ ತೊರೆಯಲು ಡಿಯಾಜಿಯೋ 515 ಕೋಟಿ ರೂ. (75 ದಶಲಕ್ಷ ಡಾಲರ್) ನೀಡಲು ಒಪ್ಪಿತ್ತು. ಇದರಲ್ಲಿ 40 ದಶಲಕ್ಷ ಡಾಲರ್‌ಗಳನ್ನು ಮಲ್ಯ ಈಗಾಗಲೇ ಪಡೆದಿದ್ದಾರೆ. ಇದರ ವಸೂಲಿಗೆ ಮೋದಿ ಸರ್ಕಾರದ ಯೋಜನೆಯೇನು? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.

Write A Comment