
ಆಗ್ರಾ: ವಿಎಚ್ಪಿ ಮುಖಂಡ ಅರುಣ್ ಮಹೋರ್ನ ಹತ್ಯೆ ಪ್ರಕರಣದಿಂದ ಆಗ್ರದಲ್ಲಿ ಕೋಮು ದಳ್ಳುರಿ ಹತ್ತಿ ಉರಿಯುತ್ತಿರುವಾಗಲೇ, 15 ವರ್ಷದ ಮುಸ್ಲಿಂ ಬಾಲಕಿಯೊಬ್ಬಳು 6 ವರ್ಷ ವಯಸ್ಸಿನ ಹಿಂದೂ ವಿದ್ಯಾರ್ಥಿನಿಯನ್ನು ಅಪಹರಣಕಾರರಿಂದ ರಕ್ಷಿಸಿದ್ದಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಂದ `ರಾಣಿ ಲಕ್ಷ್ಮೀಬಾಯಿ ಶೌರ್ಯ’ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸೌಹಾರ್ದತೆಯ ಪಾಠ ಸಾರಿದ್ದಾಳೆ.
ಆ ಶೌರ್ಯವಂತ ಹೆಣ್ಣಮಗಳ ಹೆಸರು ನಾಜಿಯಾ. ಈಕೆ ಸಗೀರ್ ಫಾತಿಮಾ ಮೊಹಮ್ಮದೀಯ ಬಾಲಕಿಯರ ಇಂಟರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ ಆಗಸ್ಟ್ 7ರಂದು ಈಕೆ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬಾಲಕಿಯೊಬ್ಬಳನ್ನು ಇಬ್ಬರು ಯುವಕರು ಬೈಕ್ನಲ್ಲಿ ಬಲವಂತವಾಗಿ ಎಳೆದೊಯ್ಯುತ್ತಿದ್ದರು. ಆ ಬಾಲಕಿ ಕಾಪಾಡುವಂತೆ ಚೀರಾಡುತ್ತಿದ್ದಳು. ಕೂಡಲೇ ತನ್ನ ಪ್ರಾಣದ ಹಂಗು ತೊರೆದ ನಜಿಯಾ ಓಡಿ ಹೋಗಿ ಆ ಬಾಲಕಿಯನ್ನು ಅಪಹರಣಕಾರರಿಂದ ಎಳೆ ತಂದಳು. ನಂತರ ಅಪಹರಣಕಾರರು ಸ್ಥಳದಿಂದಲೇ ಓಟ ಕಿತ್ತರು.
ಅಪಹರಣಕಾರರಿಂದ ಪಾರಾದ ಬಾಲಕಿ ಹೆಸರು ಡಿಂಪಿ. ಯಾವುದೇ ಮತ-ಧರ್ಮ ನೋಡದೆ ಪ್ರಾಣದ ಹಂಗನ್ನು ತೊರೆದು ಆಕೆ ಹಿಂದೂ ಬಾಲಕಿಯನ್ನು ರಕ್ಷಿಸಿದ್ದಳು. ಇಂದು ಅದೇ ಗ್ರಾಮದಲ್ಲಿ ಕೋಮು ದ್ವೇಷ ಹೊತ್ತು ಉರಿಯುತ್ತಿದೆ. ಡಿಂಪಿ ಪಾಲಕರು ನಾಜಿಯಾಳನ್ನು ತಮ್ಮ ಸ್ವಂತ ಮಗಳಿಗಿಂತಲೂ ಹೆಚ್ಚು ಪ್ರೀತಿಯಿಂದ ಆದರಿಸುತ್ತಿದ್ದಾರೆ.
ಆ ದಿನ ನಾನು ಸ್ವಾಭಾವಿಕವಾಗಿ ಆಕೆಯನ್ನು ರಕ್ಷಿಸಲು ಮುಂದಾದೆ. ಆಗ ನನ್ನ ಸುರಕ್ಷತೆಯ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ. ಅಂದು ಮಧ್ಯಾಹ್ನ 12.30ರ ಸಮಯವಿರಬಹುದು. ನಾನು ಮನೆಯತ್ತ ತೆರಳುತ್ತಿದ್ದಾಗ ಡಿಂಪಿ ಕಾಪಾಡಿ ಎಂದು ಚೀರುತ್ತಿದ್ದಳು. ಕೂಡಲೇ ಓಡಿ ಹೋಗಿ ಆಕೆಯ ಕೈ ಹಿಡಿದು ಅಪಹರಣಕಾರರಿಂದ ಎಳೆತಂದೆ ಎಂದು ಪ್ರಶಸ್ತಿ ಸ್ವೀಕರಿಸಿದ ನಜಿಯಾ ತಿಳಿಸಿದ್ದಾಳೆ.
