
ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಹಿಂದಿರುಗಬೇಕು ಪಾಸ್ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಅಟಾರ್ನಿ ಜನರಲ್ ಮುಖುಲ್ ರೊಹಟಗಿ ಇಂದು ಹೇಳಿದ್ದಾರೆ. ಸದ್ಯಕ್ಕೆ ಭಾರತಕ್ಕೆ ಬರುವುದಿಲ್ಲ ಎಂದು ವಿಜಯ್ ಮಲ್ಯ ಸಂದರ್ಶನದಲ್ಲಿ ಹೇಳಿರುವ ಹಿನ್ನೆಲೆಯಲ್ಲಿ ಹೀಗೆ ರೊಹಟಗಿ ಪ್ರತಿಕ್ರಿಯಿಸಿದ್ದಾರೆ.
ಬಹುಕೋಟಿ ಬ್ಯಾಂಕ್ ಸಾಲ ಮರುಪಾವತಿಸದೆ ಇಂಗ್ಲೆಂಡ್ಗೆ ಹೋಗಿರುವ ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಹಿಂದಿರುಗಬೇಕು ಮತ್ತು ಪಾಸ್ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಅಟಾರ್ನಿ ಜನರಲ್ ಮುಖುಲ್ ರೊಹಟಲಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಮಲ್ಯ ಅವರಿಗೆ ನೋಟಿಸ್ ನೀಡಿದೆ. ಆದರೆ, ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿಲ್ಲ. ಹೀಗಾಗಿ ಮಲ್ಯ ಅವರು ನ್ಯಾಯಾಲಯಕ್ಕೆ ಹಾಜರಾಗಬಹುದು ಅಥವಾ ಅವರ ಪರ ವಕೀಲರು ಹಾಜರಾಗಬಹುದು. ಅದು ಮಲ್ಯ ಅವರಿಗೆ ಬಿಟ್ಟ ವಿಚಾರ. ಖುದ್ದಾಗಿ ಹಾಜರಾಗುವುದಕ್ಕೆ ಕಡ್ಡಾಯವಿಲ್ಲದ ಕಾರಣ ಬಹುಷಃ ಮಲ್ಯ ಪರ ವಕೀಲರು ಹಾಜರಾಗಬಹುದು ಎಂದು ರೊಹಟಗಿ ಹೇಳಿದ್ದಾರೆ.
ಮುಂದಿನ ಹೆಜ್ಜೆ
ಈ ಪ್ರಕರಣಕ್ಕೆ ಸರಕಾರದ ಮುಂದಿನ ಹೆಜ್ಜೆ ಮಲ್ಯ ಅವರ ವಕೀಲರ ಪ್ರತಿಕ್ರಿಯೆ ಮೇಲೆ ಅವಲಂಬಿತವಾಗಿದೆ. ಅವರ ಪ್ರತಿಕ್ರಿಯೆ ಸಕಾರಾತ್ಮಕವಾಗಿರುತ್ತದೆಯೋ, ನಕಾರಾತ್ಮಕವಾಗಿರುತ್ತದೆಯೋ ಅದನ್ನು ಹೇಳಲಾರೆ. ಆದರೆ, ನಮ್ಮ ಮನವಿ ಅವರು ಭಾರತಕ್ಕೆ ಹಿಂದಿರುಗಬೇಕು ಮತ್ತು ತಮ್ಮ ಪಾಸ್ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂಬುದು ಎಂದೂ ಅಟಾರ್ನಿ ಜನರಲ್ ಹೇಳಿದ್ದಾರೆ.
ಸಾಧ್ಯತೆ ಇಲ್ಲ
ಕಿಂಗ್ಫಿಷರ್ ಏರ್ಲೈನ್ಸ್ಗಾಗಿ 7 ಸಾವಿರ ಕೋಟಿ ಸಾಲ ಪಡೆದು ಮರು ಪಾವತಿ ಮಾಡದೆ ಇಂಗ್ಲೆಂಡಿಗೆ ತೆರಳಿರುವ ಉದ್ಯಮಿ ವಿಜಯ್ ಮಲ್ಯ ಸದ್ಯಕ್ಕೆ ಭಾರತಕ್ಕೆ ಹಿಂದಿರುಗುವ ಸಾಧ್ಯತೆ ಇಲ್ಲ. ಭಾರತಕ್ಕೆ ಹಿಂದಿರುಗಲು ಇದು ಸರಿಯಾದ ಸಮಯವಲ್ಲ ಎಂದೂ ಮಲ್ಯ ಹೇಳಿದ್ದಾರೆ.
ಬ್ಯಾಂಕುಗಳು ತಮಗೆ ಸಾಲ ನೀಡಬೇಕಾದರೆ ಎಲ್ಲ ಅಂಶಗಳನ್ನು ಗಮನಿಸಿಯೇ ಸಾಲ ಕೊಡುತ್ತವೆ. ಆದರೆ, ನನ್ನನ್ನು ಉದ್ದೇಶಪೂರ್ವಕವಾಗಿ ಖಳನಾಯಕನನ್ನಾಗಿಸಲಾಗಿದೆ. ತಾನು ತನಿಖಾ ಏಜನ್ಸಿಗಳಿಂದ ತಪ್ಪಿಸಿಕೊಳ್ಳುತ್ತಿಲ್ಲ, ಸಂಡೆ ಗುರ್ಡಿಯನ್ ಪತ್ರಿಕೆಗೆ ನೀಡಿರುವ ಇ-ಮೇಲ್ ಮೂಲಕದ ಸಂದರ್ಶನದಲ್ಲಿ `ಮಾಧ್ಯಮಗಳು ಸದ್ಯಕ್ಕೆ ನನ್ನನ್ನು ಕ್ರಮಿನಲ್ ಎಂಬಂತೆ ಬಿಂಬಿಸಿವೆ. ಹೀಗಾಗಿ ಈ ಸಮಯದಲ್ಲಿ ಭಾರತಕ್ಕೆ ಬಂದರೆ ನನ್ನ ಪರವಾದ ನ್ಯಾಯ ಸಿಗುವುದು ಕಷ್ಟ’ ಎಂದೂ ಹೇಳಿದ್ದಾರೆ.