
ನವದೆಹಲಿ: ಸಾಲ ಮಾಡಿ ಬಂಧನ ಭೀತಿ ಎದುರಿಸುತ್ತಿರುವ ಮದ್ಯದೊರೆ ವಿಜಯ್ ಮಲ್ಯ ಈಗಾಗಲೇ ಭಾರತ ಬಿಟ್ಟು ಇಂಗ್ಲೆಂಡ್ಗೆ ಹೋಗಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಉದ್ಯಮಿ ವಿಜಯ್ ಮಲ್ಯ ಅವರು ದೇಶ ತೊರೆಯದಂತೆ ನಿರ್ಬಂಧ ವಿಧಿಸಬೇಕು ಎಂದು 17 ಬ್ಯಾಂಕ್ಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಮಾರ್ಚ್ 2 ರಂದು ಮಲ್ಯ ದೇಶವನ್ನು ತೊರೆದಿದ್ದಾರೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ.
ಮಲ್ಯ ಅವರ ಟ್ಟಿಟ್ಟರ್ ಮೆಸೇಜ್ ನೋಡಿದರೆ ಅವರು ಲಂಡನ್ನಲ್ಲಿದ್ದಾರೆ ಎನ್ನುವುದು ತಿಳಿಯುತ್ತದೆ. ಕೋರ್ಟ್ ಆದೇಶ ನೀಡಿದರೆ ಅವರು ದೇಶಕ್ಕೆ ವಾಪಸ್ ಬರಹುದು ಎಂದು ಹೇಳಿದ್ದಾರೆ.
ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಲ್ಯಗೆ ನೋಟೀಸ್ ಜಾರಿ ಮಾಡಿ 2 ವಾರದ ಒಳಗಡೆ ಉತ್ತರಿಸುವಂತೆ ಸೂಚಿಸಿದೆ. ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ವಿಜಯ್ ಮಲ್ಯ ಅವರಿಗೆ ನೋಟಿಸ್ ರವಾನೆಯಾಗಲಿದೆ.
ಮಲ್ಯ ಇಂಗ್ಲೆಂಡಿಗೆ ಹೋಗಿದ್ದಾರೆ ಎನ್ನುವುದು ಗೊತ್ತಾಗಿದ್ದರೂ ಖಚಿತವಾಗಿರಲಿಲ್ಲ. ಆದರೆ ಈಗ ಸರ್ಕಾರವೇ ವಿಜಯ್ ಮಲ್ಯ ಇಂಗ್ಲೆಂಡಿನಲ್ಲಿದ್ದಾರೆ ಎಂದು ಹೇಳುವ ಮೂಲಕ ಈ ಗೊಂದಲಕ್ಕೆ ತೆರೆ ಎಳೆದಿದೆ.