2 ನಿಮಿಷಗಳ ಕಾಲ ನಾನು ಯುದ್ಧವನ್ನೇ ನಡೆಸಬೇಕಾಯಿತು. ಅವರು ಆಕೆಯನ್ನು ಬೈಕ್ನತ್ತ ಎಳೆಯುತ್ತಿದ್ದರು, ನಾನು ಆಕೆಯನ್ನು ನನ್ನತ್ತ ಎಳೆಯುತ್ತಿದ್ದೆ. ಅಪಹರಣಕಾರರು ಕೊನೆಗೆ ಪ್ರಯತ್ನ ಕೈಬಿಟ್ಟು ಅಲ್ಲಿಂದ ಪರಾರಿಯಾದರು ಎಂದು ವಿವರಿಸಿದಳು.
ಈ ಘಟನೆ ನನ್ನ ಶಾಲೆಯಿಂದ 100 ಮೀಟರ್ ಅಂತರದಲ್ಲಿ, ಸದರ್ಭಾಟ್ಟಿ ಪ್ರದೇಶದಲ್ಲಿ ನಡೆಯಿತು. ಕೂಡಲೇ ಡಿಂಪಿಯನ್ನು ರಕ್ಷಿಸಿ, ಪ್ರಿನ್ಸಿಪಾಲರಿಗೆ ಮಾಹಿತಿ ನೀಡಿದೆ. ಡಿಂಪಿ ಅಳುತ್ತಿದ್ದಳು. ಶಾಲೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಆಕೆಯನ್ನು ನಾನು ಅವರ ಮನೆಗೆ ಕರೆದೊಯ್ದೆ. ಇದೀಗ ಆಕೆಯ ಪೋಷಕರು ನನ್ನನ್ನು ತಮ್ಮ ಸ್ವಂತ ಮಗಳಂತೆ ಆದರಿಸುತ್ತಾರೆ ಎಂದಳು.
ನಾಜಿಯಾಗೆ ಶೌರ್ಯ ಪ್ರಶಸ್ತಿ ಲಭಿಸಿರುವುದರ ಬಗ್ಗೆ ಡಿಂಪಿಯನ್ನು ಕೇಳಿದಾಗ, ದೀದಿಗೆ ಈ ಪ್ರಶಸ್ತಿ ಬಂದಿರುವುದು ಸಂತಸ ಎಂದಿದ್ದಾಳೆ. ಆ ದಿನ ದೀದಿ ಇರಲಿಲ್ಲ ಎಂದರೆ ಅವರು ನನ್ನನ್ನು ಹೊತ್ತೊಯ್ಯುತ್ತಿದ್ದರು ಎಂದು ಹೇಳಿದಳು.
ನಮ್ಮ ಶಾಲೆಯಲ್ಲಿ ಯಾವುದೇ ಮತ-ಧರ್ಮ ಬೇಧವಿಲ್ಲ. ಧರ್ಮ ಎಂಬುದು ನಂಬಿಕೆ. ಹಾಗಾಗಿ ನಮ್ಮ ವಿದ್ಯಾರ್ಥಿಗಳಲ್ಲಿ ಯಾವುದೇ ಧರ್ಮ ಬೇಧವಿಲ್ಲ. ನಮ್ಮ ಶಾಲೆಯ ಮುಸ್ಲಿಂ ಬಾಲಕಿಯರು ಸಂಸ್ಕøತ ಕಲಿಯುತ್ತಾರೆ. ಹಿಂದೂ ಬಾಲಕಿಯರು ಉರ್ದು ಕಲಿಯುತ್ತಾರೆ ಎಂದು ಶಾಲೆಯ ವ್ಯವಸ್ಥಾಪಕ ಹಾಜಿ ಜಮಿಲುದ್ದೀನ್ ಖುರೇಶಿ ತಿಳಿಸಿದರು. ಸದರಿ ಪ್ರಶಸ್ತಿಯು ಪ್ರಮಾಣ ಪತ್ರ ಹಾಗೂ ಒಂದು ಲಕ್ಷ ರೂ. ನಗದು ಹಣ ಹೊಂದಿದೆ.