
ನವದೆಹಲಿ (ಪಿಟಿಐ): ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್–1 ಬಿ ವೀಸಾ ತೆಗೆದುಹಾಕಬೇಕೆಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಭಾರತ ಆತಂಕ ವ್ಯಕ್ತಪಡಿಸಿದೆ.
‘ಇಂತಹ ನಿರ್ಧಾರವು ರಫ್ತು ಆಧರಿಸಿದ ಪ್ರಗತಿ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಶನಿವಾರ ಇಲ್ಲಿ ನಡೆದ ಅಂತರರಾಷ್ಟ್ರೀಯ ಹಣಕಾಸು ನಿಧಿ ಕಾರ್ಯಕ್ರಮದಲ್ಲಿ ಹೇಳಿದರು.
ಭಾರತದಂತಹ ದೇಶಗಳ ತಂತ್ರಜ್ಞರಿಗೆ ಉದ್ಯೋಗ ವೀಸಾ ನೀಡುತ್ತಿದ್ದ ಅಮೆರಿಕದ ಎಚ್–1 ಬಿ ಕಾರ್ಯಕ್ರಮವನ್ನೇ ರದ್ದುಗೊಳಿಸುವ ಇಂಗಿತವನ್ನು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದರು.
ಹೆಚ್ಚಿನ ಕೌಶಲ ಇರುವ ಅಮೆರಿಕನ್ನರ ವಲಸೆ ತಡೆಯಬೇಕಿದೆ. ಹೀಗಾಗಿ ಭಾರತದಂತಹ ರಾಷ್ಟ್ರಗಳಿಂದ ಎಚ್–1ಬಿ ವೀಸಾ ಪಡೆದು ಬರುವ ನೌಕರರನ್ನು ತೆಗೆದು ಹಾಕಿ ಆ ಜಾಗಕ್ಕೆ ನಮ್ಮದೇ ದೇಶದ ಪರಿಣಿತರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಟ್ರಂಪ್ ತಮ್ಮ ವೆಬ್ಸೈಟ್ನಲ್ಲಿ ಈ ಹಿಂದೆ ಪ್ರಕಟಿಸಿದ್ದರು.
ಎಚ್–1 ಬಿ ವೀಸಾ ರದ್ದುಗೊಂಡರೆ ಮಧ್ಯಮಾವಧಿಯಲ್ಲಿ ಶೇ 8ರಿಂದ 10ರಷ್ಟು ರಫ್ತು ಆಧರಿಸಿದ ಪ್ರಗತಿ ದಾಖಲಿಸಲು ಸಾಧ್ಯವಿಲ್ಲ. ಟ್ರಂಪ್ ಹೇಳಿಕೆ ನಿಜಕ್ಕೂ ಆತಂಕಕಾರಿ ಎಂದು ಸುಬ್ರಮಣಿಯನ್ ವಿಶ್ಲೇಷಿಸಿದ್ದಾರೆ.